ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ | ಫೀಡರ್ ಕಾಲುವೆ ದುರಸ್ತಿ ವಿಳಂಬ: ಹರಿಯದ ನೀರು

ವಿ.ವಿ. ಸಾಗರದ ನೀರಿನಿಂದ ವಂಚಿತ ರಾಣಿಕೆರೆ ಮತ್ತು ಚನ್ನಮ್ಮನಾಗತಿಹಳ್ಳಿ ಕೆರೆ
ಶಿವಂಗಾ ಚಿತ್ತಯ್ಯ
Published 1 ಏಪ್ರಿಲ್ 2024, 6:22 IST
Last Updated 1 ಏಪ್ರಿಲ್ 2024, 6:22 IST
ಅಕ್ಷರ ಗಾತ್ರ

ಚಳ್ಳಕೆರೆ: ನಿರ್ಮಾಣವಾಗಿ ಅರ್ಧ ಶತಮಾನ ಪೂರೈಸುತ್ತಿರುವ ರಾಣಿಕೆರೆ ಫೀಡರ್ ಕಾಲುವೆ ದುಃಸ್ಥಿತಿ ತಲುಪಿದ್ದು, ದುರಸ್ತಿ ನಡೆಯದ ಕಾರಣ, ರಾಣಿಕೆರೆ ಮತ್ತು ಚನ್ನಮ್ಮನಾಗತಿಹಳ್ಳಿ ಕೆರೆಗಳು ವಾಣಿವಿಲಾಸ ಸಾಗರ ಜಲಾಶಯದ ನೀರಿನಿಂದ ವಂಚಿತವಾಗಿವೆ.

ಮೈಸೂರು ಮಹಾರಾಣಿ ಕೆಂಪನಂಜಮ್ಮಣ್ಣಿ ಗೌರವಾರ್ಥ ನಾಲ್ವಡಿ ಕೃಷ್ಣರಾಜ ಒಡೆಯರ್ 1907ರಲ್ಲಿ ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ಬಳಿ ರಾಣಿಕೆರೆ ನಿರ್ಮಿಸಿದ್ದರು. ಆದರೆ, ಈ ಎರಡೂ ಕೆರೆಗಳಿಗೆ ಸೂಕ್ತ ಒಳಹರಿವಿನ ಮೂಲ ಇರಲಿಲ್ಲ. ಹೀಗಾಗಿ ವಿ.ವಿ. ಸಾಗರದಿಂದ ವೇದಾವತಿ ನದಿಗೆ ಹರಿಯುವ ನೀರನ್ನು ಶಿಡ್ಲಯ್ಯನಕೋಟೆ ಬಳಿ ಬಲನಾಲೆ ಮೂಲಕ ರಾಣಿಕೆರೆಗೆ ಹರಿಸುವ ಸಲುವಾಗಿ ಮಾಜಿ ಸಚಿವ ಬಿ.ಎಲ್. ಗೌಡ ಅವರು 1975ರಲ್ಲಿ 38 ಕಿ.ಮೀ. ಉದ್ದದ ರಾಣಿಕೆರೆ ಫೀಡರ್ ಕಾಲುವೆ ನಿರ್ಮಾಣ ಮಾಡಿದ್ದರು. ಈ ಕಾಲುವೆಯು ಎರಡೂ ಕೆರೆಗಳಿಗೆ ನೀರಿನ ಬಹುದೊಡ್ಡ ಮೂಲವಾಗಿತ್ತು. 

ಕಲಮರಹಳ್ಳಿ, ಮಟ್ಲಿಗೆರೆ, ಚಿಕ್ಕೇನಹನಹಳ್ಳಿ, ಯಲಗಟ್ಟೆ, ದೇವರಮರಿಕುಂಟೆ, ಪುರ್ಲೆಹಳ್ಳಿ ಹಾಗೂ ದ್ಯಾವರನಹಳ್ಳಿ ಮೂಲಕ ಫೀಡರ್ ಕಾಲುವೆ ಹಾದು ಹೋಗುತ್ತದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ, ಕಾಲುವೆ ನಿರ್ಮಾಣಕ್ಕೆ ಬಳಸಿದ್ದ ಕಲ್ಲುಗಳು ಸಡಿಲಗೊಂಡು ಬಿದ್ದು ಹೋಗಿವೆ. ಸೀಮೆಜಾಲಿ ಗಿಡಗಳು ದಟ್ಟವಾಗಿ ಬೆಳೆದಿರುವುದಲ್ಲದೇ ಕಾಲುವೆಯಲ್ಲಿ ಸಾಕಷ್ಟು ಪ್ರಮಾಣದ ಹೂಳು ತುಂಬಿಕೊಂಡಿದೆ. ಫೀಡರ್ ಕಾಲುವೆ ದುರಸ್ತಿ ಕಾರ್ಯದಲ್ಲಿ ಸಣ್ಣ ನೀರಾವರಿ ಇಲಾಖೆ ಮೌನ ವಹಿಸಿರುವುದರಿಂದ ಎರಡೂ ಕೆರೆಗಳಿಗೆ ನೀರಿಲ್ಲದೇ ಒಣಗುವ ಪರಿಸ್ಥಿತಿ ಬಂದಿದೆ. 

2022ರಲ್ಲಿ ಸುರಿದ ಅಕಾಲಿಕ ಮಳೆಯಿಂದ ಯಥೇಚ್ಚವಾಗಿ ನೀರು ಹರಿದಿದ್ದರಿಂದ ಕಾಲುವೆಯು ಅಲ್ಲಲ್ಲಿ ಕಿತ್ತುಬಂದಿತ್ತು. ರಭಸದಿಂದ ಹರಿಯುತ್ತಿದ್ದ ನೀರನ್ನು ನಿಯಂತ್ರಿಸುವ ಸಲುವಾಗಿ, ಸಣ್ಣ ನೀರಾವರಿ ಇಲಾಖೆಯು ನೂರಾರು ಮರಳು ಚೀಲಗಳನ್ನು ಬಳಸಿ ಬಲನಾಲೆಯ ತೂಬನ್ನು ಮುಚ್ಚಿ ಹಾಕಿತ್ತು. ಆದರೆ, ನಂತರದ ದಿನಗಳಲ್ಲಿ ವೇದಾವತಿ ನದಿಗೆ ಹರಿದು ಬರುವ ವಿ.ವಿ. ಸಾಗರದ ಹನಿ ನೀರೂ ರಾಣಿಕೆರೆ ತಲುಪಲೇ ಇಲ್ಲ. 1,440 ಎಕರೆ ಅಚ್ಚುಕಟ್ಟು ವ್ಯಾಪ್ತಿ ಹೊಂದಿರುವ ರಾಣಿಕೆರೆಯು ಜಾನುವಾರುಗಳಿಗೂ ನೀರಿಲ್ಲದಂತೆ ಬತ್ತುವ ಸ್ಥಿತಿ ತಲುಪಿದೆ. ಬೇಸಿಗೆಯ ಸುಡು ಬಿಸಿಲಿನಲ್ಲಿ ಜಾನುವಾರುಗಳು ಹಾಗೂ ಜನರ ಕುಡಿಯುವ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

ರಾಣಿಕೆರೆಗೆ ನೀರು ಹರಿಯದ ಕಾರಣ, ರಂಗವ್ವನಹಳ್ಳಿ, ಕರಿಕೆರೆ, ವಿಡಪನಕುಂಟೆ, ಮೀರಾಸಾಬಿಹಳ್ಳಿ, ವಿಶ್ವೇಶಪುರ (ಹೊಸೂರು), ಕಾಲುವೆಹಳ್ಳಿ, ಕ್ಯಾತಗೊಂಡನಹಳ್ಳಿ, ಜಾನಮ್ಮನಹಳ್ಳಿ, ಭರಮಸಾಗರ, ಲಂಬಾಣಿಹಟ್ಟಿ, ರಂಗವ್ವನಹಳ್ಳಿ, ದ್ಯಾವರನಹಳ್ಳಿ, ಪುರ್ಲೆಹಳ್ಳಿ, ಬೊಮ್ಮಸಮುದ್ರ, ದೊಡ್ಡುಳ್ಳಾರ್ತಿ, ದೊಡ್ಡೇರಿ, ರೆಡ್ಡಿಹಳ್ಳಿ, ದೇವರಮರಿಕುಂಟೆ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮದ ಕೊಳವೆಬಾವಿಗಳು ಬತ್ತಿವೆ. ರೈತರ ಕೃಷಿ ಚಟುವಟಿಕೆಗಳಿಗೆ ತೊಡಕಾಗಿದೆ. ರಾಣಿಕೆರೆಯ ಜೊತೆಗೆ ಫೀಡರ್ ಕಾಲುವೆ ಸಂಪರ್ಕ ಕಲ್ಪಿಸುವ ಚನ್ನಮ್ಮನಾಗತಿಹಳ್ಳಿ ಕೆರೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎನ್ನುತ್ತಾರೆ ಅಚ್ಚುಕಟ್ಟು ಭಾಗದ ರೈತರು.

ಸ್ವತಃ ದುರಸ್ತಿಗೆ ಮುಂದಾದ ರೈತರು

ಶಿಡ್ಲಯ್ಯನಕೋಟೆ ಎಡನಾಲೆ ದುರಸ್ತಿ ಆಗಿರುವುದರಿಂದ ಆ ಭಾಗದ ಪರಶುರಾಂಪುರ ಟಿ.ಎನ್.ಕೋಟೆ ಕೆರೆಗೆ ವಿ.ವಿ. ಸಾಗರದ ನೀರು ಯಾವುದೇ ಅಡ್ಡಿಯಿಲ್ಲದೇ ಹರಿಯುತ್ತಿದೆ. ಆದರೆ ಬಲನಾಲೆ ದುರಸ್ತಿಯಾಗದ ಕಾರಣ ಈ ಭಾಗದ ರಾಣಿಕೆರೆ ಹನಿ ನೀರೂ ಬರುತ್ತಿಲ್ಲ. ಹೀಗಾಗಿ ವಿ.ವಿ. ಸಾಗರದ ನೀರನ್ನು ರಾಣಿಕೆರೆಗೆ ಹರಿಸುವ ಉದ್ದೇಶದಿಂದ ರೈತರೇ ಸ್ವಯಂ ಪ್ರೇರಣೆಯಿಂದ ಹಣ ಸಂಗ್ರಹಿಸಿಕೊಂಡು ಕಾಲುವೆ ದುರಸ್ತಿಗೆ ಮುಂದಾಗಿದ್ದಾರೆ. ನರೇಗಾ ಯೋಜನೆ ಜತೆಗೆ ಸ್ಥಳೀಯ ಶಾಸಕರ ವಿಶೇಷ ಅನುದಾನದಲ್ಲಿ ರಾಣಿಕೆರೆ ಫೀಡರ್ ಕಾಲುವೆ ದುರಸ್ತಿ ಮಾಡಿಸುವ ಮೂಲಕ ಜನರು ಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕು ಎಂದು ರಾಣಿಕೆರೆ ನೀರಾವರಿ ಅಚ್ಚುಕಟ್ಟು ಭಾಗದ ರೈತರಾದ ಚಿದಾನಂದಪ್ಪ ಹಾಗೂ ರಂಗವ್ವನಹಳ್ಳಿ ಎನ್.ಅಭಿಷೇಕ ಅವರು ಶಾಸಕರಲ್ಲಿ ಮನವಿ ಮಾಡಿದ್ದಾರೆ.

ಫೀಡರ್ ಕಾಲುವೆ ಬಳಕೆಯಾಗಿದ್ದೇ ಕಡಿಮೆ

1975ರಲ್ಲಿ ಫೀಡರ್ ಕಾಲುವೆ ನಿರ್ಮಾಣವಾಗಿದ್ದರೂ ಅಚ್ಚುಕಟ್ಟು ಭಾಗದ ಎರಡೂ ಕೆರೆಗಳಿಗೆ ನೀರು ಹರಿದಿದ್ದು ಕಡಿಮೆ. ಬರಪೀಡಿತ ಪ್ರದೇಶವಾಗಿರುವ ಕಾರಣ ಜನ–ಜಾನುವಾರುಗಳಿಗೆ ಕೆರೆಯ ನೀರನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕೆರೆಯ ಅಚ್ಚುಕಟ್ಟು ಭಾಗದಲ್ಲಿ ನೀರಾವರಿ ಬೇಸಾಯ ಮಾಡಲು ಅವಕಾಶವಿಲ್ಲ. ಅಧಿಕ ಪ್ರಮಾಣದ ಮಳೆ ಸುರಿದಾಗ ಮಾತ್ರ ನೀರಾವರಿ ಭತ್ತ ಹಾಗೂ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಉಳಿದ ಸಮಯದಲ್ಲಿ ಕೆರೆಯಲ್ಲಿ ನೀರಿದ್ದರೂ ಅದನ್ನು ಕೃಷಿ ಉದ್ದೇಶಕ್ಕೆ ಬಳಕೆ ಮಾಡುತ್ತಿಲ್ಲ ಎಂದು ರೈತರು ಹೇಳುತ್ತಾರೆ. ‘ಅತ್ಯಧಿಕ ಪ್ರಮಾಣದ ಮಳೆ ಸುರಿದಾಗ ಮಾತ್ರ ಫೀಡರ್ ನಾಲೆಯ ಮೂಲಕ ರಾಣಿಕೆರೆಗೆ ನೀರು ಹರಿಯುತ್ತದೆ. ಆದರೆ ವಿ.ವಿ. ಸಾಗರ ನೀರು ಹರಿಸಿದರೂ ಅದು ಸೂಕ್ತವಾಗಿ ಕೆರೆಯನ್ನು ತಲುಪುವುದಿಲ್ಲ. ಇದಕ್ಕೆ ಫೀಡರ್ ಕಾಲುವೆ ವಿನ್ಯಾಸವೇ ಕಾರಣ. ಕಾಲುವೆಯು ಬರುಬರುತ್ತಾ ಕಿರಿದಾಗುತ್ತದೆ. ಅಲ್ಲದೇ ಎತ್ತರದ ಪ್ರದೇಶದಲ್ಲಿರುವ ರಾಣಿಕೆರೆಗೆ ನೀರು ಹರಿಸಬೇಕಾದ ಕಿರು ಕಾಲುವೆಯನ್ನು ತಗ್ಗು ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಬಹುತೇಕ ಸಂದರ್ಭದಲ್ಲಿ ಕೆರೆಯ ನೀರು ಕಾಲುವೆಗೆ ಹರಿಯುತ್ತದೆಯೇ ಹೊರತು ಕಾಲುವೆ ಮೂಲಕ ವಿ.ವಿ. ಸಾಗರದ ನೀರು ಕೆರೆಗೆ ಹರಿದು ಬರುವುದಿಲ್ಲ’ ಎಂದು ಸಾಹಿತಿ ತಿಪ್ಪಣ್ಣ ಮರಿಕುಂಡೆ ಹೇಳಿದರು.

ರಾಣಿಕೆರೆ ಫೀಡರ್ ಕಾಲುವೆಯ ದುಃಸ್ಥಿತಿ 
ರಾಣಿಕೆರೆ ಫೀಡರ್ ಕಾಲುವೆಯ ದುಃಸ್ಥಿತಿ 
ರಾಣಿಕೆರೆ ಫೀಡರ್ ಕಾಲುವೆಯ ದುಃಸ್ಥಿತಿ 
ರಾಣಿಕೆರೆ ಫೀಡರ್ ಕಾಲುವೆಯ ದುಃಸ್ಥಿತಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT