ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೋಷಿತರ ಅಭಿವೃದ್ಧಿ ಅಹಿಂದ ಚಳವಳಿ ಆಶಯ

ಅಹಿಂದ ಚಳವಳಿ ಮುಖ್ಯ ಸಂಚಾಲಕ ಎಸ್. ಮೂರ್ತಿ ಅನಿಸಿಕೆ
Published 26 ಮೇ 2024, 14:29 IST
Last Updated 26 ಮೇ 2024, 14:29 IST
ಅಕ್ಷರ ಗಾತ್ರ

ಹಿರಿಯೂರು: ರಾಜ್ಯದಲ್ಲಿ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಿ, ಅವರನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವುದು ಅಹಿಂದ ಚಳುವಳಿಯ ಆಶಯವಾಗಿದೆ ಎಂದು ಅಹಿಂದ ಚಳುವಳಿ ಸಂಸ್ಥಾಪಕ ಹಾಗೂ ಮುಖ್ಯ ಸಂಚಾಲಕ ಎಸ್.ಮೂರ್ತಿ ತಿಳಿಸಿದರು.

ನಗರದ ವೇದಾವತಿ ಬಡಾವಣೆಯ ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಹಿಂದ ಚಳುವಳಿ ಬೆಂಗಳೂರು ವಿಭಾಗೀಯ ಮಟ್ಟದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಹಿಂದ ಕಾರ್ಯಕರ್ತರನ್ನು ಗುರುತಿಸಿ ಪ್ರತ್ಯೇಕ ಸಮಿತಿ ರಚಿಸಲಾಗುವುದು. ಪ್ರತಿ ಜಿಲ್ಲೆ ಹಾಗೂ ವಿಭಾಗವಾರು ಶಿಬಿರ ನಡೆಸಿ ಭಾರತದ ಸಂವಿಧಾನ, ಶೋಷಿತರ ಕಲ್ಯಾಣ, ದೌರ್ಜನ್ಯದಿಂದ ರಕ್ಷಣೆ, ಕಾನೂನು ಅರಿವು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸದ್ಬಳಕೆ ಕುರಿತು ಅರಿವು ಮೂಡಿಸುವುದು, ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ಕೊಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಭೂರಹಿತ ಮತ್ತು ವಸತಿರಹಿತರ ಸಮಾವೇಶ, ದಾರ್ಶನಿಕರ ಆದರ್ಶ ಪಾಲನೆ, ಅಹಿಂದ ಸಹಕಾರಿ ಬ್ಯಾಂಕ್ ಸ್ಥಾಪನೆ, ನಿರುದ್ಯೋಗಿಗಳಿಗೆ ಉದ್ಯೋಗದ ಜಾಹೀರಾತು ಕುರಿತು ಮಾಹಿತಿ ನೀಡುವುದು, ಸರ್ವರಿಗೂ ಸಮಪಾಲು- ಸಮ ಬಾಳು ತತ್ವದಡಿ ದೇಶದ ಸಂಪತ್ತು, ಅಧಿಕಾರ ಹಾಗೂ ಆರ್ಥಿಕ ಸಂಪತ್ತು ಹಂಚಿಕೆ ಮಾಡಬೇಕಿರುವ ಬಗ್ಗೆ ಜಾಗೃತಿ ಮೂಡಿಸುವುದು, ಆ ಮೂಲಕ ಜಾತ್ಯತೀತ ಮತ್ತು ಸಮ ಸಮಾಜ ನಿರ್ಮಾಣದ ಗುರಿಯನ್ನು ಅಹಿಂದ ಚಳವಳಿ ಹೊಂದಿದೆ ಎಂದು ಅವರು ವಿವರಿಸಿದರು.

‘ಅಹಿಂದ ಚಳವಳಿ ಜಾತಿ ಮೀರಿದ ಚಳವಳಿಯಾಗಬೇಕು. ಜಾತಿ ಸಂಘಟನೆಗಳನ್ನು ಕಟ್ಟುವಾಗ ಜಾತಿ ವಿನಾಶ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಜಾತಿಯನ್ನು ಮೀರಿ ನಾವೆಲ್ಲರೂ ಒಂದಾಗಬೇಕು. ಆಗ ಮಾತ್ರ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರಂತಹ ಮಹನೀಯರ ತತ್ವಗಳನ್ನು ಪಾಲಿಸುವ ಅರ್ಹತೆ ಪಡೆಯಲು ಸಾಧ್ಯ’ ಎಂದು ಹೇಳಿದರು.

80ರ ದಶಕದಲ್ಲಿಯೇ ದಲಿತ, ರೈತ ಚುಳವಳಿಗಳು ಹೋರಾಟದ ಮಹತ್ವ ತಿಳಿಸಿಕೊಟ್ಟಿದ್ದವು. ಈಗ ಮತ್ತೆ ಚಳುವಳಿ ಕಟ್ಟಬೇಕಾಗಿಲ್ಲ. ಶೋಷಿತ ಸಮುದಾಯಗಳಿಗೆ ಆರ್ಥಿಕ ಬಲ ತುಂಬುವ ಮೂಲಕ ಸಬಲೀಕರಣ ಮಾಡಬೇಕು. ಮೌಢ್ಯ ಆಚರಣೆಗಳನ್ನು ನಾಶಪಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕ ವೆಂಕಟೇಶ್ ಗೌಡ, ಅಶೋಕ್ ಕುಮಾರ್, ದಾಸ್ ಪ್ರಕಾಶ್, ಪ್ರಜ್ವಲ್‌ಸ್ವಾಮಿ, ಆರ್.ಸುರೇಂದ್ರ, ಬಿ.ಪಿ.ಪ್ರೇಮ್‌ನಾಥ್, ಮೊಹಮ್ಮದ್, ಎಸ್.ನಾಗರಾಜು, ಹುಚ್ಚವ್ವನಹಳ್ಳಿ ವೆಂಕಟೇಶ್, ತುರುವನೂರು ಜಗನ್ನಾಥ್, ವಕೀಲ ಟಿ.ಧೃವ ಕುಮಾರ್, ರಾಘವೇಂದ್ರ, ಶಿವಶಂಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT