ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆ, ರಾಗಿ ಖರೀದಿ ಕೇಂದ್ರ ಆರಂಭ

ಬೆಂಬಲ ಬೆಲೆ ಯೋಜನೆಯಡಿ ಆರಂಭವಾದ ಖರೀದಿ ಕೇಂದ್ರಗಳಿಗೆ ಶಾಸಕ ತಿಪ್ಪಾರೆಡ್ಡಿ ಚಾಲನೆ
Last Updated 28 ಫೆಬ್ರುವರಿ 2020, 9:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಕಡಲೆ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು 10 ಕಡೆಗಳಲ್ಲಿ ಕೇಂದ್ರ ಆರಂಭಿಸಲಾಗಿದ್ದು, ಇಲ್ಲಿಯ ರೈತ ಭವನದಲ್ಲಿ ಗುರುವಾರ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಕಡಲೆ ಜೊತೆಗೆ ರಾಗಿ ಖರೀದಿ ಕೇಂದ್ರಕ್ಕೂ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕಡಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂಬ ರೈತರ ಬೇಡಿಕೆಗೆ ಇದೀಗ ಈಡೇರಿದೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ’ ಎಂದರು.

‘ಕಡಲೆ ಬೆಳೆಯನ್ನು ಪ್ರತಿ ರೈತರಿಂದ 1 ಎಕರೆಗೆ 3 ಕ್ವಿಂಟಲ್‍ನಂತೆ 3 ಎಕರೆಗೆ ಗರಿಷ್ಠ 10 ಕ್ವಿಂಟಲ್ ಮಾತ್ರ ಖರೀದಿಸಲು ಸರ್ಕಾರ ಆದೇಶಿಸಿದೆ. ಅದರ ಮಿತಿಯನ್ನು 20 ಕ್ವಿಂಟಲ್‌ಗೆ ಹೆಚ್ಚಿಸುವಂತೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಹಿಂಗಾರು ರೈತರ ಕೈಹಿಡಿದ ಪರಿಣಾಮ ಜಿಲ್ಲೆಯಲ್ಲಿ ರಾಗಿ ಹಾಗೂ ಕಡಲೆ ಬೆಳೆ ಉತ್ತಮವಾಗಿ ಬಂದಿದೆ. ಕಡಲೆ ಬೆಳೆಗೆ ₹ 4,875 ಬೆಂಬಲ ಬೆಲೆ ನೀಡಿ ಖರೀದಿಸಲಾಗುವುದು. ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಏಜೆನ್ಸಿಯಾಗಿ ನಿಗದಿಪಡಿಸಲಾಗಿದೆ’ ಎಂದು ಹೇಳಿದರು.

‘ಹಿಂದಿನ ವಾರ ಒಂದೇ ದಿನ 15 ಸಾವಿರ ಕ್ವಿಂಟಲ್ ಕಡಲೆ ಎಪಿಎಂಸಿಯಲ್ಲಿ ಆವಕವಾಗಿತ್ತು. ಖರೀದಿಯಾದ ಕಡಲೆ ಛತ್ತೀಸ್‍ಗಡಕ್ಕೆ ಹೋಗಿದೆ ಎಂಬ ಮಾಹಿತಿ ಇದೆ. ಜಿಲ್ಲೆಯಲ್ಲಿನ ಅನೇಕ ರೈತರು ಕನಿಷ್ಠ 40ರಿಂದ 50 ಚೀಲ ಕಡಲೆ ಬೆಳೆದಿದ್ದಾರೆ. ಹೀಗಾಗಿ ಖರೀದಿ ಗರಿಷ್ಠ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಅವರಿಗೆ ಒತ್ತಾಯಿಸುತ್ತೇನೆ’ ಎಂದರು.

‘ಜಿಲ್ಲೆಯಲ್ಲಿ ಈಗಾಗಲೇ ಹೊಸದುರ್ಗ ಮತ್ತು ಚಿಕ್ಕಜಾಜೂರಿನಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರಿಂದ ಬೇಡಿಕೆ ಹೆಚ್ಚಾದ ಕಾರಣ ಚಿತ್ರದುರ್ಗದ ಎಪಿಎಂಸಿಯಲ್ಲಿಯೂ ಹೆಚ್ಚುವರಿಯಾಗಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ’ ಎಂದು ಹೇಳಿದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕ ಜಿ.ಆರ್. ರಾಜಪ್ಪ, ‘ಕಡಲೆ ಬೆಳೆಯನ್ನು ಬೆಂಬಲ ಬೆಲೆಯಡಿ ಖರೀದಿಸಲು ಚಿತ್ರದುರ್ಗ, ಮಾಡನಾಯಕನಹಳ್ಳಿ, ರಾಮಜೋಗಿಹಳ್ಳಿ, ಐಮಂಗಲ, ಮರಡಿಹಳ್ಳಿ, ಹೊಸದುರ್ಗ ರಸ್ತೆ, ರಾಮಗಿರಿ, ಮೊಳಕಾಲ್ಮುರು (ರಾಂಪುರ ಬ್ರಾಂಚ್), ಚಿಕ್ಕಮಧುರೆ ಹಾಗೂ ಬಬ್ಬೂರಿನಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರು ರೈತಸಂಪರ್ಕ ಕೇಂದ್ರದಿಂದ ಫ್ರೂಟ್ಸ್ ಐಡಿ ಸಂಖ್ಯೆ ಕಡ್ಡಾಯವಾಗಿ ಪಡೆದು ಆಯಾ ಸಹಕಾರ ಸಂಘಕ್ಕೆ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ಸದಾಶಿವ, ಆಹಾರ ಇಲಾಖೆ ಉಪನಿರ್ದೇಶಕ ಮಧುಸೂದನ್, ಎಪಿಎಂಸಿ ಅಧ್ಯಕ್ಷ ಶಶಿಕುಮಾರ್, ಜಂಟಿ ನಿರ್ದೇಶಕ ಮಹೇಶ್, ಉಪಾಧ್ಯಕ್ಷ ಪಂಪಣ್ಣ, ರೈತ ಮುಖಂಡರಾದ ಸುರೇಶ್‍ಬಾಬು, ಬಸವರೆಡ್ಡಿ, ತಿಮ್ಮಣ್ಣ, ಈಶ್ವರಪ್ಪ, ಸಿದ್ಧಲಿಂಗಪ್ಪ, ಶರಣಪ್ಪ, ಮಹೇಶ್ವರಯ್ಯ, ನಾಗರಾಜಪ್ಪ, ಶಿವಪ್ರಕಾಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT