ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಳ್ಳಕೆರೆ | ಮನೆಗೆ ನುಗ್ಗಿ ₹3.95 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

ದಂಪತಿಯ ಕೈಕಾಲು ಕಟ್ಟಿಹಾಕಿ ಕೃತ್ಯ; ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ
Published 23 ಜೂನ್ 2024, 16:02 IST
Last Updated 23 ಜೂನ್ 2024, 16:02 IST
ಅಕ್ಷರ ಗಾತ್ರ

ಚಳ್ಳಕೆರೆ: ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಮೂವರು ಕಳ್ಳರು, ಮನೆಯಲ್ಲಿದ್ದವರಿಗೆ ಚಾಕು ತೋರಿಸಿ, ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಶನಿವಾರ ತಡರಾತ್ರಿ ನಗರದ ಬೆಂಗಳೂರು ರಸ್ತೆಯ ನಿರ್ಮಲ ಲಾಡ್ಜ್ ಬಳಿಯ ಮೇಗಳ ಮನೆ ಸಣ್ಣನಿಂಗಪ್ಪ ಬಡಾವಣೆಯಲ್ಲಿ ನಡೆದಿದೆ.

ದರೋಡೆಕೋರರ ತಂಡವು ₹25,000 ನಗದು, ₹3.95 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದೆ. ಹಲ್ಲೆಗೊಳಗಾದ ಶಿಕ್ಷಕ ಬಿ.ಈರಣ್ಣ ಮತ್ತು ಪತ್ನಿ ರಾಧಾ ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

‘ಕಳ್ಳರನ್ನು ನೋಡಿ ಗಾಬರಿಯಿಂದ ಕಿರುಚಾಡಿದಾಗ, ದುಷ್ಕರ್ಮಿಗಳು ಪತ್ನಿಯ ಎಡಗಾಲಿಗೆ ಕೋಲಿನಿಂದ ಥಳಿಸಿದರು. ನಂತರ ಇಬ್ಬರನ್ನೂ ಪಂಚೆ ಹಾಗೂ ಟವೆಲ್‍ನಿಂದ ಕಟ್ಟಿ ಹಾಕಿ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚಿದರು. ನನ್ನ ಬೆನ್ನಿಗೆ ಕೋಲಿನಿಂದ ಹೊಡೆದು ಇಬ್ಬರಿಗೂ ಪ್ರಾಣ ಬೆದರಿಕೆ ಹಾಕಿದರು. ಪತ್ನಿಯ ಮೈಮೇಲಿದ್ದ ಆಭರಣ ಕಿತ್ತುಕೊಂಡು ಪರಾರಿಯಾದರು’ ಎಂದು ಈರಣ್ಣ ಹೇಳಿದ್ದಾರೆ.

ಈರಣ್ಣ ಅವರು ಚಳ್ಳಕೆರೆ ತಾಲ್ಲೂಕಿನ ಹಿರೇಮಧರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಟಿ.ಕುಮಾರ್, ಡಿವೈಎಸ್ಪಿ ಟಿ.ಬಿ.ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲಿಸಿದರು. ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರಿಗೆ ಆತ್ಮಸ್ಥೈರ್ಯ ತುಂಬಿದರು.

‘ದರೋಡೆಕೋರರ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಎಸ್ಪಿ ತಿಳಿಸಿದ್ದಾರೆ.

‘ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪಿಎಸ್‍ಐ ಧರೇಪ್ಪಾ ಬಾಳಪ್ಪ ದೊಡ್ಡಮನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT