ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಕೊರತೆ: 1.41 ಲಕ್ಷ ಹೆಕ್ಟೇರ್ ಬೆಳೆ ನಾಶ

7
ಶೇ 85 ರಷ್ಟು ಒಣಗಿದ ಶೇಂಗಾ

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಕೊರತೆ: 1.41 ಲಕ್ಷ ಹೆಕ್ಟೇರ್ ಬೆಳೆ ನಾಶ

Published:
Updated:

ಚಿತ್ರದುರ್ಗ: ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ 3.58 ಲಕ್ಷ ಹೆಕ್ಟೇರ್‌ ಪ್ರದೇಶದ ಬಿತ್ತನೆ ಗುರಿಯಲ್ಲಿ 2.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸರಿಯಾದ ಸಮಯಕ್ಕೆ ಮಳೆಯಾಗದ ಪರಿಣಾಮ 1.41 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಇದರಿಂದ ಜಿಲ್ಲೆಯ ಬಹುತೇಕ ರೈತರಿಗೆ ಬರದ ಭೀತಿ ಕಾಡುತ್ತಿದೆ.

ಜಿಲ್ಲೆಯ ನಿಗದಿತ ಗುರಿಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಶೇ 73 ರಷ್ಟು ಬಿತ್ತನೆ ಆಗಿದ್ದು, ಕೃಷಿಯಲ್ಲಿ ನಿರೀಕ್ಷಿತ ಇಳುವರಿ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ತೇವಾಂಶ ಕೊರತೆಯಿಂದಾಗಿ ಪ್ರಮುಖ ಬೆಳೆಗಳು ಒಣಗಿದ್ದು, ಅನ್ನದಾತರು ಆತಂಕದ ಸ್ಥಿತಿಯಲ್ಲಿದ್ದಾರೆ.

ಮುಂಗಾರಿನಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಅನ್ನದಾತರ ಮೊಗದಲ್ಲಿ ಮಂದಹಾಸವೇ ಮರೆಯಾಗಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಜಿಲ್ಲೆಯಲ್ಲಿ ಬಿತ್ತನೆ ಆಗಿರುವ ಪ್ರಮಾಣದಲ್ಲಿ ಅರ್ಧದಷ್ಟಾದರು ಬೆಳೆ ಕೈಗೆ ಸಿಗಬಹುದು ಎಂಬ ಭರವಸೆಯೂ ರೈತ ಸಮುದಾಯದಲ್ಲಿ ಇಲ್ಲದಂತಾಗಿದೆ. ಬಹುತೇಕ ಭಾಗಗಳಲ್ಲಿ ಇನ್ನುಳಿದ ಕೆಲ ಬೆಳೆಗಳನ್ನು ಉಳಿಸಿಕೊಳ್ಳಲು ಮಳೆ ಅನಿವಾರ್ಯವಾಗಿದ್ದು, ಈಗಲೂ ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ. ಉತ್ತಮ ಮಳೆಯಾದರೂ ಬಿತ್ತನೆ ಸಮಯದಲ್ಲಿ ಮಳೆ ಸರಿಯಾದ ಪ್ರಮಾಣದಲ್ಲಿ ಆಗಿಲ್ಲ. ಹಾಗಾಗಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಜತೆಗೆ ಶೇ 33 ರಷ್ಟು ಬೆಳೆಗಳು ಒಣಗುತ್ತಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ್ ಕಳ್ಳೇನವರ್ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

ಧಾನ್ಯಗಳ ಬಿತ್ತನೆಯ ಗುರಿ 1.54 ಲಕ್ಷ ಹೆಕ್ಟೇರ್. ಇಲ್ಲಿಯವರೆಗೂ 1.37 ಲಕ್ಷ ಹೆಕ್ಟೇರ್ ಬಿತ್ತನೆ ಆಗಿದ್ದು, ಅದರಲ್ಲಿ 47 ಸಾವಿರ ಹೆಕ್ಟೇರ್ ಪ್ರದೇಶದ ಧಾನ್ಯ ನೀರಿಲ್ಲದೆ ಒಣಗಿವೆ. ದ್ವಿದಳ ಧಾನ್ಯದಲ್ಲಿ 34 ಸಾವಿರ ಹೆಕ್ಟೇರ್‌ ಗುರಿಗೆ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ 50 ರಷ್ಟು ಗುರಿ ತಲುಪಲು ಸಾಧ್ಯವಾಗಿಲ್ಲ. 7 ಸಾವಿರ ಹೆಕ್ಟೇರ್ ಪ್ರದೇಶ ಒಣಗಿದೆ. ಅದೇ ರೀತಿ ತೈಲ ಬೀಜ ಉತ್ಪನದಲ್ಲಿ 1.55 ಲಕ್ಷ ಹೆಕ್ಟೇರ್ ಗುರಿ ಇದ್ದು, 98 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. 85 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಒಣಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಬರ ಘೋಷಣೆ; ಕೆಎಸ್‌ಎನ್‌ಡಿಎಂಸಿ ಅಧಿಕೃತ: ಜಿಲ್ಲೆಯ ಯಾವ್ಯಾವ ತಾಲ್ಲೂಕುಗಳು ಬರಪೀಡಿತ ಪ್ರದೇಶ ಎಂಬುದಾಗಿ ಘೋಷಣೆ ಆಗಬೇಕಾದರೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿ ಅಂಶಗಳ ಮಾಹಿತಿಯೇ ಅಧಿಕೃತ. ಅಲ್ಲಿಂದ ಘೋಷಣೆ ಆಗದ ಹೊರತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯ ನಡೆಸುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

‘ರಾಜ್ಯ ಸರ್ಕಾರ ಕೂಡ ಮಳೆ ಮಾಪನ, ಬೆಳೆ ಹಾನಿ, ಬೆಳೆ ಪರಿಹಾರ, ಬರ ಮತ್ತು ಇತರೆ ವಿಷಯಗಳಿಗೆ ಕೆಎಸ್‌ಎನ್‌ಡಿಎಂಸಿ ಮಾಹಿತಿಯನ್ನೇ ಅಧಿಕೃತ ಎಂದು ಪರಿಗಣಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ಯಾವ ಭಾಗ ಬರ ಎಂಬುದನ್ನು ಘೋಷಿಸಬೇಕು. ಆ ನಂತರ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪ್ರತಿ ಎಕರೆ ಸರ್ವೇ ನಂಬರ್‌ವಾರು ನಷ್ಟದ ಪ್ರಮಾಣವೆಷ್ಟು ಎಂಬುದರ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಮಾಹಿತಿ ನೀಡಲಿದ್ದಾರೆ’ ಎಂದು ಇಲಾಖೆಗಳ ಕೆಲ ಅಧಿಕಾರಿಗಳು ತಿಳಿಸಿದ್ದಾರೆ.

ಮಾಪನ ಎಲ್ಲಿ?

ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಡಿಜಿಟಲ್‌ ಮಳೆಮಾಪನ ಕೇಂದ್ರಗಳನ್ನು ಅಳವಡಿಸಿದೆ. ಪ್ರತಿದಿನ ಬೆಳಿಗ್ಗೆ 8 ಕ್ಕೆ ಬೆಂಗಳೂರು ಯಲಹಂಕದಲ್ಲಿರುವ ನಿಯಂತ್ರಣ ಕಚೇರಿಯಲ್ಲಿ ಮಾಹಿತಿ ದಾಖಲಾಗುತ್ತಿದ್ದು, ಬರ ಎಂಬುದಾಗಿ ಘೋಷಣೆಯಾದ ನಂತರವೇ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !