ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅವಘಡ

Last Updated 6 ಡಿಸೆಂಬರ್ 2022, 5:03 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಶಾಲಾ ಬಸ್‌ನಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಇಲ್ಲಿನ ಕಡೂರು ರಸ್ತೆಯಲ್ಲಿರುವ ವಿಶ್ವಚೇತನ ಆಂಗ್ಲ ಮಾಧ್ಯಮ ಶಾಲೆಯ ಬಸ್‌ ವಿವಿಧ ಗ್ರಾಮಗಳಿಂದ ಮಕ್ಕಳನ್ನು ಕರೆ ತರುತ್ತಿತ್ತು. ಬೆಳಿಗ್ಗೆ 10 ಗಂಟೆಗೆ ಮುಖ್ಯ ರಸ್ತೆಯಿಂದ ಶಾಲೆ ಕಡೆ ತಿರುಗುವ ಸಂದರ್ಭದಲ್ಲಿ ರಸ್ತೆ ತಿರುವಿನಲ್ಲಿರುವ ವಿದ್ಯುತ್‌ ಪರಿವರ್ತಕದ ಒಂದು ಬದಿಗೆ ಡಿಕ್ಕಿ ಹೊಡೆಯಿತು. ತಕ್ಷಣ ಚಾಲಕ ಬಸ್‌ ಅನ್ನು ಬಲಕ್ಕೆ ತಿರುಗಿಸಿದ್ದರಿಂದ ಆಗುವ ಭಾರಿ ಅನಾಹುತ ತಪ್ಪಿದೆ. ಬಸ್‌ ಡಿಕ್ಕಿಯಾದ ರಭಸಕ್ಕೆ ವಿದ್ಯುತ್‌ ಪರಿವರ್ತಕವು ಹಿಂದಕ್ಕೆ ಸರಿಯಿತು. ಅದರಲ್ಲಿದ್ದ ಫ್ಯೂಸ್‌ ಹೋಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

‘ವಿದ್ಯುತ್‌ ಪರಿವರ್ತಕವು ರಸ್ತೆಯ ಪಕ್ಕದಲ್ಲೇ ಇರುವುದರಿಂದ ಇಂತಹ ಅವಘಡ ಸಂಭವಿಸಿದೆ. ನಮ್ಮ ಶಾಲೆಯ ಬಸ್‌ ಚಾಲಕರು ತಿರುವಿನಲ್ಲಿ ನಿಧಾನವಾಗಿಯೇ ಬಸ್‌ಗಳನ್ನು ಚಲಾಯಿಸುತ್ತಾರೆ. ಆದರೆ, ಪಕ್ಕದಲ್ಲಿ ಖಾಲಿ ಸೈಟುಗಳು ಇರುವುದರಿಂದ ಅಲ್ಲಿ ತಗ್ಗಾಗಿದ್ದು, ಬಸ್‌ ತಿರುಗಿಸುವಾಗ ಪರಿವರ್ತಕಕ್ಕೆ ತಾಗಿದೆ. ಆದ್ದರಿಂದ ವಿದ್ಯುತ್‌ ಪರಿವರ್ತಕವನ್ನು ಬೇರೆಡೆ ಸ್ಥಳಾಂತರಿಸಬೇಕು’ ಎಂದು ಎಂದು ಶಾಲೆಯ ಕಾರ್ಯದರ್ಶಿ ಬಿ. ನಾಗರಾಜ್‌ ತಿಳಿಸಿದರು.

‘ಬಸ್‌ ಚಾಲಕ ನಿಧಾನವಾಗಿಯೇ ಬಸ್‌ ಅನ್ನು ತಿರುವಿನಲ್ಲಿ ತಿರುಗಿಸಿದರೂ ಟಿಸಿಗೆ ಡಿಕ್ಕಿ ಹೊಡೆಯಿತು’ ಎಂದು ಬಸ್‌ನಲ್ಲಿದ್ದ ಶಾಲೆಯ ಶಿಕ್ಷಕರಾದ ರವಿಕುಮಾರ್‌, ಕವಿತಾ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ವಿಜಯ್‌, ಅಮೃತಾ, ಶ್ರೇಯಾ ತಿಳಿಸಿದರು. ‘ಬಸ್‌ ಡಿಕ್ಕಿಯಾದಾಗ ಪರಿವರ್ತಕದಲ್ಲಿ ಭಾರಿ ಶಬ್ದವಾಯಿತು. ಆ ದೃಶ್ಯ ನೋಡಿ ಕೈಕಾಲುಗಳೇ ಆಡದ ಸ್ಥಿತಿ ಉಂಟಾಗಿತ್ತು’ ಎಂದು ಪ್ರತ್ಯಕ್ಷದರ್ಶಿಯಾದ ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ಮಾಹಿತಿನೀಡಿದರು.

‘ಪರಿವರ್ತಕವನ್ನು ಬೇರೆಡೆ ಸ್ಥಳಾಂತರಿಸಿದರೆ, ಮುಂದೆ ಅವಘಡಗಳು ತಪ್ಪುತ್ತವೆ’ ಎಂದು ಬಡಾವಣೆಯ ನಿವಾಸಿಗಳಾದ ಮಂಜುನಾಥ್‌ ಅರವ, ಎಂ.ಡಿ. ರಾಜು, ಕುಮಾರ್‌, ಸಿದ್ದಪ್ಪ, ನಾಗರತ್ನಾ, ಮೀನಾ, ರಶ್ಮಿ, ನಿವೃತ್ತ ಶಿಕ್ಷಕ ನರಸಪ್ಪ ತಿಳಿಸಿದರು.

ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಪಾಲಯ್ಯ ಬಂದು ಪರಿಶೀಲನೆ ನಡೆಸಿದರು. ಸಂಜೆ ಲೈನ್‌ಮನ್‌ಗಳು ಬಂದು ಪರಿವರ್ತಕವನ್ನು ಸರಿಪಡಿಸಿದರು. ಅಲ್ಲಿಯವರೆಗೂ ಗ್ರಾಮದಲ್ಲಿ ವಿದ್ಯುತ್‌ ಸ್ಥಗಿತವಾಗಿತ್ತು. ಆದಷ್ಟು ಬೇಗನೆ ಪರಿವರ್ತಕವನ್ನು ರಸ್ತೆಯ ಹಿಂಬದಿಗೆ ಸ್ಥಳಾಂತರಿಸಲಾಗುವುದು ಎಂದು ಚಿಕ್ಕಜಾಜೂರಿನ ಬೆಸ್ಕಾಂ ಶಾಖಾಧಿಕಾರಿ ಸನತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT