ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿನಿ ಯುಪಿಎಸ್‌ಸಿ ಯಶೋಗಾಥೆ

Last Updated 21 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಬಾಣೂರಿನ ಬಿ.ಯಶ್ವಸ್ವಿನಿ ಅವರು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಪರೀಕ್ಷೆಯಲ್ಲಿ 293ನೇ ರ್ಯಾಂಕ್‌ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಿ ಸಾಧನೆ ಮರೆದಿದ್ದಾರೆ. ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ಧತೆಯಲ್ಲಿ ತೊಡಗಿರುವ ಸ್ಪರ್ಧಾರ್ಥಿಗಳಿಗೆ ಈ ಪ್ರತಿಭೆಯ ಸಾಧನೆ ದಾರಿದೀಪ. ಪರೀಕ್ಷೆಗೆ ತಯಾರಿ, ಯಶಸ್ಸಿನ ಹಾದಿಯ ಕುರಿತು ಯಶಸ್ವಿನಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ಯುಪಿಎಸ್‌ಸಿ ಪರೀಕ್ಷೆ ಗುರಿ ನಿಮ್ಮಲ್ಲಿ ಮೊಳಕೆಯೊಡೆದಿದ್ದು ಯಾವಾಗ?

ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಈ ಪರೀಕ್ಷೆಯ ಗುರಿ ಮನಸ್ಸಿನಲ್ಲಿ ಗರಿಗೆದರಿತ್ತು. ಬಿ.ಇ ವ್ಯಾಸಂಗ ಮಾಡುವಾಗ ಸ್ಪಷ್ಟವಾಗಿ ನಿರ್ಧಾರ ತಳೆದೆ. 2017ರಲ್ಲಿ ಬಿ.ಇ ಮುಗಿಸಿದ ತಕ್ಷಣ ತಯಾರಿ ಶುರು ಮಾಡಿದೆ.

* ತಯಾರಿ ಹೇಗಿತ್ತು..? ಕೋಚಿಂಗ್‌ಗೆ ಹೋಗಿದ್ದಿರಾ..?

ಬಿ.ಇ ಮುಗಿಸಿ ಉದ್ಯೋಗಕ್ಕೆ ಸೇರಲಿಲ್ಲ. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುವುದಾಗಿ ಪೋಷಕರಿಗೆ ತಿಳಿಸಿದೆ. ಅವರು ಒಪ್ಪಿದರು. ನವದೆಹಲಿಯಲ್ಲಿ ವಾಜೀರಾಂ & ರವಿ ತರಬೇತಿ ಕೇಂದ್ರದಲ್ಲಿ 10 ತಿಂಗಳು ಕೋಚಿಂಗ್‌ ಪಡೆದೆ. ಬೇಸಿಕ್ಸ್‌ ನಿಟ್ಟಿನಲ್ಲಿ ಕೋಚಿಂಗ್‌ ಸಹಕಾರಿಯಾಯಿತು. 6ರಿಂದ10ನೇ ತರಗತಿವರೆಗಿನ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಕೋಚಿಂಗ್‌ ಸೇರುವುದಕ್ಕೂ ಮುನ್ನ ಅಭ್ಯಾಸ ಮಾಡಿದ್ದೇ. ಕೋಚಿಂಗ್‌ನಲ್ಲಿ ಕಲಿಸಿದ್ದನ್ನು ಮಾತ್ರ ಓದಿದರೆ ಸಾಲದು. ದಿನಪತ್ರಿಕೆಗಳು, ನಿಯತಕಾಲಿಕೆಗಳನ್ನು ನಿಯಮಿತವಾಗಿ ಓದುತ್ತಿದ್ದೆ. ಈ ಪರೀಕ್ಷೆಗಾಗಿಯೇ ಸ್ಟಾಂಡರ್ಡ್‌ ಸೆಟ್‌ ಅಫ್‌ ಪುಸ್ತಕಗಳು ಇವೆ, ಅವುಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ದೆ. ಪುನರಾವರ್ತೆ ಮಾಡಿ ವಿಷಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದೆ. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದೆ.

*ಪರೀಕ್ಷೆಗೆ ಸಿದ್ಧರಾಗಲು ಕನಿಷ್ಠ ಎಷ್ಟು ಕಾಲಾವಕಾಶ ಬೇಕು? ದಿನಕ್ಕೆ ಎಷ್ಟು ಗಂಟೆ ಅಧ್ಯಯನ ಮಾಡುತ್ತಿದ್ದೀರಿ?

ಪದವಿ ಮುಗಿದ ನಂತರ ಪಟ್ಟುಹಿಡಿದು ತಯಾರಿ ಮಾಡಿದರೆ ಒಂದು ವರ್ಷ ಸಾಕು. ಪರಿಶ್ರಮ, ಸತತ ಅಧ್ಯಯನ, ಸಾಧಿಸುವ ಛಲ, ‘ಸ್ಮಾರ್ಟ್‌ ವರ್ಕ್’ ಜಾಣ್ಮೆ ಇದ್ದರೆ ಯಶಸ್ಸು ಸಾಧಿಸಬಹುದು. ತಯಾರಿ ಆರಂಭಿಸಿದಾಗಿನಿಂದ ದಿನಕ್ಕೆ 12ರಿಂದ 14 ಗಂಟೆ ಅಧ್ಯಯನ ಮಾಡುತ್ತಿದ್ದೆ.

*ಐಚ್ಛಿಕ ವಿಷಯವಾಗಿ ಯಾವುದನ್ನು ಆಯ್ಕೆ ಮಾಡಿಕೊಂಡಿದ್ದಿರಿ, ಯಾಕೆ?

ಮಾನವಶಾಸ್ತ್ರವನ್ನು (ಆಂಥ್ರಪಾಲಜಿ) ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದೆ. ಪಿಯುಸಿಯಲ್ಲಿ ಜೀವವಿಜ್ಞಾನ ಓದಿದ್ದೆ. ಮಾನವಶಾಸ್ತ್ರಕ್ಕೂ ಜೀವವಿಜ್ಞಾನಕ್ಕೂ ಸಹಸಂಬಂಧ ಇದೆ. ಹೀಗಾಗಿ ಆಯ್ಕೆ ಮಾಡಿಕೊಂಡಿದ್ದೆ.

*ಈ ಪರೀಕ್ಷೆ ತೆಗೆದುಕೊಳ್ಳಲು ನಿಮಗೆ ಸ್ಫೂರ್ತಿ ಯಾರು?

ನಮ್ಮ ಮನೆಯಲ್ಲಿ ಯಾರೂ ಈ ಪರೀಕ್ಷೆ ಪಾಸು ಮಾಡಿಲ್ಲ, ನಾನೇ ಮೊದಲು. ಈ ಪರೀಕ್ಷೆ ಬಗ್ಗೆ ಮಾರ್ಗದರ್ಶನ (ಹೀಗೆ ಓದಬೇಕು, ಇಂಥ ಪುಸ್ತಕ ಓದಬೇಕು…) ನೀಡುವಷ್ಟು ಜ್ಞಾನ ಕುಟುಂಬದಲ್ಲಿ ಯಾರಿಗೂ ಇರಲಿಲ್ಲ. ಪರೀಕ್ಷೆ ತೆಗೆದುಕೊಳ್ಳುತ್ತೇನೆ ಎಂದಾಗ ತಂದೆ–ತಾಯಿ ಸಮ್ಮತಿಸಿ ಪ್ರೋತ್ಸಾಹ ನೀಡಿದರು. ಸ್ಫೂರ್ತಿ, ರೋಲ್‌ಮಾಡೆಲ್‌ ಅಂಥ ಯಾರು ಇರಲಿಲ್ಲ.

ಸ್ಪರ್ಧಾರ್ಥಿಗಳಿಗೆ ನಿಮ್ಮ ಸಲಹೆ…

ಕಲಾ, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ ಯಾವುದೇ ಪದವಿ ಪಡೆದವರೂ ಈ ಪರೀಕ್ಷೆ ಬರೆಯಲು ಅವಕಾಶ ಇದೆ. ಎಲ್ಲದಕ್ಕಿಂತ ಮೊದಲು ಆತ್ಮವಿಶ್ವಾಸ ಇರಬೇಕು. ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ನನಗೆ ಆಗಲ್ಲ ಎಂದು ಮೊದಲೇ ಕೈಚೆಲ್ಲಬಾರದು. ಗಟ್ಟಿಮನಸ್ಸು ಮಾಡಿ ದೃಢ ಹೆಜ್ಜೆ ಇಟ್ಟರೆ ಖಂಡಿತವಾಗಿಯೂ ಯಶಸ್ಸು ಸಾಧಿಸಲು ಸಾಧ್ಯ ಇದೆ. ಇಂಗ್ಲಿಷ್‌ ಕಷ್ಟ ಇತ್ಯಾದಿ ನಕಾರಾತ್ಮಕ ಯೋಚನೆಗಳಿರಬಾರದು. ನಾನು ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ, ಹಳ್ಳಿ ಶಾಲೆಯಲ್ಲೇ ಅಧ್ಯಯನ ಮಾಡಿದ್ದು.

ಶೈಕ್ಷಣಿಕ ಹಾದಿ...

ಯಶಸ್ವಿನಿ.ಬಿ ಅವರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶಿಕ್ಷಕ ಬಿ.ಎಸ್‌.ಬಸವರಾಜಪ್ಪ, ಗೃಹಿಣಿ ಪಿ.ವಿ.ಇಂದಿರಾ ದಂಪತಿ ಪುತ್ರಿ. ಯಶಸ್ವಿನಿ ಅವರು ಬಾಣೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ್ದಾರೆ. ಕಡೂರಿನ ದೀಕ್ಷಾ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿದ್ದಾರೆ. ಶಿವಮೊಗ್ಗದ ಅರಬಿಂದೊ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿದ್ದಾರೆ. ‌ಬೆಂಗಳೂರಿನ ಆರ್‌.ವಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ (ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌) ಪದವಿ ಮುಗಿಸಿದ್ದಾರೆ. ಎಸ್‌ಎಸ್‌ಎಲ್‌ಸಿ–ಶೇ 96, ಪಿಯುಸಿ(ವಿಜ್ಞಾನ)– ಶೇ 98 ಹಾಗೂ ಬಿ.ಇ– 9.6(ಸಿಜಿಪಿಎ) ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT