ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನವರ ಆಶಯ ಇನ್ನೂ ಈಡೇರಿಲ್ಲ- ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಬೇಸರ

Last Updated 2 ಜನವರಿ 2022, 13:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದ ಆಶಯ 21ನೇ ಶತಮಾನದಲ್ಲೂ ಈಡೇರಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಬೇಸರ ವ್ಯಕ್ತಪಸಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಭಾನುವಾರ ಶಿವಶರಣ ಮಾದಾರಚನ್ನಯ್ಯ ಗುರುಪೀಠದಿಂದ ಆಯೋಜಿಸಿದ್ದ ಮಾದಿಗ ಸಮುದಾಯದ ನೂತನ ಐಪಿಎಸ್ ಅಧಿಕಾರಿಗಳಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘900 ವರ್ಷಗಳ ಹಿಂದೆಯೇ ಸಾಮಾಜಿಕ ಕ್ರಾಂತಿ ಮಾಡಿದ ಬಸವೇಶ್ವರರು ವರ್ಗ ರಹಿತ ಸಮಾಜ ನಿರ್ಮಾಣಕ್ಕೆ ಚಿಂತಿಸಿದ್ದರು. ಆದರೆ, ಇಂದಿಗೂ ಮನುಷ್ಯನನ್ನು ಜಾತಿ ಆಧರಿಸಿ ಗುರುತಿಸುವ ಕೆಲಸವಾಗುತ್ತಿದೆ. ಇದು ಸಮಾಜದ ದುರಂತ’ ಎಂದು ನೊಂದು ನುಡಿದರು.

‘ಅನೈತಿಕವಾಗಿ ಹುಟ್ಟಿದ ಹಾಗೂ ದೇವದಾಸಿಗೆ ಜನಿಸಿದ ಮಗು ಸಹ ಕೀಳಲ್ಲ ಎಂಬ ಸಂದೇಶವನ್ನು ಬಸವಣ್ಣನವರು ಜಗತ್ತಿಗೆ ನೀಡಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಾಗುತ್ತಿರುವ ನಾವು ಯಾವುದೇ ವ್ಯಕ್ತಿಯನ್ನು ಜಾತಿಯಿಂದ ಗುರುತಿಸಬಾರದು. ಇನ್ನಾದರೂ ವರ್ಗರಹಿತ, ಶೋಷಣೆ ರಹಿತ ಸಮಾಜವನ್ನು ಒಂದಾಗಿ ನಿರ್ಮಿಸೋಣ’ ಎಂದರು.

‘ಅಂಬೇಡ್ಕರ್ ಹೇಳಿದ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಪದಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ಹೋರಾಟ ಸದಾ ನಮ್ಮ ಹಕ್ಕುಗಳನ್ನು ಪಡೆಯಲು ಇರಬೇಕೆ ಹೊರತು ಶಿಕ್ಷೆ ಕೊಡಿಸಲು ಅಲ್ಲ. ಶಿಕ್ಷಣ, ಸಂಘಟನೆ ಮೂಲಕ ಸಮುದಾಯ ಮತ್ತಷ್ಟು ಬಲಿಷ್ಠವಾಗಬೇಕು’ ಎಂದು ತಿಳಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಕೆಟ್ಟ ಕೆಲಸ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಬೇರೆಯವರ ಜಗಳದಲ್ಲಿ ಭಾಗಿಯಾಗದೆ ಸಮುದಾಯದ ಕಲ್ಯಾಣಕ್ಕೆ ನಿಮ್ಮ ಶಕ್ತಿಯನ್ನು ಬಳಸಿ’ ಎಂದು ಕಿವಿಮಾತು ಹೇಳಿದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ‘ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಮುದಾಯದಿಂದ ಮೂರು ಜನ ಐಪಿಎಸ್ ಅಧಿಕಾರಿಗಳಿದ್ದಾರೆ. ಇದು ನಿಜಕ್ಕೂ ಸಂತಸದ ಕಾರ್ಯಕ್ರಮವಲ್ಲ. ನಮ್ಮಲ್ಲಿನ ಕೀಳರಿಮೆ ಬಿಟ್ಟು ಮೊದಲು ಹೊರ ಬಂದು ಶೈಕ್ಷಣಿಕ ಕ್ರಾಂತಿ ಮಾಡಬೇಕು’ ಎಂದು ಕರೆ ನೀಡಿದರು.

‘ಸಮುದಾಯ ಗೋನಾಳ್ ಭೀಮಪ್ಪ ಅವರನ್ನು ಎಂದು ಮರೆಯಬಾರದು. ಅವರಲ್ಲಿದ್ದ ಸಂಸ್ಕಾರ, ಆದರ್ಶ ದೇಶಕ್ಕೆ ಮಾದರಿ. ಆದರೆ ಉನ್ನತ ಹುದ್ದೆಯ ವಿಚಾರದಲ್ಲಿ ಸಮುದಾಯಕ್ಕೆ ಆಗಿರುವ ಶೋಷಣೆಗೆ ಆಳುವ ಎಲ್ಲ ಸರ್ಕಾರಗಳು ಹಾಗೂ ಪ್ರಜಾಪ್ರಭುತ್ವವೇ ತಲೆ ತಗ್ಗಿಸಬೇಕು’ ಎಂದರು.

‘ಅಂಬೇಡ್ಕರ್, ಜಗಜೀವನರಾಮ್, ಗಾಂಧೀಜಿ ಜಪ ಮಾಡಬೇಕು. ನಮಗೆ ನಾವೇ ಶಿಲ್ಪಿಗಳಾಗಬೇಕು. ಯಾರೂ ಸಹ ಬದುಕು ರೂಪಿಸುವುದಿಲ್ಲ. ನಿಮ್ಮ ಬದುಕು ನೀವುಗಳೇ ರೂಪಿಸಿಕೊಳ್ಳಬೇಕು. ಈ ಮೂಲಕ ಬದಲಾವಣೆ ತರಬೇಕೆಂದು’ ಯುವ ಸಮುದಾಯಕ್ಕೆ ಕರೆ ನೀಡಿದರು.

‘ನಾಡಿನಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಜಾತ್ರೆಯಂತೆ ಮಾಡುತ್ತಾರೆ. ಏಕೆ ಸ್ವಾತಂತ್ರ್ಯಕ್ಕೆ ನಮ್ಮವರು ಹೋರಾಟವೇ ಮಾಡಲಿಲ್ಲವೇ’ ಎಂದು ಪ್ರಶ್ನಿಸಿದರು. ‘ಕೇವಲ ಒಂದೆರಡು ಜಾತಿಗಳ ಅಭಿವೃದ್ಧಿಯಾದರೆ ದೇಶವೇ ಅಭಿವೃದ್ಧಿಯಾಗಿದೆ ಎಂದು ಹೇಳುವ ರಾಜಕಾರಣಿಗಳು ನೂರಾರು ಜಾತಿಗಳ ತ್ಯಾಗವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಪಕ್ಷಕ್ಕೆ ಸೀಮಿತವಲ್ಲ ಮಠ’

ನಾವು ಸಮುದಾಯವನ್ನು ಒಂದು ಪಕ್ಷಕ್ಕೆ ಸಿಮೀತಗೊಳಿಸಿಲ್ಲ. ಪಕ್ಷಗಳ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಸಮುದಾಯವನ್ನು ಸಂಘಟಿಸಿ ಬೆಳೆಸುತ್ತಿದ್ದೇವೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸ್ಪಷ್ಟಪಡಿಸಿದರು.

ಸಚಿವರಾದ ಎ.ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಅವರ ಜತೆಗೂಡಿ ಸಮುದಾಯವನ್ನು ಒಂದು ಪಕ್ಷಕ್ಕೆ ಸಿಮೀತಗೊಳಿಸಲಾಗುತ್ತಿದೆ ಎಂಬ ಮಾತು ಕೇಳಿ ಬಂದಿವೆ. ಈ ಹಿಂದೆ ಸಹ ಅಧಿಕಾರದಲ್ಲಿದ್ದ ಪಕ್ಷಗಳು ಸಮುದಾಯಕ್ಕೆ ನೆರವು ನೀಡಿವೆ. ವಿಭಾಗವಾರು ಮಠಗಳನ್ನು ನಿರ್ಮಿಸಿ ಶೈಕ್ಷಣಿಕ ಕ್ರಾಂತಿ ಮಾಡಬೇಕು ಎಂದು ಕರೆ ನೀಡಿದರು.

ಗೋವಿಂದ ಕಾರಜೋಳ ಅವರು ಮೀಸಲಾತಿ ವರ್ಗೀಕರಣದಲ್ಲಿ ಸಹೋದರ ಸಮುದಾಯಗಳಿಗೂ ಅನ್ಯಾಯವಾಗದಂತೆ ಕೆಲಸ ಮಾಡಿದ್ದಾರೆ. ಇವರಿಗೆ ಸಿಎಂ ಆಗುವ ಎಲ್ಲ ಅರ್ಹತೆಯಿದ್ದರು ಸಹ ಕೊನೆ ಕ್ಷಣದಲ್ಲಿ ಆದ ಬದಲಾವಣೆಯಿಂದ ಸ್ಥಾನ ಕೈತಪ್ಪಿತು ಎಂದು ತಿಳಿಸಿದರು.

ಐಪಿಎಸ್ ಅಧಿಕಾರಿಗಳಾದ ಆರ್.ಜಯಪ್ರಕಾಶ್, ಡಾ.ಬಿ.ಟಿ.ಕವಿತಾ, ಎಂ.ರಾಜೀವ್ ಇವರನ್ನು ಅಭಿನಂದಿಸಲಾಯಿತು. ಶಾಸಕರಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್, ವಿಧಾನಪರಿಷತ್‌ ಸದಸ್ಯ ಕೆ.ಎಸ್.ನವೀನ್, ಶಾಸಕಿ ಕೆ.ಪೂರ್ಣಿಮಾ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಇದ್ದರು.

***

ಶೋಷಿತರು ವಿದ್ಯಾಭ್ಯಾಸ ಮಾಡುವುದೇ ಕಷ್ಟವಾದ ಸಮಯದಲ್ಲಿ ಮೂವರು ಐಪಿಎಸ್ ಅಧಿಕಾರಿಗಳಿದ್ದಾರೆ. ಈ ಮೂವರು ಮಾರ್ಗದರ್ಶನ ನೀಡಿ ಮತ್ತಷ್ಟು ಅಧಿಕಾರಿಗಳನ್ನು ಸಮುದಾಯಕ್ಕೆ ನೀಡಬೇಕು.

ಬಿ.ಎನ್.ಚಂದ್ರಪ್ಪ, ಮಾಜಿ ಸಂಸದ

***

ಯಾರಿಗೂ ಆಮಂತ್ರಣ ನೀಡದೆ ಇಷ್ಟು ಜನ ಈ ಕಾರ್ಯಕ್ರಮಕ್ಕೆ ಬಂದಿರುವುದು ಸಮುದಾಯದ ಶಕ್ತಿಯನ್ನು ತೋರುತ್ತದೆ. ವೇದಿಕೆ ಮೇಲಿನ ಗಣ್ಯರು ಇಂತಹ ನೂರಾರು ಜನರನ್ನು ತಯಾರು ಮಾಡಬೇಕು.

ಬಸವ ಹರಳಯ್ಯ ಸ್ವಾಮೀಜಿ, ಮಹಾಶರಣ ಹರಳಯ್ಯಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT