ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಜಾಜೂರು | ₹6.50 ಕೋಟಿ ವೆಚ್ಚದ ಚೆಕ್‌ಡ್ಯಾಂ ನಿರ್ಮಾಣಕ್ಕೆ ಚಾಲನೆ

Published 12 ಜೂನ್ 2024, 14:35 IST
Last Updated 12 ಜೂನ್ 2024, 14:35 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ‘ಸರ್ಕಾರ ಯಾವುದೇ ಇರಲಿ, ಜನರಿಗೆ ಅನುಕೂಲ ಆಗುವ ಕೆಲಸಗಳಿಗೆ ಅನುದಾನ ತಂದು ಜನರ ಋಣ ತೀರಿಸುವುದು ನನ್ನ ಕರ್ತವ್ಯ’ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

ಸಮೀಪದ ಅಂದನೂರು ಹಾಗೂ ಅಂದನೂರು ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಸಾಸಲುಹಳ್ಳ ಸಂತೆಗೆ ರಸ್ತೆ ನಿರ್ಮಾಣ, ಕೋಡಿಸರ, ಶ್ಯಾಗಳೆ ಹಳ್ಳಗಳಿಗೆ ₹6.50 ಕೋಟಿ ವೆಚ್ಚದ ಚೆಕ್‌ಡ್ಯಾಂ ಕಂ ಬ್ಯಾರೇಜ್‌ ಹಾಗೂ ಇತರೆ ನಾಲ್ಕು ಚೆಕ್‌ಡ್ಯಾಂ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ‌

‘ಕಳೆದ ವರ್ಷ ರಾಜ್ಯದಲ್ಲಿ ಬರ ಆವರಿಸಿ ರೈತರು ನೀರಿಗೆ ಪರದಾಡುವಂತಾಯಿತು. ಹೀಗಾಗಿ ಮಳೆಗಾಲದಲ್ಲಿ ಬೀಳುವ ನೀರನ್ನು ಸಂಗ್ರಹಿಸಿಡಲು ಚೆಕ್‌ ಡ್ಯಾಂಗಳು ನೆರವಾಗುತ್ತವೆ. ಉಳಿದ ನಾಲ್ಕು ವರ್ಷಗಳ ಅವಧಿಯಲ್ಲಿ ಅಂದಾಜು ₹40 ಕೋಟಿ ಹಣವನ್ನು ಚೆಕ್‌ಡ್ಯಾಂ ನಿರ್ಮಾಣಕ್ಕೆ ಮೀಸಲಿಡಲಾಗುವುದು’ ಎಂದರು. 

‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ವರ್ಷ ಕಳೆದರೂ ಯಾವ ಕಾಂಗ್ರೆಸ್‌ ಶಾಸಕರೂ ಅನುದಾನ ತಂದು ಭೂಮಿಪೂಜೆ ನಡೆಸಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನನ್ನ ಕೆಲಸಗಳಿಗೆ ಸಹಕರಿಸುವ ಭರವಸೆ ಇದೆ. ಜತೆಗೆ ಸರ್ಕಾರದಿಂದ ಅನುದಾನವನ್ನು ಹೇಗೆ ತರಬೇಕು ಎಂಬುದು ನನಗೆ ಗೊತ್ತಿದೆ. ನಾನು ಕೈಗೊಂಡಿರುವ ಕಾಮಗಾರಿಗಳನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿ ನಿಮ್ಮ ಋಣವನ್ನು ತೀರಿಸುತ್ತೇನೆ’ ಎಂದು ಚಂದ್ರಪ್ಪ ಭರವಸೆ ನೀಡಿದರು. 

ಸಮೀಪದ ಸಾಸಲು ಭೂತಪ್ಪ ದೇವಸ್ಥಾನದ ಬಳಿ ₹33 ಕೋಟಿ ವೆಚ್ಚದಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಿಸಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸುತ್ತೇನೆ ಎಂದರು.

‘ಶಾಸಕರು ಕೋಟಿ ಕೋಟಿ ರೂಪಾಯಿ ಅನುದಾನ ತಂದರೂ, ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿ, ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥ ರಾಜಶೇಖರ್‌ ಶಾಸಕರಿಗೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಪ್ಪ, ‘ನಿಮ್ಮ ನಿಮ್ಮ ಊರುಗಳಲ್ಲಿ ನಡೆಯುವ ಕಾಮಗಾರಿಗಳಲ್ಲಿ ತೊಡಗಿಸಿಕೊಂಡು ಗುಣಮಟ್ಟದ ಕೆಲಸವನ್ನು ಮಾಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು. 

ಬಿಜೆಪಿ ಮಂಡಲ ಅಧ್ಯಕ್ಷ ಎಂ.ಬಿ. ಸಿದ್ಧೇಶ್‌, ಪ್ರಕಾಶ್‌ ಮಾತನಾಡಿದರು. ಸಣ್ಣ ನೀರಾವರಿ ಇಲಾಖೆಯ ಎಇಇ ನಾಗರಾಜ್‌, ಪರಮೇಶ್‌, ರುದ್ರಪ್ಪ, ಭೂತೇಶ್‌, ಬಸಪ್ಪ, ತಿಮ್ಮಣ್ಣ, ನಾಗರಾಜ್‌, ಜಯಣ್ಣ, ಮುದ್ದಪ್ಪ, ಪ್ರವೀಣ್‌, ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ ಎಂ. ಗಾಯತ್ರಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT