ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ ನಗರಸಭೆ ಕಾಂಗ್ರೆಸ್ ತೆಕ್ಕೆಗೆ

ನಗರಸಭೆಗೆ ಜಯಲಕ್ಷ್ಮಿ ಕೃಷ್ಣಮೂರ್ತಿ ಅಧ್ಯಕ್ಷೆ, ಜೈತುನ್ಬಿ ಉಪಾಧ್ಯಕ್ಷೆಯಾಗಿ ಆಯ್ಕೆ
Last Updated 4 ನವೆಂಬರ್ 2020, 3:28 IST
ಅಕ್ಷರ ಗಾತ್ರ

ಚಳ್ಳಕೆರೆ: ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ ಸದಸ್ಯರಾದ ಜಯಲಕ್ಷ್ಮಿ ಕೃಷ್ಣಮೂರ್ತಿ ಅಧ್ಯಕ್ಷೆಯಾಗಿ ಹಾಗೂ ಜೈತುನ್ಬಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಕಾರಣ 15ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಜಯಲಕ್ಷ್ಮಿ ಹಾಗೂ 20ನೇ ವಾರ್ಡ್‍ನ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯೆ ನಿರ್ಮಲಾ ಪ್ರಸನ್ನ ಅವರು ನಾಮಪತ್ರ ಸಲ್ಲಿಸಿದ್ದರು.

ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 20ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಜೈತುನ್ಬಿ ಮತ್ತು ಒಂದನೇ ವಾರ್ಡ್‌ನ ಬಿಜೆಪಿಯ ಸಾಕಮ್ಮ ಕ್ಯಾತಣ್ಣ ಅವರು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ನಗರಸಭೆಯ ಒಟ್ಟು 31 ಸದಸ್ಯರಲ್ಲಿ ಕಾಂಗ್ರೆಸ್‍ನ 16 ಸದಸ್ಯರು,ಒಬ್ಬರು ಪಕ್ಷೇತರ ಹಾಗೂ ಶಾಸಕರ ಮತ ಸೇರಿ 18 ಮತಗಳನ್ನು ಪಡೆಯುವ
ಮೂಲಕ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಜಯಲಕ್ಷ್ಮಿ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷೆಯಾಗಿ ಜೈತುನ್ಬಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನ ಬಯಸಿದ್ದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ನಿರ್ಮಲಾ ಪ್ರಸನ್ನ ಮತ್ತು ಬಿಜೆಪಿ ಸದಸ್ಯೆ ಸಾಕಮ್ಮ ಜೆಡಿಎಸ್‌ನ 10, ಬಿಜೆಪಿಯ 4 ಒಟ್ಟು 14 ಮತಗಳನ್ನು ಪಡೆದು ಪರಾಭವಗೊಂಡರು.

‘ನ್ಯಾಯಾಲಯದ ಆದೇಶದ ಪ್ರಕಾರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನ. 2ರಂದು ನಡೆಯಬೇಕಿತ್ತು. ಉದ್ದೇಶಪೂರ್ವಕವಾಗಿ ಮುಂದೂಡಿ ನ.3ಕ್ಕೆ ನಡೆಸಿರುವುದು ಯಾವ ನ್ಯಾಯ’ ಎಂದು ಜೆಡಿಎಸ್ ಸದಸ್ಯ ಕೆ.ಸಿ.ನಾಗರಾಜ ಚುನಾವಣಾಧಿಕಾರಿ ಪ್ರಸನ್ನ ಅವರನ್ನು ಪ್ರಶ್ನಿಸಿದರು.

ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಡಿವೈಎಸ್ಪಿ ಶ್ರೀಧರ್ ಮತ್ತು ಚುನಾವಣೆಯಲ್ಲಿ ನಗರಸಭೆಯ ಎಲ್ಲ ಸದಸ್ಯರು ಹಾಜರಿದ್ದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

***

‘ಮಾದರಿ ನಗರ ನಿರ್ಮಾಣ’

ಮೊದಲಿಂದ ಎಲ್ಲ ಸದಸ್ಯರು ಒಗ್ಗಟ್ಟಾಗಿಯೇ ಇದ್ದರು. ಪಕ್ಷದ ಹಿತದೃಷ್ಟಿಯಿಂದ ಕಾಂಗ್ರೆಸ್‍ನ ಎಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿತ್ತು ಎಂದು ಶಾಸಕ ಟಿ.ರಘುಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.

‘ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಮಡಿಲಿಗೆ ಸೇರಿವೆ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುಕೂಲವಾಗಲಿದೆ. ನಗರ ವ್ಯಾಪ್ತಿಯ ಕೆರೆ, ಕಾಲುವೆ, ರಸ್ತೆ ಮತ್ತು ಚರಂಡಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ಮಾದರಿ ನಗರವನ್ನಾಗಿ ನಿರ್ಮಾಣ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT