ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಶಿಕ್ಷಣಕ್ಕೆ ‘ಸೇತುವೆ’ಯಾದ ಮಲ್ಲಣ್ಣ

61 ವರ್ಷಗಳಿಂದ ತುಂಗಾ ನದಿಯಲ್ಲಿ ವಿದ್ಯಾರ್ಥಿಗಳನ್ನು ದಡ ಸೇರಿಸುತ್ತಿರುವ ಕಾಯಕ ಜೀವಿ
Last Updated 2 ಜನವರಿ 2019, 20:18 IST
ಅಕ್ಷರ ಗಾತ್ರ

ಶಿವಮೊಗ್ಗ: ಈ ಒಂಟಿ ಜೀವಕ್ಕೆ ಶಾಲೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳಿಗೂ ಇವರೆಂದರೆ ಅಚ್ಚುಮೆಚ್ಚು. ಮಕ್ಕಳನ್ನು ಕಣ್ತುಂಬಿಕೊಳ್ಳುತ್ತಲೇ ತನ್ನ ದುಃಖ, ದುಮ್ಮಾನ ಮರೆಯುತ್ತಿರುವ ಅಂಬಿಗರಿವರು. ಮಕ್ಕಳ ಶಿಕ್ಷಣಕ್ಕೆ ಸೇತುವೆಯಾಗಿ ಬದುಕು ಸವೆಸುತ್ತಿದ್ದಾರೆ.

ಪೂರ್ವಜರು ಮಾಡುತ್ತಿದ್ದ ಅಂಬಿಗ ವೃತ್ತಿಯನ್ನೇ ಮುಂದುವರಿಸಿರುವ ಮಲ್ಲಣ್ಣ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ದಾರಿದೀಪ. ಶಿವಮೊಗ್ಗ ರಾಮಣ್ಣಶ್ರೇಷ್ಠಿ ಪಾರ್ಕ್‌ ಸಮೀಪದ ತುಂಗಾನದಿಯಲ್ಲಿ ಊರಗಡೂರು, ಮದಾರಿಪಾಳ್ಯ, ಸೂಳೆಬೈಲು, ವಿದ್ಯಾನಗರ, ಇಂದಿರಾನಗರ ಹೀಗೆ ಹತ್ತು ಹಲವು ಊರುಗಳ ಮಕ್ಕಳನ್ನು ಹಲವು ದಶಕಗಳಿಂದ ತೆಪ್ಪ, ಹರಿಗೋಲು ಮೂಲಕ ತುಂಗಾನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಸೇರಿಸುತ್ತಾ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದಾರೆ.

ಮಲ್ಲಣ್ಣಅವರಿಗೆ 76 ವರ್ಷ. ಉತ್ಸಾಹ ಇಂದಿಗೂ ಬತ್ತಿಲ್ಲ. 15 ವರ್ಷ ಇರುವಾಗಲೇ ಹರಿಗೋಲು ಹಿಡಿದ ಅವರು 61 ವರ್ಷಗಳಿಂದ ಕಾಯಕ ಮುಂದುವರೆಸಿದ್ದಾರೆ. ಮಲ್ಲಣ್ಣನ ಬೆನ್ನೆಲುಬಾಗಿದ್ದ ಪತ್ನಿ ನಾಗಮ್ಮ 20 ವರ್ಷಗಳ ಹಿಂದೆಯೇ ತೀರಿಹೋದರು. ಒಬ್ಬ ಪುತ್ರಿ, ಒಬ್ಬ ಪುತ್ರ ಇದ್ದರೂ ಮದುವೆಯಾದ ನಂತರ ಮಲ್ಲಣ್ಣನಿಂದ ದೂರವಿದ್ದಾರೆ. ಒಬ್ಬಂಟಿಯಾಗಿರುವ ಮಲ್ಲಣ್ಣ ಶಾಲೆ ಮಕ್ಕಳನ್ನೇ ತಮ್ಮ ಮಕ್ಕಳೆಂದು ಭಾವಿಸುತ್ತಿದ್ದಾರೆ. ಮಕ್ಕಳು ಪ್ರೀತಿಯಿಂದ ಕೊಡುವ ಬಿಡಿಗಾಸನ್ನೇ ತಮ್ಮ ಖರ್ಚಿಗಾಗಿ ಬಳಸುತ್ತಾರೆ.

ಕೊನೆಯ ಕೊಂಡಿ ಮಲ್ಲಣ್ಣ:ವಿಜಯನಗರ ಅರಸರ ಕಾಲದಿಂದಲೂ ಇವರ ಪೂರ್ವಜರು ತುಂಗಾನದಿಯಲ್ಲಿ ಅಂಬಿಗರ ಕೆಲಸ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಶಿವಪ್ಪನಾಯಕ ಆಡಳಿತ ಸಂದರ್ಭದಲ್ಲಿಯೂ ಮಲ್ಲಣ್ಣ ಅವರ ಪೂರ್ವಜರ ಸೇವೆ ಅಮೂಲ್ಯವಾಗಿದೆ. ಇವರ ಕಾರ್ಯವನ್ನು ಮೆಚ್ಚಿ ಅಂದಿನ ಅರಸರು ಶಿವಮೊಗ್ಗ ತಾಲ್ಲೂಕಿನ ಕೊರಲಹಳ್ಳಿಯಲ್ಲಿ ಜಮೀನನ್ನು ದಾನವನ್ನಾಗಿ ನೀಡಿದ್ದರು. ಮಲ್ಲಣ್ಣ ನಂತರದ ತಲೆಮಾರು ಈ ವೃತ್ತಿಯಲ್ಲಿ ಆಸಕ್ತಿ ತೋರದ ಕಾರಣ ಇವರೇ ಕೊನೆಯ ಕೊಂಡಿಯಾಗಿದ್ದಾರೆ.

40 ಮಂದಿಗೆ ಪುನರ್ಜನ್ಮ: ಮಲ್ಲಣ್ಣ ತಮ್ಮ ಜೀವಿತಾವಧಿಯಲ್ಲಿ ನೀರಿನಲ್ಲಿ ಮುಳುಗಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದ 40 ಮಂದಿಯನ್ನು ರಕ್ಷಿಸಿದ್ದಾರೆ. ಭಗ್ನ ಪ್ರೇಮಿಗಳು, ಜೀವನದಲ್ಲಿ ನೊಂದವರು ತುಂಗಾನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬಂದಾಗ ಅವರ ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ.

ಮಲ್ಲಣ್ಣನಿಗಾಗಿ ಹರಕೆ ಹೊತ್ತ ಮಕ್ಕಳು:ಮಲ್ಲಣ್ಣ ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದರು. ಈ ಸಂದರ್ಭದಲ್ಲಿ ಶಾಲೆ ಮಕ್ಕಳು ನೊಂದುಕೊಂಡಿದ್ದರು. ಮಲ್ಲಣ್ಣ ಗುಣಮುಖರಾಗಲಿ ಎಂದು ತಾವು ನಂಬಿದ ದೇವರುಗಳಿಗೆ ಹರಕೆ ಹೊತ್ತರು. ಎಲ್ಲರ ಪ್ರಾರ್ಥನೆಯ ಫಲವಾಗಿ ಮಲ್ಲಣ್ಣ ಗುಣಮುಖರಾಗಿ ಪುನಃ ಸೇವೆಗೆ ಹಾಜರಾಗಿದ್ದಾರೆ. ಮಲ್ಲಣ್ಣನನ್ನು ಕಂಡ ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮಲ್ಲಣ್ಣ ದುಶ್ಚಟಗಳಿಂದ ದೂರ. ಮಕ್ಕಳಿಗೂ ದುಶ್ಚಟಗಳ ವಿರುದ್ಧ ಅರಿವು ಮೂಡಿಸುತ್ತಿದ್ದಾರೆ. ಒಂದೆಡೆ ಅನಾರೋಗ್ಯ, ಮತ್ತೊಂದೆಡೆ ಇಳಿವಯಸ್ಸಿನಿಂದಾಗಿ ತೆಪ್ಪ ನಡೆಸಲು ಅಸಾಧ್ಯವಾದರೂ ಮಕ್ಕಳನ್ನು ಕಂಡಾಗ ಮಲ್ಲಣ್ಣ ಎಲ್ಲವನ್ನೂ ಮರೆತು ಹರಿಗೋಲು ಹಿಡಿಯುತ್ತಾರೆ. ವೃದ್ಧಾಪ್ಯ ವೇತನ, ತೆಪ್ಪದಿಂದ ಸಿಗುವ ಬಿಡಿಗಾಸೇ ಆಧಾರ. ಸಂಧ್ಯಾಕಾಲದಲ್ಲಿ ಸರ್ಕಾರ ನೆರವಿನ ಹಸ್ತ ಚಾಚಲಿ ಎಂಬುದು ಮಲ್ಲಣ್ಣನ ಬೇಡಿಕೆ.

ಎಲ್ಲಾ ಧರ್ಮದವರಿಗೂ ಅಚ್ಚುಮೆಚ್ಚು

ಮಲ್ಲಣ್ಣ ಅವರನ್ನು ಎಲ್ಲಾ ಧರ್ಮದವರು ಗೌರವದಿಂದ ಕಾಣುತ್ತಾರೆ. ಪ್ರತಿಯೊಂದು ಮನೆಯವರೊಟ್ಟಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಮುಸ್ಲಿಮರು ಮಲ್ಲ ದಾ, ಹಿಂದೂಗಳು ಮಲ್ಲಣ್ಣ, ಕೆಲವರು ಮಲ್ಲಪ್ಪ ಎಂದು ಕರೆಯುತ್ತಾರೆ. ತಮ್ಮ ಹಬ್ಬಗಳಂದು ಮಲ್ಲಣ್ಣನನ್ನು ಪ್ರೀತಿಯಿಂದ ಆಹ್ವಾನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT