ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಆಧರಿಸಿ ಇತ್ಯರ್ಥಪಡಿಸಿ: ರವಿ

Last Updated 28 ನವೆಂಬರ್ 2017, 6:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದತ್ತಪೀಠ ವಿವಾದವನ್ನು ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಸರ್ಕಾರವು ಮುಜರಾಯಿ, ಕಂದಾಯ ದಾಖಲೆ ಆಧರಿಸಿ ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ದತ್ತಾತ್ರೇಯ ಪೀಠವೇ ಈಗಿರುವ ಸರ್ವೆ ನಂ195ರ ದತ್ತಾತ್ರೇಯ ಪೀಠ (ಐ.ಡಿ) ಗ್ರಾಮ ಹಾಗೂ ನಾಗೇನಹಳ್ಳಿಯ ಸರ್ವೆ ನಂ57ರಲ್ಲಿ ಬಾಬಾಬುಡನ್‌ ದರ್ಗಾ ಇದೆ ಎಂಬುದು ಸರ್ಕಾರಿ ದಾಖಲೆಗಳಲ್ಲೇ ಇದೆ. ಸರ್ಕಾರಕ್ಕೆ ಹಲವು ಬಾರಿ ದಾಖಲೆ ಸಲ್ಲಿಸಲಾಗಿದೆ. ಸರ್ಕಾರ ನೇಮಿಸಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್‌ ನೇತೃತ್ವದ ಸಮಿತಿಗೂ ದಾಖಲೆ ಒದಗಿಸಲಾಗಿದೆ. ದತ್ತ ಪೀಠವೇ ಬೇರೆ, ಬಾಬಾಬುಡನ್‌ ದರ್ಗಾವೇ ಬೇರೆ ಎಂಬುದನ್ನು ಸಮಿತಿಗೆ ತಿಳಿಸಿದ್ದೇವೆ. ಎಲ್ಲವನ್ನು ಪರಿಶೀಲಿಸಿ ನ್ಯಾಯ ಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಹೇಳಿದರು.

‘ದತ್ತ ಪೀಠವನ್ನು ದತ್ತ ಭಕ್ತರಿಗೆ ವಹಿಸಬೇಕು. ಬಾಬಾಬುಡನ್‌ ದರ್ಗಾಕ್ಕೆ ನಡೆದುಕೊಳ್ಳುವವರಿಗೆ ದರ್ಗಾವನ್ನು ವಹಿಸಬೇಕು. ದತ್ತಪೀಠ ಮುಕ್ತಿಗೊಳಿಸಬೇಕು ಎಂಬ ಸಂಕಲ್ಪ ಮಾಡಿದ್ದೇವೆ. ಈ ಸಂಕಲ್ಪ ಶೀಘ್ರದಲ್ಲಿ ಈಡೇರಲಿದೆ ಎಂಬ ವಿಶ್ವಾಸ ಇದೆ’ ಎಂದರು.

‘ರಾಜ್ಯವು ರಾಜಕೀಯ ಧ್ರುವೀಕರಣ ಹಂತದಲ್ಲಿ ನಿಂತಿದೆ. ರಾಷ್ಟ್ರವಾದಿಗಳು ಒಂದೆಡೆಯಾದರೆ, ರಾಷ್ಟ್ರವಾದಿಗಳನ್ನು ವಿರೋಧಿಸುವ ವಿವಿಧ ಗುಂಪುಗಳು ಇನ್ನೊಂದೆಡೆ. ಯಾರು ಬೇಕು ಎಂಬುದನ್ನು ಜನ ತೀರ್ಮಾನಿಸಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಜಾತೀಯತೆ ಮತ್ತು ಅಸ್ಪ್ರಶ್ಯತೆ ಹಿಂದೂ ಸಮಾಜಕ್ಕೆ ಅಂಟಿರುವ ಕಾರ್ಕೋಟಕ ವಿಷ, ಅವುಗಳನ್ನು ಮುಕ್ತಿಗೊಳಿಸಬೇಕು ಎಂದು ಸಾಧುಸಂತರು ಉಡುಪಿಯ ಧರ್ಮ ಸಂಸತ್‌ನಲ್ಲಿ ಸಂಕಲ್ಪ ಮಾಡಿರುವುದು ಸ್ವಾಗತಾರ್ಹ. ಸಂವಿಧಾನದಲ್ಲಿ ಅಶ್ಪೃಶ್ಯತೆ ನಿಷೇಧಿಸಲಾಗಿದೆ. ಆದರೆ, ಸಮಾಜದಲ್ಲಿ, ಮನೆಮನೆಗಳಲ್ಲಿ ಅಸ್ಪ್ರಶ್ಯತೆ ಇದೆ. ಸಾಧುಸಂತರ ಈ ನಿರ್ಧಾರವು ಜಾತ್ಯತೀತ ಭಾರತ ನಿರ್ಮಾಣ ಸಹಕಾರಿಯಾಗಲಿದೆ’ ಎಂದರು.

ಊರಿಗೊಂದು ದೇವಸ್ಥಾನ, ಊರಿಗೊಂದು ಸ್ಮಶಾನ ಎಂಬ ನಿರ್ಣಯವನ್ನು ಧರ್ಮ ಸಂಸತ್‌ನಲ್ಲಿ ಕೈಗೊಳ್ಳಲಾಗಿದೆ. ಸಮಾಜ ದೌರ್ಬಲ್ಯಗಳಿಗಿಂದ ಹೊರಬರಲು ಇದು ಸಹಕಾರಿ. ಈ ನಿರ್ಣಯ ಅನುಷ್ಠಾನಕ್ಕೆ ಎಲ್ಲರೂ ಪ್ರಯತ್ನಿಸಿದರೆ ಅದು ಫಲ ನೀಡುತ್ತದೆ. ದತ್ತಪೀಠ ಮುಕ್ತಿ, ಅಯೋಧ್ಯೆ ರಾಮಮಂದಿರ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

‘ಸಮ್ಮೇಳನಾಧ್ಯಕ್ಷರಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸಾಹಿತಿ ಚಂದ್ರಶೇಖರ ಪಾಟೀಲರಿಗೆ ರಾಜಕಾರಣ ಮಾಡುವ ಚಟ ಇದ್ದರೆ ಪಕ್ಷಗಳ ಮೂಲಕ ಮಾಡಬೇಕು. ಚಂಪಾ ಅವರು ಬಹಳ ಬಾರಿ ಬಿಜೆಪಿ ವಿರುದ್ಧ ಮಾತನಾಡಿದ್ದಾರೆ. ಅವರ ಮನೆಯಲ್ಲೇ ಅವರ ಮಾತು ಕೇಳುವ ಪರಿಸ್ಥಿತಿ ಇಲ್ಲ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT