ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಳ್ಳಕೆರೆಮ್ಮನ ಜಾತ್ರಾ ಮಹೋತ್ಸವದ ಸಡಗರ

ಮಾ.11 ರಿಂದ 16ವರೆಗೆ ನಗರದೇವತೆ ಉತ್ಸವ
ಶಿವಗಂಗಾ ಚಿತ್ತಯ್ಯ
Published 11 ಮಾರ್ಚ್ 2024, 6:41 IST
Last Updated 11 ಮಾರ್ಚ್ 2024, 6:41 IST
ಅಕ್ಷರ ಗಾತ್ರ

ಚಳ್ಳಕೆರೆ: ಬುಡಕಟ್ಟು ಸಮುದಾಯದ ಹೆಣ್ಣುಮಗಳು ಎಂದೇ ಗುರುತಿಸಲಾಗುವ ನಗರದೇವತೆ ಚಳ್ಳಕೆರೆಯಮ್ಮ ದೇವಿಯ ಜಾತ್ರಾ ಮಹೋತ್ಸವ ಮಾ.11 ರಿಂದ 16ರವರೆಗೆ ವಿಜೃಂಭಣೆಯಿಂದ ಜರುಗಲಿದ್ದು, ಉತ್ಸವಕ್ಕೆ ಪಟ್ಟಣ ಸಜ್ಜಾಗಿದೆ. 

ಮಾ.11 ರಂದು ತಾಲ್ಲೂಕಿನ ದೊಡ್ಡೇರಿ ಬಳಿ ಗರಣಿ ಹಳ್ಳದಲ್ಲಿ ಗಂಗಾಪೂಜೆ ನೆರವೇರಿಲಿದ್ದು, ಅಂದು ಸಂಜೆ ನಗರದ ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ವೀರಗಾಸಿ, ಪುರಂತರ ವೀರನಾಟ್ಯ ಹಾಗೂ ವೀರಭದ್ರಸ್ವಾಮಿ ಉತ್ಸವ ನಡೆಯಲಿದೆ. 12ರಂದು ಚಳ್ಳಕೆರೆಯಮ್ಮ ದೇವಿಗೆ ಬಲಕಳಶ,  ಉಡಿ ತುಂಬುವುದು, ಮಾಂಗಲ್ಯಧಾರಣೆ ನಡೆಯಲಿದ್ದು, ಅಂದು ಸಂಜೆ ಜನಪದ ವಾದ್ಯಗಳೊಂದಿಗೆ ಕೋಣನ ಉತ್ಸವ ನಡೆಯಲಿದೆ. 13ರಂದು ದೇವಿಗೆ ಹಿಟ್ಟಿನಾರತಿ, ಬೇವಿನ ಸೀರೆ ಆಚರಣೆ ನಡೆಯಲಿದೆ. 14ರಂದು ಮಧ್ಯಾಹ್ನ 3ಕ್ಕೆ ಮುಕ್ತಿ ಬಾವುಟ ಹರಾಜು ನಡೆದ ನಂತರ ಸಿಡಿ ಉತ್ಸವ, ಮರಗಾಲು, ಕೀಲುಕುದುರೆ, ಸೋಮನ ಕುಣಿತದೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ದೇವಿಯ ಮೆರವಣಿಗೆ ನಡೆಯಲಿದೆ. 15ರಂದು ಮಧ್ಯಾಹ್ನ 3ಕ್ಕೆ ಗಾವು ಸಭೆ, ಪೋತರಾಜರ ವೀರನಾಟ್ಯ ಇದೆ. 16ರಂದು ಓಕುಳಿ ಆಚರಣೆ ಬಳಿಕ ಉಡುಸಲಮ್ಮ, ಚಳ್ಳಕೆರೆಯಮ್ಮ ಹಾಗೂ ವೀರಭದ್ರಸ್ವಾಮಿ ವಿಶೇಷ ಪೂಜೆಯೊಂದಿಗೆ ಜಾತ್ರೆ ಅಂತ್ಯಗೊಳ್ಳುತ್ತದೆ.

ಐತಿಹ್ಯ:

ಚಳ್ಳಕೆರೆ ಸಮೀಪದ ದೊಡ್ಡೇರಿಯಲ್ಲಿ ನೆಲೆಸಿದ್ದ ಚಳ್ಳಕೆರೆಯಮ್ಮ ನಂತರ ಚಳ್ಳಕೆರೆಗೆ ಬಂದು, ಇಲ್ಲಿನ ಮತ್ತೊಬ್ಬ ದೇವತೆ ಬಿಡಾರದಮ್ಮನ ಪಕ್ಕದಲ್ಲಿ  ನೆಲೆಗೊಂಡಳು ಎಂಬ ಐತಿಹ್ಯವಿದೆ. ಚಿತ್ರದುರ್ಗದ ಪಾಳೇಗಾರ ರಾಜವೀರ ಮದಕರಿನಾಯಕನ ಅಣ್ಣ ದೊಡ್ಡ ಮದಕರಿನಾಯಕ ಚಳ್ಳಕೆರೆಯಮ್ಮನನ್ನು  ದೊಡ್ಡೇರಿಯಿಂದ ಕರೆತಂದು ಚಳ್ಳಕೆರೆಯಲ್ಲಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಹಾಗಾಗಿ ರಾಜ ವಂಶಸ್ಥರೇ ದೇವಿ ಉತ್ಸವದಲ್ಲಿ ತಾಳಿಭಾಗ್ಯ ಕೊಡುವ ಸಂಪ್ರದಾಯವಿದೆ. ದೇವತೆ ಚಳ್ಳಕೆರೆಯಮ್ಮನಿಗೆ ಹೆಚ್ಚಾಗಿ ಮಹಿಳೆಯರು ನಡೆದುಕೊಳ್ಳುತ್ತಾರೆ. 

ವಿಶಿಷ್ಟ ಆಚರಣೆಗಳು:

ಹಸಿರು ಬಳೆಗಳನ್ನು ದೇವಿಗೆ ಆರ್ಪಿಸುವುದು, ತಾಳಿಭಾಗ್ಯ ಸಂಪ್ರದಾಯ, ಕುಂಕುಮಾರ್ಚನೆ ಮಾಡಿಸುವುದು, ಉಡಿಗೆ ಸೀರೆ ಉಡಿಸುವುದು, ಎಲೆಪೂಜೆ ಕಟ್ಟಿಸುವುದು, ಹಸಿರು ಬಳೆ, ಉಡಿಯಕ್ಕಿ ನೀಡುವ ಸಂಪ್ರಾಯಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಚಳ್ಳಕೆರೆಯಮ್ಮ ಜನಪದ ಸಂಸ್ಕೃತಿಯಲ್ಲಿ ಬೆರೆತುಹೋಗಿದ್ದು, ಬುಡಕಟ್ಟು ಪರಂಪರೆಯಂತೆ ಉಡಿ ತುಂಬುವ ಕಾರ್ಯ, ಮಾಂಗಲ್ಯಧಾರಣೆ, ಹಿಟ್ಟಿನಾರತಿ, ಸಿಡಿ ಉತ್ಸವ, ಪೋತರಾಜರ ವೀರನಾಟ್ಯ ಮುಂತಾದ ಆಚರಣೆಗಳು ಇದಕ್ಕೆ ಸಾಕ್ಷಿಯಾಗಿವೆ.  

ಚಳ್ಳಕೆರೆ ನಗರದ ಚಳ್ಳಕೆರೆಯಮ್ಮ ದೇವಸ್ಥಾನ
ಚಳ್ಳಕೆರೆ ನಗರದ ಚಳ್ಳಕೆರೆಯಮ್ಮ ದೇವಸ್ಥಾನ
ಚಳ್ಳಕೆರೆ ನಗರದ ಚಳ್ಳಕೆರೆಯಮ್ಮ ದೇವಸ್ಥಾನ
ಚಳ್ಳಕೆರೆ ನಗರದ ಚಳ್ಳಕೆರೆಯಮ್ಮ ದೇವಸ್ಥಾನ

ಕಾಟಪ್ಪ ದೇವರ ತಂಗಿಯೇ ಚಳ್ಳಕೆರೆಯಮ್ಮ ಕಾಟಪ್ಪ ದೇವರಿಗೆ ಚಳ್ಳಕೆರೆಯಮ್ಮ ತಂಗಿಯಾಗಬೇಕು. ತಂಗಿಯನ್ನು ಅತ್ಯಂತ ಪ್ರೀತಿಯಿಂದ ಅಣ್ಣ ಕಾಟಪ್ಪ ನೋಡಿಕೊಳ್ಳುತ್ತಿದ್ದ. ದೊಡ್ಡೇರಿಯಿಂದ ಚಳ್ಳಕೆರೆ ನಡೆದು ಬರುವಾಗ ದಾರಿ ಮಧ್ಯದಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಹಳ್ಳವೊಂದಕ್ಕೆ ಇಳಿಯುವಾಗ ಈಚಲು ಮರಕ್ಕೆ ಕಟ್ಟಿದ್ದ ಕುಂಬದಲ್ಲಿನ ಹೆಂಡವನ್ನು ನೀರೆಂದು ಕುಡಿದಳು. ಇದನ್ನು ನೋಡಿದ ಅಣ್ಣ ಕಾಟಪ್ಪ ತನ್ನ ತಂಗಿಯ ಮೇಲೆ ಕೋಪಗೊಂಡು ಅರ್ಧ ದಾರಿಯಲ್ಲೇ ಅವಳನ್ನು ಬಿಟ್ಟು ಬರುತ್ತಾನೆ. ಸಂಸ್ಕಾರ ಹೊಂದಿದ ಕುಟುಂಬದ ಹೆಣ್ಣು ಮಗಳು ಹೆಂಡ ಕುಡಿದಳಲ್ಲಾ ಎಂಬ ಬೇಸರದಿಂದ ಚಳ್ಳಕೆರೆಯ ಕಾಟಪ್ಪನಹಟ್ಟಿಗೆ ಬಂದ ಅಣ್ಣ ತಂಗಿಯನ್ನು ಮರೆತು ಬಿಡಬೇಕು ಎಂದು ನಿರ್ಧರಿಸುತ್ತಾನೆ. ಅಣ್ಣನ ಹಿಂದೆಯೇ ಧಾವಿಸಿದ ಚಳ್ಳಕೆರೆಯಮ್ಮ ಮನೆಗೆ ಹೋಗದೇ ತನ್ನ ತಂಗಿ ಬಿಡಾರದಮ್ಮ ತಂಗಿದ್ದ ಸ್ಥಳಕ್ಕೆ ಹೋಗಿ ನೆಲೆಯೂರುತ್ತಾಳೆ ಎಂಬ ದಂತಕತೆ ಇದೆ.

ದೇವಿಗೆ ಕೈ ಮುಗಿಯದ ಕಾಮಗೇತಿ ವಂಶಸ್ಥರು ಮ್ಯಾಸಬೇಡ ಬುಡಕಟ್ಟು ಸಮುದಾಯದಲ್ಲಿ ಬರುವ ಕಾಮಗೇತಿ ಬೆಡಗಿನ ವಂಶಸ್ಥರು ಚಳ್ಳಕೆರೆಯಮ್ಮನಿಗೆ ಕೈ ಮುಗಿಯುವುದಿಲ್ಲ. ದೊಡ್ಡ ಜಾತ್ರೆ ನಡೆದರೂ ಇತ್ತ ಕಡೆ ಹೆಜ್ಜೆ ಹಾಕುವುದಿಲ್ಲ. ಮೂಲತಃ ಕಾಮಗೇತಿ ಹೆಣ್ಣು ಮಗಳಾದ ಚಳ್ಳಕೆರೆಯಮ್ಮ ತನ್ನ ಅಣ್ಣ ಕಾಟಪ್ಪನೊಂದಿಗೆ ದೊಡ್ಡೇರಿಯಿಂದ ಬರುವಾಗ ದಾಹ ತಣಿಸಿಕೊಳ್ಳಲು ಈಚಲು ಮರದ ಹೆಂಡವನ್ನು ನೀರೆಂದು ಕುಡಿದದ್ದೇ ಕಾಮಗೇತಿಯವರ ಮುನಿಸಿಗೆ ಕಾರಣವಾಗಿದೆ ಎನ್ನುತ್ತಾರೆ ಹಿರಿಯ ಬರಹಗಾರ ಪಿ.ತಿಪ್ಪೇಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT