ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ವಿರೋಧಿಸಿದರೆ ಸಂವಿಧಾನ ವಿರೋಧಿಸಿದಂತೆ: ನ್ಯಾಯಾಧೀಶ ಬಿ.ಕೆ. ಗಿರೀಶ್

ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ವಿಚಾರ ಸಂಕಿರಣದಲ್ಲಿ ನ್ಯಾಯಾಧೀಶ ಬಿ.ಕೆ. ಗಿರೀಶ್
Last Updated 5 ಮಾರ್ಚ್ 2021, 15:42 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಾನುವಾರು ಹತ್ಯೆ ಅಪರಾಧ ಎಂಬುದಾಗಿ ಸಂವಿಧಾನದಲ್ಲೇ ಉಲ್ಲೇಖಿಸಲಾಗಿದೆ. ಅದನ್ನು ತಡೆಯಲು ರಾಜ್ಯದಲ್ಲಿ ಕಾಯ್ದೆ ಜಾರಿಯಾಗಿದೆ. ಇದನ್ನು ವಿರೋಧಿಸಿದರೆ, ಸಂವಿಧಾನ ವಿರೋಧಿಸಿದಂತೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ಗಿರೀಶ್ ಅಭಿಪ್ರಾಯಪಟ್ಟರು.

ಕ್ರೀಡಾ ಭವನದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಜಿಲ್ಲಾ ಪ್ರಾಣಿ ದಯಾ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ-2020 ಹಾಗೂ ಪ್ರಾಣಿ ದೌರ್ಜನ್ಯ ತಡೆಗಟ್ಟುವಿಕೆ ಕುರಿತು ಶುಕ್ರವಾರ ಏರ್ಪಡಿಸಿದ್ದವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕರು, ಹಾಲು ಕೊಡುವ ಹಸು, ಬಾಣಂತಿ ಹಸುಗೆ ಹೊಡೆಯುವಂತಿಲ್ಲ. ಹಿಂಸೆ, ಕಳ್ಳ ಸಾಗಾಣಿಕೆ, ಕೊಲೆ ಮಾಡಿದರೆ ಶಿಕ್ಷಾರ್ಹ ಅಪರಾಧ. ಗೋವುಗಳನ್ನು ವಧೆ ಮಾಡುವುದನ್ನು ತಡೆಯಬೇಕು. ಎಲ್ಲಿಯಾದರೂ ಕಂಡುಬಂದಲ್ಲಿ ಸಾರ್ವಜನಿಕರು ಗಮನಕ್ಕೆ ತರಬೇಕು. ಎಲ್ಲರೂ ಕೈಜೋಡಿಸಿದಾಗ ಮಾತ್ರ ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಾಧ್ಯ’ ಎಂದರು.

‘ಗೋವು ಅನೇಕರ ಪಾಲಿಗೆ ಮಾತೆಯಾಗಿದೆ. ಧರ್ಮ, ಆಚಾರ–ವಿಚಾರ ಗೌರವಿಸಬೇಕೆ ಹೊರತು ಇನ್ನೊಬ್ಬರ ನಂಬಿಕೆಗೆ ಅಪಚಾರ ಮಾಡುವಂತಿಲ್ಲ. ಇದು ಕೂಡ ಸಂವಿಧಾನ ವಿರೋಧಿ ಚಟುವಟಿಕೆಯಾಗಿದೆ. ಸಂವಿಧಾನ ಬದ್ಧವಾಗಿ ಮಾತನಾಡಲು ಮೊದಲು ಅದನ್ನು ತಿಳಿಯಲು ಮುಂದಾಗಬೇಕು. ರಾಜ್ಯ ನಿರ್ದೇಶಕ ತತ್ವದ ನಾಲ್ಕನೇ ಭಾಗ ಹಾಗೂ ಸಂವಿಧಾನ ಅನುಚ್ಛೇದ 48ರಲ್ಲಿ ಗೋವಿನ ಕುರಿತು ಸವಿಸ್ತಾರವಾಗಿ ಉಲ್ಲೇಖಿಸಲಾಗಿದೆ. ಅದನ್ನು ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಗೋವು ಸತ್ತರೂ ಅದರಿಂದ ಉತ್ತಮ ಸಾವಯವ ಗೊಬ್ಬರ ದೊರೆಯಲಿದೆ. ಇದರಿಂದ ರೈತರಿಗೆ ಅತ್ಯುತ್ತಮ ಫಸಲು ಸಿಗಲಿದೆ. ಗೋವನ್ನು ಉಳಿಸಲು ಹಲವು ದಾರಿಗಳಿವೆ. ಆದರೆ, ಕಡಿಯಲು ಇರುವುದು ಒಂದೇ ಮಾರ್ಗ. ಆದ್ದರಿಂದ ಇವುಗಳ ರಕ್ಷಣೆ ಅತ್ಯಗತ್ಯ’ ಎಂದು ಹೇಳಿದರು.

ಉಪನ್ಯಾಸದಲ್ಲಿ ವಕೀಲ ಎಚ್.ಬಿ. ದೇವಿಪ್ರಸಾದ್, ‘ಕಾಯ್ದೆ ಜಾರಿಯಾಗಿದ್ದು ಇನ್ನಷ್ಟು ಅಂಶಗಳನ್ನು ಸೇರಿಸಲು ಮುಂದಿನ ದಿನಗಳಲ್ಲಿ ನಿರ್ಧರಿಸಬಹುದು. ಗೋವುಗಳನ್ನು ದುರುದ್ದೇಶ ಪೂರ್ವಕವಾಗಿ ದುರ್ಬಳಕೆ ಮಾಡಿಕೊಂಡರೆ ಉಪದಂಡಾಧಿಕಾರಿ ಮುಂದೆ ಹಾಜರುಪಡಿಸಬೇಕಿದೆ’ ಎಂದರು.

‘ಗೋ ಹತ್ಯೆ ಮಾಡಿದಲ್ಲಿ ₹50 ಸಾವಿರದಿಂದ ₹5 ಲಕ್ಷದವರೆಗೂ ದಂಡ ವಿಧಿಸಬಹುದು ಎಂಬುದಾಗಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಕೃಷಿ ಚಟುವಟಿಕೆಯಲ್ಲಿ ಬಳಸಿದರೆ ಯಾವ ಅಭ್ಯಂತರವಿಲ್ಲ. ದೈಹಿಕವಾಗಿ ಹಿಂಸಿಸಿದರೆ, ಅಪರಾಧವಾಗಲಿದೆ’ ಎಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಪ್ರೇಮಾವತಿ ಮನಗೂಳಿ ವಿಚಾರ ಸಂಕಿರಣ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ವಕೀಲರ ಸಂಘ ಅಧ್ಯಕ್ಷ ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಎಂ. ಅನಿಲ್‍ಕುಮಾರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ಕೃಷ್ಣಪ್ಪ, ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT