ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

78 ಜೋಡಿ ಕಲ್ಯಾಣ ಮಹೋತ್ಸವ

Last Updated 6 ಜೂನ್ 2011, 5:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಸವಕೇಂದ್ರ ಮತ್ತು ಮುರುಘಾಮಠ ಆಶ್ರಯದಲ್ಲಿ ಭಾನುವಾರ ಮುರುಘಾವನದ ಹುಲ್ಲುಹಾಸಿನ ಮೇಲೆ ಆಯೋಜಿಸಿದ್ದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 78 ಜೋಡಿಗಳು ನವದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಾಯಕ ಜನಾಂಗದ 20, ದಲಿತ ವರ್ಗದ 21, ಲಿಂಗಾಯತ 20, ಕುರುಬ ಸಮಾಜದ 8, ಕುಂಬಾರ 3, ಉಪ್ಪಾರ 4, ಭಜಂತ್ರಿ 2, ನೇಕಾರ 1, ಅಂತರ್‌ಜಾತಿ 1 - ಹೀಗೆ ವಿವಿಧ ಸಮುದಾಯದವರು ಒಂದೇ ಸೂರಿನಡಿ ಬಾಳಸಂಗಾತಿಗಳಾದ ಸನ್ನಿವೇಶಕ್ಕೆ ಬಂಧುಮಿತ್ರರು ಸೇರಿದಂತೆ ಸಾವಿರಾರು ಜನ ಪುಷ್ಪವೃಷ್ಟಿಗೈದು ಹರಿಸಿ ಆಶೀರ್ವದಿಸಿದರು.

ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿದ್ದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮೈಸೂರಿನ ನಂಜುಂಡಸ್ವಾಮಿ ಮಾತನಾಡಿ, ಇದೊಂದು ಅಪರೂಪದ, ಅಂತಃಕರಣದ, ಮಾನವೀಯತೆಯ ಮಹಾಕಾರ್ಯ. 12ನೇ ಶತಮಾನದ ಮುಂದುವರಿದ ಭಾಗವಾಗಿದೆ ಎಂದು ನುಡಿದರು.

ಜಾತಿ-ಮತ ಬೇಧವಿಲ್ಲದೇ ಬಸವಣ್ಣನ ಸರ್ವ ಸಮಾನತೆಯ ತತ್ವದ ಅಡಿಯಲ್ಲಿ ಕಲ್ಯಾಣ ಮಹೋತ್ಸವ ನಡೆಯುತ್ತಿರುವುದು ನಿಜಕ್ಕೂ ಮಾದರಿಯಾಗಿದೆ. ಇದು ಒಂದು ರೀತಿಯ ಚಳವಳಿಯಾಗಿದೆ ಎಂದು ಬಣ್ಣಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಮಾತನಾಡಿ, ಹಕ್ಕಿಯಂತೆ ಹಾರುವ, ಮೀನಿನಂತೆ ಈಜುವುದನ್ನು ಕಲಿತಿರುವ ಮನುಷ್ಯ ಮನುಷ್ಯನಾಗಿ ಬಾಳುವುದನ್ನು ಕಲಿತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸವಣೂರು ಕಲ್ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಕರ್ನಾಟಕದಲ್ಲಿ ಮಠಗಳಿಗೇನು ಕೊರತೆ ಇಲ್ಲ. ಆದರೆ ಮುರುಘಾಮಠದಂತೆ ಉತ್ತಮ ವಾತಾವರಣ ಮತ್ತು ಆಚರಣೆ ತರುವಲ್ಲಿ ಹಿಂದಿರುವುದು ಅಸಮಾಧಾನದ ಸಂಗತಿ. ಸ್ವಾಮಿಗಳ ಕರ್ತವ್ಯವೇನು ಎಂಬುದನ್ನು ಮುರುಘಾ ಶರಣರು ತಮ್ಮ ಕಾರ್ಯಗಳ ಮೂಲಕ ತೋರಿಸಿ ಮಾದರಿ ಎನಿಸಿದ್ದಾರೆ. ಜಗತ್ತಿಗೆ ಶಾಂತಿ, ಸಮಾಧಾನ ಮತ್ತು ನೆಮ್ಮದಿ ಹಂಚುವ ಮೂಲಕ ಸಮಾಜದಲ್ಲಿ ಅಜ್ಞಾನ ಓಡಿಸುವ ಕೆಲಸ ಮುರುಘಾಮಠದಿಂದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಪ್ರತಿಯೊಬ್ಬರು ಪರಿಶ್ರಮದಿಂದ ದುಡಿದು ದೇಶದ ಪ್ರಗತಿಗೆ ಕಾರಣರಾಗಬೇಕು. ಸಣ್ಣರಾಷ್ಟ್ರಗಳು ಪ್ರಗತಿಯ ಹಾದಿಯಲ್ಲಿವೆ. ಭವ್ಯ ಭಾರತ ನಿರ್ಮಾಣ ಸೋಮಾರಿ ಸೋಗಲಾಡಿಗಳಿಂದ ಸಾಧ್ಯವಿಲ್ಲ. ಕಾಯಕ ಜೀವಿಗಳಿಂದ ಮಾತ್ರ ಸಾಧ್ಯ. ಆದರೆ, ಇಂದು ಉಪಕಾರ ಮಾಡುವುದಕ್ಕಿಂತ ಉಪದ್ರವ ಕೊಡುವವರ ಸಂಖ್ಯೆಯೇ ಜಾಸ್ತಿಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸ್ವರ್ಗ ನರಕ ಬೇರೆ ಎಲ್ಲೂ ಇಲ್ಲ. ಅದನ್ನು ಹುಡುಕುವ ಬದಲು ಅದನ್ನು ಸತ್ಕಾರ್ಯ ಮಾಡುವ ಮೂಲಕ ನಮ್ಮ ನಿತ್ಯ ಜೀವನದಲ್ಲಿ ಕಂಡುಕೊಳ್ಳಬಹುದಾಗಿದೆ. ವಿವೇಕಿಗಳು ಸಂಸಾರ ಬಂಧನವಲ್ಲ ಎಂದುಕೊಂಡಿದ್ದಾರೆ. ನಮ್ಮ ಅನೇಕ ದಾರ್ಶನಿಕರು ಸಂಸಾರದಲ್ಲಿದ್ದುಕೊಂಡು ಸನ್ಮಾರ್ಗದಲ್ಲಿ ಕೆಲಸ ಮಾಡಿ ಕಲ್ಯಾಣ ಕಾರ್ಯ ಮಾಡಿದ್ದಾರೆ. ಅವರಿಗೆ ಸಂಸಾರ ಎಂದೂ ಬಂಧನವಾಗಿ ಕಾಡಿಲ್ಲ. ಅಂತಹ ಪಥವನ್ನು ಅನುಸರಿಸುವ ಮೂಲಕ ಬದುಕಿನಲ್ಲಿ ಸನ್ನಡತೆ ರೂಢಿಸಿಕೊಂಡು ಮಿತ ಸಂತಾನ ಹೊಂದಿ ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ಮಾಡಿದರು.

ಜನಸಂಖ್ಯೆ ಹೆಚ್ಚಾದಂತೆ ಮನುಷ್ಯ ತನ್ನ ಸ್ವಾರ್ಥಕ್ಕೆ ಪರಿಸರದ ಮೇಲೆ ದಾಳಿ ನಡೆಸಿ ನಿಸರ್ಗದ ಮುನಿಸಿಗೆ ಕಾರಣವಾಗಿದ್ದಾನೆ. ಪ್ರಕೃತಿ ಸಮತೋಲನ ಕಾಯ್ದುಕೊಂಡಲ್ಲಿ ಮಾತ್ರ ನಮಗೆ ನೆಮ್ಮದಿಯ ಬದುಕಿದೆ. ಸಾಧ್ಯವಾದಷ್ಟು ನಾವು ಗಿಡ ನೆಟ್ಟು ಪರಿಸರ ಕಾಪಾಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಜಯಸ್ವಾಮಿ, ರಾಯಚೂರು ಹಿರೇಮಠದ ಮಲ್ಲಿಕಾರ್ಜುನಸ್ವಾಮಿ, ದಾಸೋಹ ಸೇವಾರ್ಥಿಗಳಾದ ಹೊಳಲ್ಕೆರೆಯ ಡಾ.ಎನ್.ಬಿ. ಸಜ್ಜನ್ ಮತ್ತಿತರರು ಉಪಸ್ಥಿತರಿದ್ದರು.

ಜಮುರಾ ಕಲಾವಿದರು ವಚನ ಸಂಗೀತ ನಡೆಸಿಕೊಟ್ಟರು. ಹಿರಿಯ ಜಾನಪದ ಕಲಾವಿದೆ ಜಗಳೂರಿನ ಭೀಮಕ್ಕ ಅವರು ಸೋಬಾನೆ ಪದ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಸೊಬಗು ತಂದರು. ಎಸ್‌ಜೆಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಎನ್. ವಿಶ್ವನಾಥ್ ಸ್ವಾಗತಿಸಿದರು.  ಜಯಣ್ಣ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಜ್ಞಾನಮೂರ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT