ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಬಿಜೆಪಿ ಹೈಕಮಾಂಡ್‌ ಪ್ರಬುದ್ಧ ನಡೆ: ಶಿವಮೂರ್ತಿ ಮುರುಘಾ ಶರಣರ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್‌ ಜಾಣ್ಮೆ ಹಾಗೂ ಪ್ರಬುದ್ಧತೆಯನ್ನು ಪ್ರದರ್ಶಿಸಿದೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮೆಚ್ಚುಗೆ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ತಿಂಗಳಿಂದ ತಲೆದೋರಿದ್ದ ರಾಜಕೀಯ ಅಸ್ತಿರತೆಗೆ ಕೊನೆಗೂ ತೆರೆಬಿದ್ದಿದೆ. ನಾಯಕತ್ವ ಬದಲಾವಣೆಯ ಪ್ರಹಸನ ಅಂತ್ಯವಾಗಿದೆ. ನೂತನ ಮುಖ್ಯಮಂತ್ರಿ ಆಯ್ಕೆಯಿಂದ ಆಡಳಿತಾತ್ಮಕ ಸ್ಥಿರತೆ ಮೂಡುವ ವಿಶ್ವಾಸವಿದೆ. ಮಠಾಧೀಶರು ಎತ್ತಿದ ಧ್ವನಿಗೆ ಪೂರಕ ಪ್ರತಿಕ್ರಿಯೆ ದೊರೆತಿದೆ’ ಎಂದು ಹೇಳಿದರು.

‘ಎಸ್‌.ಆರ್‌.ಬೊಮ್ಮಾಯಿ ಅವರಂತೆ ಬಸವರಾಜ ಬೊಮ್ಮಾಯಿ ಕೂಡ ಹೋರಾಟದಿಂದ ಬಂದಿದ್ದಾರೆ. ಪ್ರಗತಿಪರ ಆಲೋಚನೆ, ವೈಚಾರಿಕ ತಿಳಿವಳಿಕೆ ಹೊಂದಿದ್ದಾರೆ. ಪ್ರಾದೇಶಿಕ ಅಸಮಾನತೆ ತೋರದೇ, ಸರ್ವ ಜನಾಂಗದ ಹಿತದೃಷ್ಟಿಯಿಂದ ಆಡಳಿತ ನೀಡಬಹುದು. ಬಿ.ಎಸ್‌.ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿದ ಬೊಮ್ಮಾಯಿ, ಗೃಹ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ’ ಎಂದರು.

‘ಬೊಮ್ಮಾಯಿ ಅವರು ರಾಜಕೀಯ ಏರಿಳಿತಗಳನ್ನು ಕಂಡಿದ್ದಾರೆ. ಸಮಸ್ಯೆ ಎದುರಾದಾಗ ಹೇಗೆ ನಿಭಾಯಿಸಬಲ್ಲರು ಎಂಬುದರ ಬಗ್ಗೆ ಕುತೂಹಲವಿದೆ. ಹೀಗಾಗಿ, ಬೊಮ್ಮಾಯಿ ಆಡಳಿತದ ಬಗ್ಗೆ ಭವಿಷ್ಯ ನುಡಿಯುವುದಿಲ್ಲ. ಆಡಳಿತಾತ್ಮಕ ಅಸಮತೋಲನ ಉಂಟಾಗದ ರೀತಿಯಲ್ಲಿ ನಡೆದುಕೊಳ್ಳುವ ಭರವಸೆ ಇದೆ’ ಎಂದು ಅಭಿಪ್ರಾಯಪಟ್ಟರು.

‘ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅಭಿವೃದ್ಧಿಪರ ಆಡಳಿತ ನೀಡಿದ್ದಾರೆ. ಏಕವ್ಯಕ್ತಿಯಾಗಿ ರಾಜ್ಯದಲ್ಲಿ ಪಕ್ಷ ಕಟ್ಟಿದ್ದಾರೆ. ಅವರ ಸಂಘಟನಾ ಶಕ್ತಿ ಹಾಗೂ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಅವರು ಸಂಕಟದಲ್ಲಿದ್ದಾಗ ಸಾಂತ್ವನ ಹೇಳುವುದು ಸಂತರ ಕಾರ್ಯ. ಮುಖ್ಯಮಂತ್ರಿಯ ಸ್ಥಾನ ಯಾವುದೇ ಮಠದ್ದಲ್ಲ. ರಾಜ್ಯದ ಪ್ರಜೆಗಳು ನೀಡಿದ ಅವಕಾಶ. ಪ್ರಜೆಗಳ ಅಭಿಪ್ರಾಯದ ಮೇರೆಗೆ ಈ ಹುದ್ದೆ ನಿರ್ಧಾರವಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

***

ರಾಜಕೀಯ ಅಸ್ತಿರತೆಯ ಬಗ್ಗೆ ಮಠಾಧೀಶರು ಎತ್ತಿದ ಧ್ವನಿ ಬಿಜೆಪಿ ಹೈಕಮಾಂಡ್‌ ಗಮನಕ್ಕೆ ಬಂದಿರಬಹುದು. ಬಸವರಾಜ ಬೊಮ್ಮಾಯಿ ಆಯ್ಕೆಗೆ ಇದು ನೆರವಾಗಿರುವ ಸಾಧ್ಯತೆ ಇದೆ.

-ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು