ಬುಧವಾರ, ಆಗಸ್ಟ್ 17, 2022
24 °C
ಎರಡೂ ಕುಟುಂಬದವರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭ

ಶ್ರವಣ ದೋಷವುಳ್ಳ ಜೋಡಿ ಅಂರ್ತಜಾತಿ ವಿವಾಹ

ಶಿವಗಂಗಾ ಚಿತ್ತಯ್ಯ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ಶ್ರವಣ ದೋಷವುಳ್ಳ ಜೋಡಿಯ ಅಂತರ್ಜಾತಿಯ ವಿವಾಹಕ್ಕೆ ಎರಡೂ ಕುಟುಂಬದವರು ಸಾಕ್ಷಿಯಾಗುವ ಮೂಲಕ ಜಾತಿ ದೊಡ್ಡದಲ್ಲ, ಮನಸ್ಸು ಮುಖ್ಯ ಎಂಬುದನ್ನು ತೋರಿಸಿದ್ದಾರೆ. ಇಂತಹ ಅಪರೂಪದ ಮದುವೆ ಸಮಾರಂಭಕ್ಕೆ ಬೆನ್ನೆಲುಬಾಗಿ ನಿಂತವರು ಇಲ್ಲಿನ ಹಿಂದಿ ಶಿಕ್ಷಕಿ ಸುಜಾತ. 

ಶಿಕ್ಷಕಿ ಸುಜಾತ ದಾವಣಗೆರೆಯ ಭಗತ್‍ಸಿಂಗ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಶ್ರವಣ ದೋಷವುಳ್ಳ ತನ್ನ ಸೊಸೆ ಸೌಮ್ಯ ಅವರಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ ಸ್ವಜಾತಿ ಹಾಗೂ ಸಂಬಂಧಿಕರಲ್ಲಿ ವರ ಹುಡುಕಿದರೂ ಸಿಕ್ಕಿರಲಿಲ್ಲ. ಬಳಿಕ ಅನ್ಯ ಜಾತಿಯಾದರೂ ಸೊಸೆಯ ಬಾಳಲ್ಲಿ ಬೆಳಕು ತರಬೇಕು ಎಂದು ವರ ಪರಶುರಾಮ ಅವರೊಂದಿಗೆ ವಿವಾಹ ಮಾಡಲು ನಿಶ್ಚಯಿಸಿದರು. ಭಿನ್ನ ಜಾತಿಯಾದ ಕಾರಣ ಮೊದಲು ಕುಟುಂಬದವರು ಮನವೊಲಿಸಿ ಸುಸೂತ್ರವಾಗಿ ವಿವಾಹ ನಡೆಯಲು ಸಾಕ್ಷಿಯಾದರು.

ತಾಲ್ಲೂಕಿನ ಗ್ರಾಮದಲ್ಲಿ ಭಾನುವಾರ ಸಡಗರದಿಂದ ಸರಳವಾಗಿ ಕೊರೊನಾ ನಿಯಮ ಪಾಲನೆಯೊಂದಿಗೆ ವಿವಾಹ ಸಮಾರಂಭ ಜರುಗಿತು.  

ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಕುರುಬ ಸಮುದಾಯದ ಆರ್. ಮಂಜುನಾಥ್ ಮತ್ತು ಮಂಗಳಮ್ಮ ಅವರ ಪುತ್ರಿ ಸೌಮ್ಯ ದಾವಣಗೆರೆ ಕಿವುಡ ಮತ್ತು ಮೂಕರ ಮುನೇಶ್ವರ ವಸತಿಶಾಲೆಯಲ್ಲಿ ‌ಎಸ್ಸೆಸ್ಸೆಲ್ಸಿ ಮುಗಿಸಿ ನಂತರ ಮೈಸೂರು ಜೆಎಸ್‍ಎಸ್ ಕಾಲೇಜಿನಲ್ಲಿ ಡಿಪ್ಲೊಮಾ ಇನ್‌ ಎಂಜಿನಿಯರಿಂಗ್ ಆರ್ಕಿಟೆಕ್ಚರ್ ಪದವಿ ಪಡೆದಿದ್ದಾರೆ.

ದಾವಣಗೆರೆ ಭಗತ್‍ಸಿಂಗ್ ನಗರದ ನೇಕಾರ (ಪದ್ಮಸಾಲಿ) ಸಮುದಾಯದ ಮಂಜಣ್ಣ ಮತ್ತು ಯಮುನಮ್ಮ ದಂಪತಿಯ ಕೊನೆಯ ಪುತ್ರ ಪರಶುರಾಮ ಅವರಿಗೂ ಶ್ರವಣ ದೋಷವಿತ್ತು. ಅವರೂ ಕಿವುಡ ಮತ್ತು ಮೂಕರ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ನಂತರ ರಿಲಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಸಪ್ತಪದಿ ತುಳಿಯಲು ಸಿಂಗಾರಗೊಂಡಿದ್ದ ಶ್ರವಣ ದೋಷವುಳ್ಳ ವಧು–ವರರ ನವ ಜೋಡಿ ಅಲ್ಲಿದ್ದವರ ಮನ ಸೆಳೆಯಿತು. ಜಾತಿ, ಧರ್ಮ, ಪಂಥ ಹಾಗೂ ಪ್ರತಿಷ್ಠೆಯ ಆಚೆಗೆ ರಾಷ್ಟಕವಿ ಕುವೆಂಪು ಅವರ ವಿಶ್ವಮಾನವ ಸಂದೇಶ ಹಾಗೂ ಮಂತ್ರ ಮಾಂಗಲ್ಯ ಸಾರುವ ಇಂತಹ ಅಪರೂಪದ ವಿವಾಹವು ಹೆಚ್ಚು ಹೆಚ್ಚು ನಡೆಯಲಿ ಎಂದು ಬಂದಿದ್ದವರು ಆಶಿಸಿ, ನವಜೋಡಿಗಳನ್ನು ಹರಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಕಂದಿಕೆರೆ ಸುರೇಶ್‍ಬಾಬು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮದುವೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.