ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ಬಗ್ಗನಡು ಕೆರೆಯಲ್ಲಿ ಮಿಂಚಿ ಮರೆಯಾಗುವ ಪಕ್ಷಿ ಸಂಕುಲ

ಆಸ್ಟ್ರೇಲಿಯಾ, ಉತ್ತರ ಭಾರತದಿಂದ ವಿಶ್ರಾಂತಿ ಪಡೆಯಲು ಬರುವ ಪೇಂಟೆಡ್ ಸ್ಟ್ರೋಕ್ ಪಕ್ಷಿ
Last Updated 10 ನವೆಂಬರ್ 2020, 4:46 IST
ಅಕ್ಷರ ಗಾತ್ರ

ಹಿರಿಯೂರು: ಪೇಂಟೆಡ್ ಸ್ಟ್ರೋಕ್, ನೀಲಕಂಠ, ಬೀ ಈಟರ್, ರೆಡ್ ಮುನಿಯಾ, ಜಂಗಲ್ ಟ್ಯಾಬ್ಲರ್ (ಹರಟೆ ಮಲ್ಲ) ಹಕ್ಕಿಗಳು ಹಿರಿಯೂರು ತಾಲ್ಲೂಕಿನಲ್ಲಿ ನೋಡಲು ಸಿಗುತ್ತವೆ ಎಂದರೆ ಸ್ವತಃ ವನ್ಯಜೀವಿ ಪ್ರಿಯರಲ್ಲೂ ಅಚ್ಚರಿ ಹುಟ್ಟಿಸುತ್ತದೆ.

ಹೌದು, ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಹಿರಿಯೂರಿನ ಎಸ್.ಜೆ.ಸತೀಶ್ ತಮ್ಮೂರಿಗೆ ಅತಿಥಿಯಂತೆ ಬಂದು ಹೋಗುವ ಈ ಹಕ್ಕಿಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.

‘ನವೆಂಬರ್–ಡಿಸೆಂಬರ್ ತಿಂಗಳಲ್ಲಿ ಹೊಸಪೇಟೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಕಡೆಗೆ ಉತ್ತರ ಭಾರತ, ಆಸ್ಟ್ರೇಲಿಯಾ ಮತ್ತಿತರ ಕಡೆಯಿಂದ ಪೇಂಟೆಡ್ ಸ್ಟ್ರೋಕ್ ಹಕ್ಕಿಗಳು ಬರುವುದುಂಟು. ಒಂದು ಹಿಂಡಿನಲ್ಲಿ 50ರಿಂದ 100 ಹಕ್ಕಿಗಳು ಇರುತ್ತವೆ. ಕೆಲವು ಗಂಟೆಗಳವರೆಗೆ ಮಾತ್ರವಿದ್ದು, ವಿಶ್ರಾಂತಿ ಪಡೆದು ಹಾರಿ ಹೋಗುತ್ತವೆ. ಬೆಳಿಗ್ಗೆ 5 ಗಂಟೆಗೇ ಹೋಗಿ ಕಾದು ಕುಳಿತಿದ್ದರೆ ಮಾತ್ರ ಈ ಹಕ್ಕಿಗಳನ್ನು ನೋಡಲು ಸಾಧ್ಯ’ ಎನ್ನುತ್ತಾರೆ
ಸತೀಶ್.

ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕದ ಬಂಡೀಪುರ, ನಾಗರಹೊಳೆ, ಕಬಿನಿ, ಚಿತ್ರದುರ್ಗದ ಜೋಗಿಮಟ್ಟಿ, ಹಿರಿಯೂರು ತಾಲ್ಲೂಕಿನ ಬಗ್ಗನಡು, ವಾಣಿ ವಿಲಾಸ ಜಲಾಶಯದ ಸುತ್ತಮುತ್ತ ಇದುವರೆಗೂ 24 ಸಾವಿರಕ್ಕೂ ಹೆಚ್ಚು ವನ್ಯಜೀವಿಗಳ ಚಿತ್ರಗಳನ್ನು ಸತೀಶ್ ಸೆರೆ
ಹಿಡಿದಿದ್ದಾರೆ.

‘ಬಗ್ಗನಡು ಗ್ರಾಮದ ಕೆರೆ ಸುತ್ತಮುತ್ತ ಇಂಡಿಯನ್ ರೋಲರ್, ಬೀಈಟರ್, ರೆಡ್ ಮುನಿಯಾ, ಹರಟೆಮಲ್ಲ, ಕೊಕ್ಕರೆ, ಬೆಳ್ಳಕ್ಕಿಗಳು ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತವೆ. ಇಂಡಿಯನ್ ರೋಲರ್ ಪಕ್ಷಿಗಳನ್ನು ಚಳಿಗಾಲದಲ್ಲಿ ಮಾತ್ರ ನೋಡಲು ಸಾಧ್ಯ. ಬೇಸಿಗೆಯಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ಪೊದೆಯಲ್ಲಿ ಅವಿತುಕೊಳ್ಳುತ್ತವೆ. ಜಂಗಲ್ ಟ್ಯಾಬ್ಲರ್ ಹೆಸರಿನ ಹರಟೆಮಲ್ಲ ಒಂದೇ ಸಮನೆ ಶಬ್ದ ಮಾಡುತ್ತಿರುತ್ತದೆ. ಬೀಈಟರ್ ಪಕ್ಷಿ ಜೇನುಹುಳುಗಳನ್ನು ಮಾತ್ರ ತಿಂದು ಬದುಕುತ್ತದೆ’ ಎನ್ನುತ್ತಾರೆ ಸತೀಶ್.

‘ವಾಣಿ ವಿಲಾಸ ಜಲಾಶಯಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಕೋಳಿ ಮರಿಗಳನ್ನು ತಿಂದು ಬದುಕುವ ಕಾಡು ಬೆಕ್ಕುಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಜೋಗಿಮಟ್ಟಿ ಪ್ರದೇಶದಲ್ಲಿ ಚಿರತೆ ಮತ್ತು ಕರಡಿಗಳು ಸಾಕಷ್ಟು ಬಾರಿ ಕಂಡುಬಂದಿವೆ’ ಎನ್ನುವರು ಸತೀಶ್‌.

‘ಕೆರೆಗಳಲ್ಲಿ ಸದಾ ಕಾಲ ನೀರು ಇದ್ದರೆ ಹಕ್ಕಿಗಳು ಬೇರೆ ಕಡೆ ಹೋಗುವುದಿಲ್ಲ. ಕೆರೆ ತುಂಬಿಸುವ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದಲ್ಲಿ ಮೀನು ಸಾಕಣೆ ಜತೆಗೆ ಪಕ್ಷಿಗಳ ವಲಸೆ ತಪ್ಪಿಸಲು ನೆರವಾಗುತ್ತದೆ. ಬಗ್ಗನಡು ಕೆರೆ ಅಭಿವೃದ್ಧಿಪಡಿಸಿದರೆ ಮಿನಿ ರಂಗನತಿಟ್ಟು ಪಕ್ಷಿಧಾಮವನ್ನು ಸ್ಥಳೀಯವಾಗಿಯೇ ಕಾಣಲು ಸಾಧ್ಯ’ ಎಂಬುದು ಸತೀಶ್ ಅವರ ಅಂಬೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT