ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಗಳ ಪೋಷಣೆಯೇ ಮಠದ ಧ್ಯೇಯ

ಶರಣ ಸಂಸ್ಕೃತಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ l ಮನ ಸೆಳೆದ ಜನಪದ ನೃತ್ಯಗಳು
Last Updated 23 ಅಕ್ಟೋಬರ್ 2020, 2:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಮೂಲಕನಾಡಿನ ಕಲೆಗಳನ್ನು ಪೋಷಿಸುವುದು ಮುರುಘಾ ಮಠದ ಧ್ಯೇಯವಾಗಿದೆ. ಕಲೆಗಳು ಸಂಸ್ಕೃತಿಯನ್ನು ಕಟ್ಟಿಕೊಡುತ್ತವೆ ಎಂದುಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಬಸವಕೇಂದ್ರ ಮುರುಘಾಮಠದ ಮುರುಘಿ ಶಾಂತವೀರ ಸ್ವಾಮೀಜಿ ವೇದಿಕೆಯಲ್ಲಿ ಶರಣ ಸಂಸ್ಕೃತಿ ಉತ್ಸವ 2020ರ ಅಂಗವಾಗಿ ಗುರುವಾರ ವಿಧ್ಯುಕ್ತವಾಗಿ ಚಾಲನೆಗೊಂಡ ಜನಪದ ಕಲೆಗಳ ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಅನೇಕ ಸಂಸ್ಕೃತಿಗಳಿವೆ. ಆದರೆ, ಶ್ರೀಮಠದ ಶರಣ ಸಂಸ್ಕೃತಿ ಎಲ್ಲರನ್ನೂ ಒಗ್ಗೂಡಿಸಿ, ಜತೆಯಲ್ಲಿ ಕರೆದೊಯ್ಯುವಲ್ಲಿ ನಿರತವಾಗಿದೆ. ಬಸವಾದಿ ಶರಣರ ಆಶಯಗಳಿಗೆ ಪೂರಕವಾಗಿದೆ. ನಾಡಿನ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿಯೂ ಖ್ಯಾತಿ ಗಳಿಸಿದೆ’ ಎಂದರು.

‘ಸಂಸ್ಕೃತಿಯ ಪರಿಸರವೇ ಕಲೆ. ಕಲೆಗಳು ಸಾಂಸ್ಕೃತಿಕ ಲೋಕವನ್ನು ಸೃಷ್ಟಿಸಿವೆ. ಸಂಸ್ಕೃತಿಯ ಹಾದಿಯಲ್ಲಿ ಹೆಜ್ಜೆ ಹಾಕುವುದೇ ಸಾಂಸ್ಕೃತಿಕ ಪರಿಸರ ಸೃಷ್ಟಿಗೆ ಬುನಾದಿಯಾಗಿದೆ. ನಮ್ಮ ಪರಂಪರೆಯೂ ಹಾಗೆಯೇ ಮುಂದುವರಿದು ಬಂದಿದೆ’ ಎಂದು ತಿಳಿಸಿದರು.

ಉತ್ಸವ ಸಮಿತಿ ಗೌರವಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ‘ಭಜನೆಯನ್ನು ಬಸವಾದಿ ಶರಣರ ವಚನಗಳ ಮೂಲಕ ಪ್ರಸ್ತುತ ಪಡಿಸಿ, ರಾಜ್ಯದ ಭಜನಾ ಲೋಕಕ್ಕೆ ಹೊಸ ಆಯಾಮ ನೀಡಿದ್ದೇ ಶಿವಮೂರ್ತಿ ಮುರುಘಾ ಶರಣರು. ಈಗಲೂ ದಾವಣಗೆರೆಯ ಭಜನಾ ತಂಡ ವಚನಗಳ ಮೂಲಕವೇ ನಾಡಿನಲ್ಲಿ ಪ್ರಥಮ ಸ್ಥಾನ ಪಡೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಮ್ಮಲ್ಲಿನ ಜನಪದ ಕಲೆಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಅನಕ್ಷರಸ್ಥರ ನಾಲಿಗೆಯಲ್ಲಿ ಸೃಷ್ಟಿಯಾಗುವ ಹೊಸ ಪದಗಳೇ ಜನಪದ ಗೀತೆಗಳಾಗಿವೆ. ಇವು ಅಕ್ಷರಸ್ಥರಿಗೂ ಮಾರ್ಗದರ್ಶನ ನೀಡುವಲ್ಲಿ ಈಗಲೂ ಮಾದರಿಯಾಗಿವೆ’ ಎಂದರು.

‘ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಭಾಗಗಳಲ್ಲಿ ಹೇಗೆ ಒಂದೊಂದು ರೀತಿಯ ವಿಶೇಷ ಕಲೆಗಳಿವೆಯೋ ಅದೇ ರೀತಿ ಗ್ರಾಮೀಣ ಸೊಗಡಿನ ವೀರಗಾಸೆ, ಭಜನೆ ಕೂಡ ಮಧ್ಯ ಕರ್ನಾಟಕ ಭಾಗದ ಪ್ರಮುಖ ಕಲೆಯಾಗಿದೆ. ಸಂಕಷ್ಟದಲ್ಲಿ ಇರುವಂಥ ಜನಪದ ಕಲೆ ಮತ್ತು ಕಲಾವಿದರನ್ನು ಪೋಷಿಸುವಲ್ಲಿಯೂ ಶ್ರೀಮಠ ಮುಂಚೂಣಿಯಲ್ಲಿದೆ’ ಎಂದು
ತಿಳಿಸಿದರು.

‘ದೇಶದಲ್ಲಿನ ಗ್ರಾಮೀಣ ಕಲೆಗಳಿಂದ ಸುಸಂಸ್ಕೃತರನ್ನು ಸೃಷ್ಟಿಸಲು ಸಾಧ್ಯವಿದೆ. ನಡೆ, ನುಡಿ ಎಲ್ಲವನ್ನೂ ಕಲಿಸುವಲ್ಲಿ ಇವುಗಳ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಇಂತಹ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ’ ಎಂದರು.

ಭೃಂಗೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಣ್ಣ, ಶಾರದಾ ಬ್ರಾಸ್‌ಬ್ಯಾಂಡ್‌ನ ಎಸ್‌.ವಿ.ಗುರುಮೂರ್ತಿ, ಸವಿತಾ ಸಮುದಾಯದ ಮುಖಂಡ ಆರ್.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT