ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಶೂನ್ಯಪೀಠ ಏರಿದ ಮುರಿಗಾಶ್ರೀ ಭಾವಚಿತ್ರ, ಪಾದುಕೆ

Last Updated 6 ಅಕ್ಟೋಬರ್ 2022, 6:21 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಶೂನ್ಯಪೀಠದಲ್ಲಿ ಮುರಿಗಾ ಶಾಂತವೀರ ಸ್ವಾಮೀಜಿ‌ ಭಾವಚಿತ್ರ ಹಾಗೂ ಪಾದುಕೆ ಇಟ್ಟು ಗುರುವಾರ ಸಾಂಪ್ರದಾಯಿಕವಾಗಿ ನೆರವೇರಿಸಲಾಯಿತು. ಶೂನ್ಯಪೀಠಾರೋಹಣದ ಬಳಿಕ ವಚನಗಳ ಹಸ್ತಪ್ರತಿ ಹಾಗೂ ಅಲ್ಲಮಪ್ರಭು, ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಮಠದ ಪ್ರಾಂಗಣದಲ್ಲಿರುವ ಪೀಠದ ಮೇಲೆ ಮಠದ ಕರ್ತೃ ಮುರಿಗಾ ಶಾಂತವೀರ ಸ್ವಾಮೀಜಿ‌ ಭಾವಚಿತ್ರವನ್ನು ಪೀಠದ ಮೇಲೆ ಇಟ್ಟು ಸಂಪ್ರದಾಯ ನೆರವೇರಿಸಲಾಯಿತು. ಮಠದ ಭಕ್ತರು ಮುರುಘಾ ಪರಂಪರೆಗೆ ಸಂಬಂಧಿಸಿದ ಘೋಷಣೆ ಮೊಳಗಿಸಿದರು. ಶಿವಮೂರ್ತಿ ಮುರುಘಾ ಶರಣರು ರತ್ನ ಖಚಿತ ಕಿರೀಟ ಹಾಗೂ ಬೆಳ್ಳಿ ಸಿಂಹಾಸನ ತ್ಯಜಿಸಿ ರುದ್ರಾಕ್ಷಿ ಕಿರೀಟ ಧರಿಸಿ, ಮರದ ಸಿಂಹಾಸನದಲ್ಲಿ ಪೀಠಾರೋಹಣ ಮಾಡುತ್ತಿದ್ದ ವಾಡಿಕೆ ಮೂರು ದಶಕದಿಂದ ನಡೆದು ಬಂದಿತ್ತು.

ಶೂನ್ಯಪೀಠ ಪರಂಪರೆಯ ಮುರುಘಾ ಮಠದಲ್ಲಿ ಶೂನ್ಯಪೀಠಾರೋಹಣ ಪ್ರತಿ ವರ್ಷ ವೈಭವದಿಂದ ನಡೆಯುತ್ತದೆ. ಶಿವಮೂರ್ತಿ ಮುರುಘಾ ಶರಣರ ಅನುಪಸ್ಥಿತಿಯಲ್ಲಿ ಮಠದ ಕರ್ತೃ ಮುರಿಗಾ ಶಾಂತವೀರ ಸ್ವಾಮೀಜಿ‌ ಭಾವಚಿತ್ರವನ್ನು ಪೀಠದ ಮೇಲೆ ಇಟ್ಟು ಸಂಪ್ರದಾಯ ನೆರವೇರಿಸಲು ಶರಣ ಸಂಸ್ಕೃತಿ ಉತ್ಸವ ಸಮಿತಿ ತೀರ್ಮಾನಿಸಿತ್ತು.

ಶೂನ್ಯಪೀಠಾರೋಹಣದ ಬಳಿಕ ವಚನಗಳ ಹಸ್ತಪ್ರತಿಯ ಕಟ್ಟನ್ನು ಹೊರತಂದು ಪಲ್ಲಕ್ಕಿಯ ಮೇಲೆ ಇಡಲಾಯಿತು. ಒಂದೆಡೆ ಅಲ್ಲಮಪ್ರಭು ಹಾಗೂ ಮತ್ತೊಂದೆಡೆ ಬಸವಣ್ಣನವರ ಭಾವಚಿತ್ರ ಇಟ್ಟು ಮಠದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು.

ಮಾಜಿ ಆಡಳಿತಾಧಿಕಾರಿಗೆ ತಡೆ:

ಶೂನ್ಯಪೀಠಾರೋಹಣದಲ್ಲಿ ಪಾಲ್ಗೊಳ್ಳಲು ಮಠಕ್ಕೆ ಬಂದಿದ್ದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಅವರನ್ನು ಮಠದ ಆವರಣದಲ್ಲಿ ಪೊಲೀಸರು ತಡೆದರು. ಈ ವೇಳೆ ಪೊಲೀಸರು ಹಾಗೂ ಬಸವರಾಜನ್ ನಡುವ ಮಾತಿನ ಚಕಮಕಿ ಉಂಟಾಯಿತು. ಈ ವೇಳೆ ನೂಕಾಟ ತಳ್ಳಾಟವೂ ನಡೆಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

'15 ವರ್ಷಗಳ ಬಳಿಕ ಶೂನ್ಯಪೀಠಾರೋಹಣದಲ್ಲಿ ಪಾಲ್ಗೊಳ್ಳಲು ಮಠಕ್ಕೆ ಬಂದಿದ್ದೆ. ಯಾರೊಬ್ಬರು ನನಗೆ ಅಡ್ಡಿಪಡಿಸಿಲ್ಲ. ಜಾಗ ಕಿರಿದಾಗಿದ್ದ ಕಾರಣಕ್ಕೆ ನೂಕಾಟ, ತಳ್ಳಾಟ ಉಂಟಾಗಿತ್ತು. ಇದರಿಂದ ಯಾವುದೇ ತೊಂದರೆ ಉಂಟಾಗಿಲ್ಲ. ಹಸ್ತಪ್ರತಿ ಮೆರವಣಿಗೆಯಲ್ಲಿಯೂ ಪಾಲ್ಗೊಂಡೆ' ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT