ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ, ಆಯುರ್ವೇದ ಕೇಂದ್ರ ಮಲ್ಲಾಡಿಹಳ್ಳಿ

Published 30 ಆಗಸ್ಟ್ 2023, 11:19 IST
Last Updated 30 ಆಗಸ್ಟ್ 2023, 11:19 IST
ಅಕ್ಷರ ಗಾತ್ರ

ಮಲ್ಲಾಡಿಹಳ್ಳಿ ಎಂಬ ಗ್ರಾಮ ತಾಲ್ಲೂಕಿನ ಪ್ರಮುಖ ಹಳ್ಳಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಪಟ್ಟಣದಿಂದ ಶಿವಮೊಗ್ಗ ರಸ್ತೆಯಲ್ಲಿ 10 ಕಿ.ಮೀ. ದೂರದಲ್ಲಿರುವ ಈ ಹಳ್ಳಿ ಅತಿ ವೇಗವಾಗಿ ಬೆಳೆಯುತ್ತಿದೆ. ಹಳ್ಳಿಯ ಪರಿಸರ ಮನಮೋಹಕವಾಗಿದ್ದು, ಅಡಿಕೆ ಪ್ರಮುಖ ಬೆಳೆಯಾಗಿದೆ. ಈ ಭಾಗದಲ್ಲಿ ಕಪ್ಪು ಮಣ್ಣು ಇರುವುದರಿಂದ ರೈತರು ಈರುಳ್ಳಿ, ಮೆಣಸಿನ ಕಾಯಿ, ಮೆಕ್ಕೆಜೋಳ ಬೆಳೆಯುತ್ತಾರೆ.

ಮಲ್ಲಡಿಹಳ್ಳಿ ಗುರುತಿಸಿಕೊಳ್ಳುವುದು ಇಲ್ಲಿನ ಅನಾಥ ಸೇವಾಶ್ರಮದಿಂದ. ಆಶ್ರಮ ಯೋಗ, ಆಯುರ್ವೇದ, ರಂಗಭೂಮಿ ಹಾಗೂ ಶೈಕ್ಷಣಿಕ ಕೇಂದ್ರವಾಗಿದೆ. ಆಶ್ರಮದಲ್ಲಿ ಹಲವು ಶಾಲಾ, ಕಾಲೇಜುಗಳು ಇವೆ. ಪ್ರಾಥಮಿಕ ಹಂತದಿಂದ ಪ್ರೌಢಶಾಲೆ, ಪಿಯು ಕಾಲೇಜು, ಪ್ರಥಮದರ್ಜೆ ಕಾಲೇಜು, ಡಿ.ಇಡಿ, ಬಿ.ಪಿ.ಇಡಿ ಕಾಲೇಜುಗಳಿವೆ. ಆಶ್ರಮದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಇದ್ದು, ರಾಜ್ಯದಲ್ಲಿಯೇ ಪ್ರಸಿದ್ಧಿಯಾಗಿದೆ. ಈ ಆಶ್ರಮ ಶಿಸ್ತಿಗೆ ಹೆಸರಾಗಿದ್ದು, ಪೋಷಕರು ಶಿಸ್ತು ಕಲಿಯಲಿ ಎಂದೇ ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸುತ್ತಾರೆ.

ದೇವರನ್ನು ಹುಡುಕಿ ಬಂದವರು:

ಬಾರಕೂರಿನ ರಾಘವೇಂದ್ರರಾವ್ ಎಂಬ ಯುವಕ ಬಾಲ್ಯದಿಂದಲೇ ದೇವರನ್ನು ಕಾಣುವ ಹಂಬಲದಿಂದ ಮಠ, ಮಂದಿರಗಳನ್ನು ಸುತ್ತುತ್ತಾರೆ. ದೇಶ ಸಂಚಾರ ಮಾಡಿ ಸಾಧು ಸಂತರನ್ನು ಭೇಟಿಯಾಗುತ್ತಾರೆ. ಕೊನೆಗೆ ಸ್ವಾಮಿ ಶಿವಾನಂದರ ಆಶ್ರಯಕ್ಕೆ ಬಂದು ಧ್ಯಾನ ಮಾರ್ಗವನ್ನು ಹಿಡಿದರು. ಬ್ರಹ್ಮಚರ್ಯ ವ್ರತ ಧಾರಣೆ ಮಾಡಿ, ಸ್ವಾಮಿ ಶಿವಾನಂದರ ಮಾರ್ಗದರ್ಶನದಲ್ಲಿ ಬರೋಡಾದ ಪ್ರೊ.ರಾಜರತ್ನ ಮಾಣಿಕ್‌ರಾಯ್‌ ಅವರ ಶಿಷ್ಯತ್ವ ಸ್ವೀಕರಿಸುತ್ತಾರೆ. ಅಲ್ಲಿಯೋಗ ಮತ್ತು ದೈಹಿಕ ಶಿಕ್ಷಣದ ತರಬೇತಿ ಪಡೆದು ಬಿ.ಪಿ.ಇ ಎನ್ನುವ ಪದವಿ ಪಡೆಯುತ್ತಾರೆ.

ನಂತರ ಕರಾಚಿಗೆ (ಆಗ ಭಾರತಕ್ಕೆ ಸೇರಿತ್ತು) ಹೋಗಿ ಅಂದಿನ ಅತ್ಯಂತ ಪ್ರಸಿದ್ಧ ಆಯುರ್ವೇದ ತಜ್ಞರಾದ ಪಂಡಿತ್ ಲಕ್ಷ್ಮಣ ಬಾಬಾ ಅವರಲ್ಲಿ ಆಯುರ್ವೇದ ವೈದ್ಯ ವಿದ್ಯೆ ಪಡೆಯುತ್ತಾರೆ. ನಂತರ ಮಹಾತ್ಮ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಗ್ರಾಮೀಣ ಭಾರತದ ಸೇವೆಗೆ ಮುಂದಾಗುತ್ತಾರೆ. ಕರ್ನಾಟಕಕ್ಕೆ ಬಂದು ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಯುವಕರಿಗಾಗಿ 41 ದಿನಗಳ ಯೋಗ ಶಿಬಿರಗಳನ್ನು ನಡೆಸುತ್ತಾರೆ. ಹಳ್ಳಿಗಳಲ್ಲಿ ಜೀವನ ಮೌಲ್ಯಗಳನ್ನು ಜಾಗೃತಗೊಳಿಸುತ್ತಾರೆ.

ಹೀಗೆ ಊರು ಸುತ್ತುತ್ತಾ ರಾಘವೇಂದ್ರ ರಾವ್ 1942ರ ಡಿಸೆಂಬರ್‌ನಲ್ಲಿ ಮಲ್ಲಾಡಿಹಳ್ಳಿ ಎಂಬ ಕುಗ್ರಾಮಕ್ಕೆ ಬರುತ್ತಾರೆ. ಮಲ್ಲಾಡಿಹಳ್ಳಿಯಲ್ಲಿ ಯೋಗ ಶಿಬಿರ ಮಾಡುತ್ತಿದ್ದಾಗ ಗ್ರಾಮಕ್ಕೆ ಕಾಲರಾ ಮಾರಿ ಆವರಿಸುತ್ತದೆ. ಆಗ ರಾಘವೇಂದ್ರ ರಾವ್ ಗ್ರಾಮದಲ್ಲಿಯೇ ಉಳಿದು ಕಾಲರಾ ನಿವಾರಣೆಗೆ ಶ್ರಮಿಸುತ್ತಾರೆ. ಮನೆ ಮನೆಗೆ ಹೋಗಿ ಔಷಧಿ ನೀಡಿ ರೋಗಿಗಳನ್ನು ಉಪಚರಿಸುತ್ತಾರೆ. ಶುಚಿತ್ವದ ಪಾಠ ಹೇಳಿಕೊಡುತ್ತಾರೆ.

ಅನಾಥ ಸೇವಾಶ್ರಮ ಸ್ಥಾಪನೆ:

ಮಲ್ಲಾಡಿ ಹಳ್ಳಿಯಲ್ಲಿಯೇ ನೆಲೆನಿಂತ ರಾಘವೇಂದ್ರ ರಾವ್ ಅವರನ್ನು ಇಲ್ಲಿನ ಜನ ‘ವ್ಯಾಯಮದ ಮೇಷ್ಟ್ರು’ ಎಂದು ಕರೆಯುತ್ತಿದ್ದರು. ಇವರ ನಡತೆ, ಸರಳ ವ್ಯಕ್ತಿತ್ವ ಕಂಡ ಜನ ‘ಸ್ವಾಮೀಜಿ’ ಎಂದು ಕರೆದರು. ಅಲ್ಲಿಂದ ಮುಂದೆ ರಾಘವೇಂದ್ರ ರಾವ್ ‘ರಾಘವೇಂದ್ರ ಸ್ವಾಮೀಜಿ’ಯಾದರು.

ಗ್ರಾಮದವರು ಇವರಿಗೆ ಪ್ರೀತಿಯಿಂದ ಒಂದು ನಿವೇಶನ ನೀಡಿದರು. ಸಂಕಜ್ಜಿ ಎಂಬುವರು ಒಂದು ಕಾಣಿಕೆಯ ಗಂಟು ನೀಡಿದರು. 1943ರ ಮಹಾಶಿವರಾತ್ರಿಯಂದು ಆಶ್ರಮದ ಶುಭಾರಂಭವಾಯಿತು. ನಂತರ ಬಂದ ಸೂರ್‌ದಾಸ್‌ ಸ್ವಾಮೀಜಿ ಕೂಡ ಗುರುಗಳ ಜತೆಗೆ ನಿಂತು ಆಶ್ರಮ ಕಟ್ಟುವಲ್ಲಿ ನೆರವಾದರು.

ಜನರಿಂದ ಸ್ವಾಮೀಜಿ ಎಂದು ಕರೆಸಿಕೊಂಡರೂ, ಇವರು ಕಾವಿ ಬಟ್ಟೆ ಧರಿಸಲಿಲ್ಲ. ಖಾದಿ ಬಟ್ಟೆಯ ಬಿಳಿ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸುತ್ತಿದ್ದರು. ತನ್ನನ್ನು ತಾನು ‘ತಿರುಕ’ ಎಂದು ಕರೆದುಕೊಂಡ ಇವರು ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಆಶ್ರಮ ಕಟ್ಟಿ ಬೆಳೆಸಿದರು. ಧನ್ವಂತರಿ ಆಸ್ಪತ್ರೆ ಸಮುಚ್ಛಯ ಮತ್ತು ವಿಶ್ವಯೋಗ ಮಂದಿರಗಳನ್ನು ಕಟ್ಟಿಸಿದರು. ಆಶ್ರಮದ ಆವರಣದಲ್ಲಿ ಸ್ವತಃ ತಾವೇ ವಿವಿಧ ಬಗೆಯ ಗಿಡಮೂಲಿಕೆಗಳನ್ನು ನೆಟ್ಟು ಔಷಧಿ ವನ ಬೆಳೆಸಿದರು.

ರಂಗಭೂಮಿಗೂ ಕೊಡುಗೆ:

ರಾಘವೇಂದ್ರ ಸ್ವಾಮೀಜಿ ರಂಗಭೂಮಿಗೂ ಕೊಡುಗೆ ನೀಡಿದ್ದಾರೆ. ರಂಗಕಲೆಯಲ್ಲಿ ಆಸಕ್ತಿ ಹೊಂದಿದ್ದ ಸ್ವಾಮೀಜಿ ಉತ್ತಮ ಬರಹಗಾರರೂ ಆಗಿದ್ದರು. ತಾವೇ ನಾಟಕಗಳನ್ನು ರಚಿಸಿ, ಅಭಿನಯಿಸುತ್ತಿದ್ದರು. ಗ್ರಾಮಸ್ಥರಿಗೆ, ಆಶ್ರಮದಲ್ಲಿದ್ದವರಿಗೆ ನಾಟಕ ತರಬೇತಿ ನೀಡುತ್ತಿದ್ದರು. ಆಶ್ರಮದಲ್ಲಿ ನಾಟಕೋತ್ಸವ ನಡೆಸುತ್ತಿದ್ದರು. ಈಗಲೂ ಆಶ್ರಮದಲ್ಲಿ ರಂಗಚಟುವಟಿಕೆಗಳು ನಿರಂತವಾಗಿ ನಡೆಯುತ್ತಿವೆ.

ರಾಘವೇಂದ್ರ ಸ್ವಾಮೀಜಿ
ರಾಘವೇಂದ್ರ ಸ್ವಾಮೀಜಿ
ಸೂರ್‌ದಾಸ್ ಸ್ವಾಮೀಜಿ
ಸೂರ್‌ದಾಸ್ ಸ್ವಾಮೀಜಿ
ರಾಘವೇಂದ್ರ ಸ್ವಾಮೀಜಿ
ರಾಘವೇಂದ್ರ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT