ಹಿರಿಯೂರು: ವಾಣಿವಿಲಾಸ ಸಾಗರ ಅಣೆಕಟ್ಟೆ 3 ವರ್ಷಗಳಲ್ಲಿ 3 ಬಾರಿ ಕೋಡಿ ಬಿದ್ದಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹೀಗಾಗಿ ಜಿಲ್ಲೆಯ ಏಕೈಕ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಾರಂಭ ಮಾಡಬೇಕು. ಮತ್ತೆ ಆರಂಭಿಸಲು ಆಗದಿದ್ದರೆ ಬಂಡವಾಳ ಹೂಡಿರುವ ಷೇರುದಾರರ ಹಣ ಮರಳಿಸಬೇಕು ಎಂಬ ಹಕ್ಕೊತ್ತಾಯ ತಾಲ್ಲೂಕಿನಲ್ಲಿ ಆರಂಭವಾಗಿದೆ.

ಈಚೆಗೆ ಕಾರ್ಖಾನೆ ಕಾರ್ಮಿಕರ ಸಂಘಟನೆಯ ಮುಖ್ಯಸ್ಥರ ಮನೆಯಲ್ಲಿ ಔಪಚಾರಿಕವಾಗಿ ಸಭೆ ನಡೆಸಿರುವ ಹಿರಿಯೂರು, ಶಿರಾ, ಚಳ್ಳಕೆರೆ, ಚಿತ್ರದುರ್ಗ ತಾಲ್ಲೂಕುಗಳ ಕಬ್ಬು ಬೆಳೆಗಾರರು, ಮೊದಲನೆಯದಾಗಿ ಕಾರ್ಖಾನೆಯನ್ನು ಸರ್ಕಾರ ಅಥವಾ ಖಾಸಗಿಯವರ ಮೂಲಕ ಆರಂಭಿಸುವಂತೆ ಒತ್ತಾಯಿಸಲು ನಿರ್ಧರಿಸಿದರು. ‘ಪ್ರಸ್ತುತ ಕಾರ್ಖಾನೆ ಪುನರಾರಂಭ ಅಸಾಧ್ಯ’ ಎಂದು ಸರ್ಕಾರ ತೀರ್ಮಾನಿಸಿದಲ್ಲಿ ಷೇರುದಾರರ ಹಣ ಮರಳಿಸುವಂತೆ ಕೋರಿ ಹೋರಾಟ ನಡೆಸಲೂ ಈ ವೇಳೆ ತೀರ್ಮಾನಿಸಲಾಗಿದೆ.

1962ರಲ್ಲಿ ನೋಂದಣಿಯಾಗಿರುವ ಸಕ್ಕರೆ ಕಾರ್ಖಾನೆಗೆ ಒಟ್ಟಾರೆ 275 ಎಕರೆ ಜಮೀನು ಇದ್ದು, ಅದರಲ್ಲಿ 210 ಎಕರೆ ಜಮೀನು ಇಂಡಸ್ಟ್ರಿ ಉದ್ದೇಶಕ್ಕೆಂದು ಭೂ ಪರಿವರ್ತನೆ ಹೊಂದಿದೆ. 1971– 72ರಲ್ಲಿ ಆರಂಭಗೊಂಡು, 1984– 85ರವರೆಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿತ್ತು. 1985ರಲ್ಲಿ ಕಬ್ಬಿನ ಕೊರತೆಯ ಕಾರಣಕ್ಕೆ ಸ್ಥಗಿತಗೊಂಡು ಲೇ ಆಫ್ ಘೋಷಿಸಲಾಯಿತು.

1993– 94ರಲ್ಲಿ ವಾಣಿವಿಲಾಸ ಅಣೆಕಟ್ಟೆಗೆ 100 ಅಡಿಗಿಂತ ಹೆಚ್ಚು ನೀರು ಬಂದ ಕಾರಣ ರೈತರು ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಪುನರಾರಂಭಗೊಂಡ ಕಾರ್ಖಾನೆ, 2002ರವರೆಗೆ ನಡೆದು 2004ರಲ್ಲಿ ಮತ್ತೆ ಸ್ಥಗಿತಗೊಂಡಿತು. 2019ರಿಂದ ವಾಣಿವಿಲಾಸ ಅಣೆಕಟ್ಟೆಗೆ ದಾಖಲೆಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದರೂ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಬದ್ಧತೆಯ ಹೋರಾಟ ನಡೆದಿಲ್ಲ.

‘275 ಎಕರೆ ವಿಸ್ತೀರ್ಣದಲ್ಲಿರುವ ಸಕ್ಕರೆ ಕಾರ್ಖಾನೆ ಪುನರಾರಂಭಗೊಂಡಲ್ಲಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ. ಇಲ್ಲವಾದಲ್ಲಿ ಕಾರ್ಖಾನೆ ಆರಂಭಕ್ಕೆ ಹಣ ತೊಡಗಿಸಿರುವ ಅಂದಾಜು 14,500 ಜನರ ಷೇರು ಬಂಡವಾಳವನ್ನು ಬಡ್ಡಿ ಸಹಿತ ಮರಳಿಸಬೇಕು. ಈ ಮೊತ್ತ ಪ್ರಸ್ತುತ ₹ 1.38 ಕೋಟಿಯಷ್ಟಿದ್ದು ಇದರಲ್ಲಿ ಸರ್ಕಾರದ ಶೇ 49ರಷ್ಟು ಪಾಲಿದೆ. ಕಾರ್ಖಾನೆಯ ಸಮಾಪನಾಧಿಕಾರಿಗಳು, ಸಂಸದರು ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಷೇರುದಾರರ ಸಭೆ ಕರೆದು ದೃಢ ತೀರ್ಮಾನ ಕೈಗೊಳ್ಳಬೇಕು’ ಎಂಬುದು ರೈತ ಮುಖಂಡ ಎಂ.ಆರ್. ಪುಟ್ಟಸ್ವಾಮಿ ಅವರ ಆಗ್ರಹ.

ತುಕ್ಕು ಹಿಡಿಯುತ್ತಿವೆ

ಕಾರ್ಖಾನೆ ಆವರಣದಲ್ಲಿ ಮುಖ್ಯ ಸ್ಥಾವರ, ಪೂರಕ ಮಳಿಗೆಗಳು (ಸಕ್ಕರೆ ಗೋದಾಮು, ಮಳಿಗೆಗಳು), ತೂಕದ ಮನೆಗಳು, ಅತಿಥಿ ಗೃಹ, ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಅಧಿಕಾರಿಗಳ ಬಂಗಲೆಗಳು ಶಿಥಿಲಗೊಂಡಿವೆ. ಆರೂ ಕ್ಷೇತ್ರಗಳ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಕಾರ್ಖಾನೆ ಪುನರಾರಂಭವಾಗುವಂತೆ ಮಾಡಿದಲ್ಲಿ ನೂರಾರು ಕಾರ್ಮಿಕ ಕುಟುಂಬಗಳಿಗೆ, ರೈತರಿಗೆ, ಪರೋಕ್ಷವಾಗಿ ಸಾವಿರಾರು ಕುಟುಂಬಗಳಿಗೆ ಆಧಾರವಾಗಲಿದೆ’ ಎಂದು ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಹೇಳುತ್ತಾರೆ.

‘ದಿ. ಬಿ.ಎಲ್. ಗೌಡರಂತಹ ಮೇಧಾವಿ ರಾಜಕಾರಣಿಗಳ ಮುಂದಾಲೋಚನೆ ಫಲವಾಗಿ ತಲೆ ಎತ್ತಿದ್ದ ಸಕ್ಕರೆ ಕಾರ್ಖಾನೆ ಪ್ರಸ್ತುತ ಸ್ಥಗಿತವಾಗಿರುವುದು ಬೇಸರದ ಸಂಗತಿ. ಮತ್ತೊಮ್ಮೆ ಕಾರ್ಖಾನೆ ಆರಂಭವಾಗಬೇಕು ಎಂಬುದು ಜಿಲ್ಲೆಯ ಬಹುಜನರ ಅಪೇಕ್ಷೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ. ಹೊರಕೇರಪ್ಪ.

ಮಾರಾಟದಿಂದ ಸಂರಕ್ಷಣೆ

‘2013ರಲ್ಲಿ ಕಾರ್ಖಾನೆ ಮಾರಾಟಕ್ಕೆ ಸರ್ಕಾರ ಆದೇಶ ನೀಡಿತ್ತು. ರೈತ ಮುಖಂಡರು ಕಾರ್ಮಿಕರ ವಿರೋಧದ ಫಲವಾಗಿ ಕಾರ್ಖಾನೆ ಮಾರಾಟವಾಗಲಿಲ್ಲ. ನಾಲ್ಕು ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹಾಗೂ ಮಳೆ ನೀರು ವಾಣಿವಿಲಾಸಕ್ಕೆ ಹರಿದು ಬರುತ್ತಿದ್ದು ಅಧಿಕಾರಸ್ಥರು ಬದ್ಧತೆ ತೋರಿಸಿದಲ್ಲಿ ಕಾರ್ಖಾನೆ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಬೆಳೆಗೆ ಪ್ರೋತ್ಸಾಹ ನೀಡಿ ಆಧುನಿಕ ಯಂತ್ರಗಳನ್ನು ಅಳವಡಿಸಿ ಮತ್ತೊಮ್ಮೆ ಸೈರನ್ ಮೊಳಗುವಂತೆ ಮಾಡಬಹುದಲ್ಲವೇ?’ ಎಂಬುದು ರೈತರ ಪ್ರಶ್ನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.