ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಬುಧವಾರ ನಸುಕಿನಲ್ಲಿ ಗುಡುಗು, ಮಿಂಚು ಸಮೇತ ಭಾರಿ ಮಳೆ ಸುರಿದಿದೆ.
ನಸುಕಿನ 3 ಗಂಟೆಗೆ ಆರಂಭವಾದ ಮಳೆ 5 ಗಂಟೆಯವರೆಗೂ ಸುರಿಯಿತು. ನಗರದದಲ್ಲೂ ಧಾರಾಕಾರ ಮಳೆಯಾಗಿದ್ದು ರಸ್ತೆಗಳಲ್ಲಿ ನೀರು ಹರಿಯಿತು.
ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದರೂ ಜಿಲ್ಲೆಯಲ್ಲಿ ಬರದ ಛಾಯೆ ಇತ್ತು. ಶೇಂಗಾ, ಮೆಕ್ಕೆಜೋಳ ಬಿತ್ತನೆ ತಡವಾಗುತ್ತಿದ್ದ ಕಾರಣ ರೈತರು ಆತಂಕಗೊಂಡಿದ್ದರು. ಈಗ ಸೂಕ್ತ ಸಮಯಕ್ಕೆ ಮಳೆಯಾಗಿದ್ದು ಕೃಷಿ ಚಟುವಟಿಕೆ ಗರಿಗೆದರಿವೆ.
ಆಂಧ್ರಪ್ರದೇಶದ ಜೊತೆ ಗಡಿ ಹಂಚಿಕೊಂಡಿರುವ ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯಲ್ಲಿ ಬರದ ಛಾಯೆ ಇತ್ತು. ಸದ್ಯ ಮೊಳಕಾಲ್ಮುರು ವ್ಯಾಪ್ತಿಯಲ್ಲಿ 8 ಸೆಂ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲೂ ಭಾರಿ ಮಳೆಯಾಗಿದೆ
'ಬಿತ್ತನೆ ಹಿಂದೆ ಬೀಳುತ್ತದೆ ಎಂಬ ಭಯದಿಂದ ಮೂರು ದಿನಗಳ ಹಿಂದಷ್ಟೇ ಒಣ ಭೂಮಿಗೆ ಶೇಂಗಾ ಬಿತ್ತನೆ ಮಾಡಿದ್ದೆವು. ಈಗ ಮಳೆಯಾಗಿದ್ದು ಮೊಳಕೆಯೊಡೆಯಲು ಅನುಕೂಲವಾಗಲಿದೆ' ಎಂದು ಚಳ್ಳಕೆರೆಯ ರೈತರೊಬ್ಬರು ಸಂತಸ ವ್ಯಕ್ತಪಡಿಸಿದರು.
ಜಮೀನಿಗೆ ನುಗ್ಗಿದ ನೀರು; ಹೊಳಲ್ಕೆರೆ ತಾಲ್ಲೂಕಿನ ಹಲವೆಡೆ ಭಾರಿ ಮಳೆಯಿಂದಾಗಿ ಜಮೀನಿಗೆ ಮಳೆ ನೀರು ನುಗ್ಗಿ ಮೆಕ್ಕೆಜೋಳ ಬೆಳೆ ಕೊಚ್ಚಿ ಹೋಗಿದೆ. ಚಿಕ್ಕಜಾಜೂರು, ಬಿ.ದುರ್ಗ ಸಮೀಪದ ಜಮೀನಿಗೆ ಹಳ್ಳದ ನೀರು ನುಗ್ಗಿ ಬೆಳೆ ಹಾನಿಯಾಗಿದೆ.