ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು: ಇದ್ದೂ ಇಲ್ಲದಂತಿರುವ ಕೃಷಿ ಮಾರುಕಟ್ಟೆ

ವಿದ್ಯುತ್‌ ಸಂಪರ್ಕ, ನೀರು, ಶೌಚಾಲಯ ವ್ಯವಸ್ಥೆ ಮರೀಚಿಕೆ
Published 8 ಜುಲೈ 2024, 7:30 IST
Last Updated 8 ಜುಲೈ 2024, 7:30 IST
ಅಕ್ಷರ ಗಾತ್ರ

ಮೊಳಕಾಲ್ಮುರು: ವಿದ್ಯುತ್‌ ಸಂಪರ್ಕ ಇಲ್ಲದಿದ್ದರೂ ಅಳವಡಿಸಿರುವ ಬೀದಿ ದೀಪಗಳು, ಕುಡಿಯುವ ನೀರಿನ ಸೌಲಭ್ಯಕ್ಕೆ ಪರದಾಟ, ಸೋರುತ್ತಿರುವ ಗೋದಾಮುಗಳು, ಚರಂಡಿಗಳಲ್ಲಿ ಕೊಳಚೆ, ವ್ಯರ್ಥವಾಗುತ್ತಿರುವ ಕುರಿ ಮಾರುಕಟ್ಟೆ ಪ್ರಾಂಣ.

ಇದು ತಾಲ್ಲೂಕಿನ ರಾಂಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಚಿತ್ರಣ.

ದಶಕಗಳ ಕಾಲ ಚಳ್ಳಕೆರೆ ಕೃಷಿ ಉತ್ಪನ್ನ ಮಾರಕಟ್ಟೆ ವ್ಯಾಪ್ತಿಗೆ ಸೇರಿದ್ದ ಈ ಮಾರುಕಟ್ಟೆಯನ್ನು 4 ವರ್ಷದ ಹಿಂದೆ ಪ್ರತ್ಯೇಕವಾಗಿ ಬೇರ್ಪಡಿಸಲಾಯಿತು. ಆದರೆ ಇಲ್ಲಿ ಕುರಿ, ಮೇಕೆಗಳ ಮಾರಾಟ ಹೊರತುಪಡಿಸಿ ಬೇರೆ ಯಾವುದೇ ವಹಿವಾಟು ನಡೆಯದ ಕಾರಣ ಮಾರುಕಟ್ಟೆ ರೈತರಿಂದ ದೂರವಾಗಿದೆ.

ಅಚ್ಚರಿ ಎಂದರೆ ಜಿಲ್ಲೆಯಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಕುರಿ ಮಾರುಕಟ್ಟೆ ಹೊರತುಪಡಿಸಿದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕುರಿ ಮಾರುಕಟ್ಟೆಗಳ ಪೈಕಿ ಇದು ಅತ್ಯಂತ ದೊಡ್ಡದು ಎಂಬ ಹೆಸರು ಖ್ಯಾತಿಯಿದೆ.

ಹಲವು ವರ್ಷಗಳಿಂದ ಗ್ರಾಮದ ಮುಖ್ಯರಸ್ತೆ ಬದಿ ನಡೆಯುತ್ತಿದ್ದ ಕುರಿ ಮಾರಾಟವನ್ನು ಎಪಿಎಂಸಿ ಆವರಣಕ್ಕೆ 10 ವರ್ಷದ ಸ್ಥಳಾಂತರ ಮಾಡಲಾಯಿತು. 4 ವರ್ಷದ ಹಿಂದೆ ಈ ಮಾರುಕಟ್ಟೆ ಪ್ರತ್ಯೇಕಗೊಂಡು ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರ ಸಮಿತಿ ಅಧಿಕಾರಕ್ಕೆ ಬಂತು. ಇದರ ಅವಧಿ ಪೂರ್ಣಗೊಂಡು ಒಂದೂವರೆ ವರ್ಷ ಕಳೆದರೂ ಹೊಸದಾಗಿ ಚುನಾವಣೆ ನಡೆದಿಲ್ಲ. ಇದು ರಾಜ್ಯಮಟ್ಟದ ಸಮಸ್ಯೆಯಾಗಿದೆ. ಸಮಿತಿಯಲ್ಲಿ 16 ಸದಸ್ಯ ಬಲಾಬಲವಿದೆ ಎಂದು ಮಾರುಕಟ್ಟೆ ಮೇಲ್ವಿಚಾರಕ ರಘುವೀರ್‌ ಹೇಳುತ್ತಾರೆ.

ಸೋಮವಾರ ಮತ್ತು ಶನಿವಾರ ಕುರಿ ವ್ಯಾಪಾರ ನಡೆಯುತ್ತದೆ. ಮೊಳಕಾಲ್ಮುರು, ಸಂಡೂರು, ಕೂಡ್ಲಿಗಿ, ರಾಯದುರ್ಗ, ಬಳ್ಳಾರಿ ತಾಲ್ಲೂಕುಗಳಿಂದ ಕುರಿಗಾಹಿಗಳು ಹಾಗೂ ಮೈಸೂರು., ಬೆಂಗಳೂರು, ತುಮಕೂರು, ಬಳ್ಳಾರಿ, ದಾವಣಗೆರೆಗೆ ಸೇರಿದಂತೆ ದೂರದ ಊರುಗಳಿಂದ ವ್ಯಾಪಾರಿಗಳು ಬರುತ್ತಾರೆ.

‘ಪ್ರತಿದಿನ 4000-5000 ಕುರಿಗಳು ಮಾರುಕಟ್ಟೆಗೆ ಬರುತ್ತವೆ. ಪ್ರತಿ ಕುರಿಗೆ ₹ 5ರಂತೆ ತೆರಿಗೆ ನಿಗದಿಯಾಗಿದ್ದು, ಇದರಲ್ಲಿ ಗುತ್ತಿಗೆದಾರನಿಗೆ ₹ 2, ಮಾರುಕಟ್ಟೆಗೆ ₹ 2 ಮತ್ತು ಕುರಿ ಮಾರಾಟ ಮಂಡಳಿಗೆ ₹ 1 ನಿಗದಿಯಾಗಿದೆ ಎಂದು ರಘುವೀರ್‌ ತಿಳಿಸಿದರು.

ಮಾರುಕಟ್ಟೆ 15.08 ಎಕರೆ ವಿಸ್ತೀರ್ಣದಲ್ಲಿದ್ದು, ಇಲ್ಲಿರುವ 500 ಮೆಟ್ರಕ್‌ ಟನ್‌ನ ಒಂದು, 200 ಮೆಟ್ರಕ್‌ ಟನ್‌ ಸಾಮರ್ಥ್ಯದ 3 ಗೋದಾಮುಗಳ ಪೈಕಿ 2 ಗೋದಾಮುಗಳು ದುರಸ್ತಿಗೆ ಕಾಯುತ್ತಿವೆ. ಕಚೇರಿ ಚಾವಣಿ ಸೋರುತ್ತಿದೆ.

10 ಮಾರಾಟ ಮಳಿಗೆಗಳು, ಗೋದಾಮು, ಆವರಣಕ್ಕೆ ವಿದ್ಯುತ್‌ ಸಂಪರ್ಕವಿಲ್ಲದ ಕಾರಣ ವಹಿವಾಟಿಗೆ, ರಾತ್ರಿ ಬಂದು ಉಳಿಯುವ ಕುರಿಗಾಹಿಗಳಿಗೆ ತೊಂದರೆಯಾಗಿದೆ. ಕುಡಿಯುವ ನೀರಿನ ತೊಟ್ಟಿಗಳು ಪಾಚಿಗಟ್ಟಿವೆ.

‘ವಿದ್ಯುತ್‌ ಸಂಪರ್ಕ ಕಲ್ಪಿಸಲು ಒಂದು ಪರಿವರ್ತಕ ಬೇಕಿದ್ದು, ₹ 5 ಲಕ್ಷ ಅನುದಾನದ ಅಗತ್ಯವಿದೆ’ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಆವರಣದಲ್ಲಿ ಸಾಕಷ್ಟು ಸ್ಥಳವಿರುವ ಜತೆಗೆ ಕುರಿ ಮಾರಾಟಕ್ಕೆ ಪ್ರತ್ಯೇಕ ಪ್ರಾಂಗಣ ನಿರ್ಮಿಸಿದ್ದರೂ ಮಾರುಕಟ್ಟೆ ಮುಖ್ಯಗೇಟ್‌ ಬಳಿಯಲ್ಲೇ  ವ್ಯಾಪಾರ ನಡೆಯುತ್ತದೆ. ಇದರಿಂದ ಮಾರುಕಟ್ಟೆ ಹೊರಗಡೆ, ರಸ್ತೆಬದಿ ಬೇಕಾಬಿಟ್ಟಿಯಾಗಿ ಕುರಿ, ಮೇಕೆಗಳನ್ನು ನಿಲ್ಲಿಸಿಕೊಳ್ಳಲಾಗುತ್ತದೆ. ಪೊಲೀಸ್‌ ಠಾಣೆ ಮುಂಭಾಗದಲ್ಲಿಯೂ ವ್ಯಾಪಾರ ಜೋರಾಗಿರುತ್ತದೆ.

ವಾಹನ ಸಂಚಾರಕ್ಕೆ ಧಕ್ಕೆಯಾಗುತ್ತಿದ್ದರೂ ಪೊಲೀಸರು, ಗ್ರಾಮ ಪಂಚಾಯಿತಿ ಸಂಬಂಧವಿಲ್ಲ ಎಂಬ ರೀತಿ ವರ್ತಿಸುತ್ತಿವೆ. ಪ್ರಾಂಗಣದಲ್ಲಿ ವಹಿವಾಟು ನಡೆದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ವ್ಯಾಪಾರಿ ರುದ್ರಪ್ಪ ಹೇಳಿದರು.

ಗ್ರಾಮಗಳಲ್ಲಿ ದವಸ, ಧಾನ್ಯ ವ್ಯಾಪಾರ ಮಾಡುತ್ತಿರುವವರ ಪಟ್ಟಿ ಮಾಡಿ ಎಪಿಎಂಸಿ ಆವರಣದಲ್ಲಿಯೇ ಬಂದು ವಹಿವಾಟು ಮಾಡುವಂತೆ ಮನವಿ ಮಾಡಲಾಗುವುದು. ಮಾರುಕಟ್ಟೆ ವ್ಯಾಪ್ತಿಗೆ ಎಷ್ಟು ಗ್ರಾಮ ಪಂಚಾಯಿತಿ ಒಳಪಡುತ್ತದೆ ಎಂಬ ಮಾಹಿತಿ ನೀಡುವಂತೆ ಜಿಲ್ಲಾಡಳಿತಕ್ಕೆ ಕೋರಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಬೀದಿ ದೀಪ ಸರಿಪಡಿಸಲು, ವಿದ್ಯುತ್‌ ಸಂಪರ್ಕಕ್ಕೆ, ಸಾಮೂಹಿಕ ಶೌಚಾಲಯ, ರಸ್ತೆಗಳ ನಿರ್ಮಾಣ, ಚರಂಡಿ ದುರಸ್ತಿ ಕೆಲಸಗಳು ತುರ್ತಾಗಿ ಆಗಬೇಕಿದೆ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಕುರಿ ಮಾರಾಟವನ್ನು ನಾನೇ ಎಪಿಎಂಸಿ ಗೆ ಸ್ಥಳಾಂತರ ಮಾಡಿಸಿದ್ದೆ ಮಾರುಕಟ್ಟೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ. ಇದು ಮಾರುಕಟ್ಟೆ ಸೇವೆ ದೂರವಾಗಲು ಮುಖ್ಯ ಕಾರಣ.
ಎನ್.ವೈ. ಗೋಪಾಲಕೃಷ್ಣ, ಶಾಸಕ
ಮಾರುಕಟ್ಟೆಯಲ್ಲಿ ಮುಂದಿನ 5 ವರ್ಷಗಳ ಅಗತ್ಯತೆ ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಆನುದಾನ ಬಿಡುಗಡೆಯಾಗಿಲ್ಲ. ವಿದ್ಯುತ್‌ ನೀರಿನ ಸಮಸ್ಯೆ ದುರಸ್ತಿ ಕಾರ್ಯ ಅಗತ್ಯ ತುಂಬಾ ಇದೆ.
ಮಂಜುನಾಥ್‌ ಕಾರ್ಯದರ್ಶಿ, ಎಪಿಎಂಸಿ ರಾಂಪುರ
ಕುರಿ ಮಾರುಕಟ್ಟೆ ಪ್ರಾಂಗಣ
ಕುರಿ ಮಾರುಕಟ್ಟೆ ಪ್ರಾಂಗಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT