ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿವಿಲಾಸ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಕೃಷಿ ಭೂಮಿ, ಮನೆಗಳು ಜಲಾವೃತ

ಆತಂಕದಲ್ಲಿ ದಿನದೂಡುತ್ತಿರುವ ಗ್ರಾಮಸ್ಥರು
Last Updated 6 ಸೆಪ್ಟೆಂಬರ್ 2022, 3:59 IST
ಅಕ್ಷರ ಗಾತ್ರ

ಹೊಸದುರ್ಗ: ವಾಣಿವಿಲಾಸ ಜಲಾಶಯಕ್ಕೆ 89 ವರ್ಷಗಳ ನಂತರ ಕೋಡಿ ಬಿದ್ದಿರುವುದರಿಂದ ಜನರಲ್ಲಿ ಸಹಜವಾಗಿ ಸಂತಸ ಮೂಡಿದೆ. ಆದರೆ, ಜಲಾಶಯದ ಹಿನ್ನೀರು ಪ್ರದೇಶದಲ್ಲಿನ ಗ್ರಾಮಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ನಿತ್ಯ ಆತಂಕದಲ್ಲಿಯೇ ದಿನ ದೂಡುವಂತಾಗಿದೆ.

ಜಲಾಶಯದಲ್ಲಿ ನೀರು ಹೆಚ್ಚಿರುವ ಪರಿಣಾಮ ಹಿನ್ನೀರಿನ ಭೂಮಿಯಲ್ಲಿನ ರೈತರ ಜಮೀನುಗಳು ಮುಳುಗಡೆಯಾಗಿದ್ದು, ಬೆಳೆಗಳು ಸಂಪೂರ್ಣ ಹಾನಿಗೀಡಾಗುವ ಆತಂಕದಲ್ಲಿ ರೈತರಿದ್ದಾರೆ. ಕಳೆದ ಬಾರಿಯ ಮಳೆಗೂ ಕೃಷಿ ಭೂಮಿ ಜಲಾವೃತವಾಗಿದ್ದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು.

ವೇದಾವತಿ ನದಿಗೆ ಮಾರಿಕಣಿವೆ ಸಮೀಪ ಅಣೆಕಟ್ಟು ನಿರ್ಮಿಸಿದ್ದು,8,763 ಹೆಕ್ಟೇರ್‌ ಹಿನ್ನೀರು ಪ್ರದೇಶವಿದೆ. ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿಯ ಅತ್ತೀಮಗ್ಗೆ, ಭೋವಿಹಟ್ಟಿ, ಮುದ್ದಯ್ಯನಹಟ್ಟಿ, ರಾಮಜ್ಜನಹಳ್ಳಿ, ಬಂಟನಗವಿ, ಕರ್ಲಹಟ್ಟಿ, ಬೇವಿನಹಳ್ಳಿ, ಐಯ್ಯನಹಳ್ಳಿ, ಕೆರೆಕೋಡಿಹಟ್ಟಿ,ದಾಸಜ್ಜನಹಟ್ಟಿ,ಕೋಡಿಹಳ್ಳಿ, ಮಲ್ಲಾಪುರ, ನಾಗಯ್ಯನಹಟ್ಟಿ,ತಿಮ್ಮಯ್ಯನಹಟ್ಟಿ,ಅಂಚಿಬಾರಿಹಟ್ಟಿ, ಪೂಜಾರಹಟ್ಟಿ ಹಾಗೂ ಲಕ್ಕಿಹಳ್ಳಿ ವ್ಯಾಪ್ತಿಯಲ್ಲಿನ ಜಮೀನುಗಳು ಜಲಾವೃತವಾಗಿವೆ.

ಮತ್ತೋಡು ಹೋಬಳಿಯ ಅರೇಹಳ್ಳಿ, ತಿಪ್ಪೇನಹಳ್ಳಿ, ಅಜ್ಜಿಕಂಸಾಗರ, ಹೊಸೂರು ಭೋವಿಹಟ್ಟಿ ಹಾಗೂ ಕಸಬಾ ಹೋಬಳಿಯ ಕಪ್ಪಗೆರೆ, ಸಿದ್ಧಪ್ಪನಹಟ್ಟಿ, ಕಾಚಾವರ, ಮುತ್ತಾಗೊಂದಿಯಲ್ಲೂ ಜಮೀನುಗಳು ಮುಳುಗಡೆಯಾಗುವ ಆತಂಕದಲ್ಲಿ ರೈತರು ಇದ್ದಾರೆ. ಮತ್ತೋಡು ಹಾಗೂ ಮಾಡದಕೆರೆ ಹೋಬಳಿಯ ಹಲವು ಹಳ್ಳಿಗಳಲ್ಲಿ ಸ್ವಂತ ಜಮೀನು ಇಲ್ಲದ ರೈತರು ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದು, ಕೆಲವರು ಅಡಿಕೆ, ತೆಂಗಿನ ತೋಟಗಳನ್ನೇ ನಿರ್ಮಿಸಿದ್ದಾರೆ. ಹಲವರು ರಾಗಿ, ಈರುಳ್ಳಿ, ಹತ್ತಿ, ತೊಗರಿ ಸೇರಿ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಬಾರಿ ಎಡಬಿಡದೆ ಸುರಿದ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿದ್ದರಿಂದ ಜಮೀನುಗಳು ಮುಳುಗಿ ನಷ್ಟ ಉಂಟಾಗಿದೆ.

‘ಅರೇಹಳ್ಳಿ ಸಮೀಪ ನೀರು ನುಗ್ಗಿದೆ. ಇನ್ನಷ್ಟು ನೀರು ಹೆಚ್ಚಿದರೆ ಮನೆಗಳಿಗೆ ನುಗ್ಗುವ ಸಾಧ್ಯತೆಯಿದೆ. ಗ್ರಾಮದ ಸಮೀಪದ ದೇವಾಲಯದ ಅರ್ಧಭಾಗದಷ್ಟು ನೀರು ಆವರಿಸಿದೆ. ತೆಂಗಿನ ತೋಟಗಳು ನೀರು ಪಾಲಾಗಿವೆ’ ಎಂದು ರೈತ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ಪೂಜಾರಹಟ್ಟಿ ಮನೆಗಳು ನೀರು ಪಾಲು: ತಾಲ್ಲೂಕಿನ ಅತ್ತಿಮಗೆ ಸಮೀಪದ ಪೂಜಾರಹಟ್ಟಿ ಗ್ರಾಮದಲ್ಲಿನ 7 ಕುಟುಂಬಗಳು ತಮ್ಮ ಜಮೀನಿನಲ್ಲಿಯೇ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿವೆ. 3 ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳೆಲ್ಲರನ್ನೂ ಶಾಲೆಯ ಬಳಿ ಸ್ಥಳಾಂತರಿಸಲಾಗಿದೆ.

‘ತೇವಾಂಶದಿಂದ ಹಲವು ಗ್ರಾಮಗಳಲ್ಲಿ ಜೌಗು ಹೆಚ್ಚಾಗಿದೆ. ಜಮೀನುಗಳಿಗೆ ತೆರಳುವ ರೈತರು ಹರಸಾಹಸ ಪಡಬೇಕಾಗಿದೆ. ವಿ.ವಿ ಸಾಗರದ ನೀರು 100 ಅಡಿಗಿಂತ ಕಡಿಮೆ ಇದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಈ ಬಾರಿ ಜಲಾಶಯ ಭರ್ತಿ ಆಗಿರುವುದರಿಂದ ಜಾನುವಾರುಗಳ ಮೇವಿಗೂ ತೊಂದರೆಯಾಗಿದೆ. ಗ್ರಾಮದ ಸುತ್ತಮುತ್ತ ಹುಡುಕಿದರೂ ಮೇವು ಲಭ್ಯವಾಗುತ್ತಿಲ್ಲ. ಸಂಕಷ್ಟಕ್ಕೆ ಸಿಲುಕಿರುವ ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ರೈತರ ಮನವಿ ಮಾಡಿದ್ದಾರೆ.

ರೈತರ ಸಮಸ್ಯೆ ಪರಿಹರಿಸಲು ಆಗ್ರಹ
ಜಮೀನು ಇಲ್ಲದ ರೈತರು ಹಲವು ವರ್ಷಗಳಿಂದ ಹಿನ್ನೀರು ಪ್ರದೇಶದಲ್ಲಿನ ಮುಳುಗಡೆ ಭೂಮಿಯಲ್ಲಿ ಉಳುಮೆ ಮಾಡುತ್ತ ಜೀವನ ಕಟ್ಟಿಕೊಂಡಿದ್ದಾರೆ. ಇದೀಗ ಅವರ ಜಮೀನುಗಳು ಮುಳುಗಡೆಯಾಗಿದ್ದು, ಆತಂಕದಲ್ಲಿದ್ದಾರೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ, ರೈತರಿಗೆ ಅಗತ್ಯ ನೆರವು ಕಲ್ಪಿಸಬೇಕು ಎಂದು ಮಾಜಿ ಶಾಸಕ ಬಿ.ಜಿ ಗೋವಿಂದಪ್ಪ ಒತ್ತಾಯಿಸಿದ್ದಾರೆ.

*

ಜಮೀನು ತಲುಪಲು ಇದ್ದ ಕಾಲು ದಾರಿಗಳು, ಜಮೀನಿನಲ್ಲಿದ್ದ ಕೊಳವೆಬಾವಿ ಹಾಗೂ ವಿದ್ಯುತ್‌ ಕಂಬಗಳು ನೀರಿನಲ್ಲಿ ಮುಳುಗಿವೆ. ಸುಗಂಧರಾಜ ಹೂ ಬೆಳೆದು ಉತ್ತಮ ಆದಾಯದ ನಿರೀಕ್ಷೆ ಇತ್ತು. ದಿಕ್ಕು ತೋಚದಾಗಿದೆ.
–ಶಿವಣ್ಣ, ಅಂಚಿಬಾರಿಹಟ್ಟಿ

*

ಪೂಜಾರಹಟ್ಟಿ, ಅಂಚಿಬಾರಿಹಟ್ಟಿ, ಇಟ್ಟಿಗೆಹಳ್ಳಿ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಲಾಗಿದೆ. ಸಮೀಕ್ಷೆ ಆರಂಭಿಸಿದ್ದು, ಸದ್ಯ 200 ಎಕರೆ ಭೂಮಿ ಮುಳುಗಡೆಯಾಗಿದೆ. ಸರ್ಕಾರಕ್ಕೆ ಶೀಘ್ರ ವರದಿ ಒಪ್ಪಿಸಲಾಗುವುದು.
–ಮಲ್ಲಿಕಾರ್ಜುನ,ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT