ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ತ್ಯಾಗರಾಜ ಮಾರುಕಟ್ಟೆಗೆ ಹೈಟೆಕ್‌ ಸ್ಪರ್ಶ

₹ 2.73 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ
Last Updated 26 ಮಾರ್ಚ್ 2023, 7:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಬರೋಬ್ಬರಿ ₹ 2.73 ಕೋಟಿ ವೆಚ್ಚದಲ್ಲಿ ತ್ಯಾಗರಾಜ ಮಾರುಕಟ್ಟೆಯನ್ನು ಹೈಟೆಕ್‌ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಮೂರು ಅಂತಸ್ತಿನಲ್ಲಿ ಮಳಿಗೆ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ತಿಳಿಸಿದರು.

ನಗರದ ವಾಸವಿ ವಿದ್ಯಾ ಸಂಸ್ಥೆ ಮುಂಭಾಗದಲ್ಲಿ ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ತ್ಯಾಗರಾಜ ಮಾರುಕಟ್ಟೆ ನಗರದ ಹಳೆಯ ಮಾರುಕಟ್ಟೆಯಾಗಿದೆ. ಇದು ಸೊಪ್ಪಿನ ಮಾರುಕಟ್ಟೆ ಎಂದು ಸಹ ಹೆಸರಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ವ್ಯಾಪಾರಸ್ಥರು ಹಾಗೂ ಜನರು ಮನವಿ ಸಲ್ಲಿಸಿದ್ದರು. ಅದರಂತೆ ₹ 2.73 ಕೋಟಿ ವೆಚ್ಚದಲ್ಲಿ 75ಕ್ಕಿಂತ ಹೆಚ್ಚು ಮಳಿಗೆ ನಿರ್ಮಿಸಲಾಗುತ್ತಿದೆ. ಬಳಿಕ ಇಲ್ಲಿನ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

‘ನೂತನ ಮಾರುಕಟ್ಟೆ ನಿರ್ಮಾಣದಿಂದ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ವಾಹನ ಸಂಚಾರಕ್ಕೆ ಸಹಕಾರಿಯಾಗಲಿದೆ. ಕಿರಿದಾದ ರಸ್ತೆಯ ಕಾರಣಕ್ಕೆ ಜನರು ತೊಂದರೆ ಅನುಭವಿಸಿದರು. ಶೀಘ್ರದಲ್ಲೇ ಇದಕ್ಕೆಲ್ಲ ಮುಕ್ತಿ ಸಿಗಲಿದೆ’
ಎಂದರು.

‘ದೊಡ್ಡಪೇಟೆ, ಅಯ್ಯಣ್ಣಪೇಟೆ, ಬುರುಜನಹಟ್ಟಿ, ಚಿಕ್ಕಪೇಟೆ ಸೇರಿದಂತೆ ಸುತ್ತಲಿನ ಜನರು ಈ ಮಾರುಕಟ್ಟೆ ಮೇಲೆ ಅವಲಂಬಿತರಾಗಿದ್ದಾರೆ. ಹಳೆಯ ಕಟ್ಟಡ ಶಿಥಿಲಾವಸ್ಥೆ ತಲುಪಿದ ಕಾರಣಕ್ಕೆ ನಗರಸಭೆ ಅನುದಾನ ಬಳಸಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಹಳೆ ಸಂತೇ ಮೈದಾನ ರಸ್ತೆಯಲ್ಲಿ ₹ 4.50 ಕೋಟಿ ವೆಚ್ಚದಲ್ಲಿ ಹೊಸ ಮಟನ್‌ ಮಾರುಕಟ್ಟೆ ನಿರ್ಮಾಣದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಮಟನ್‌, ಚಿಕನ್‌, ಮೀನು ಮಾರಾಟಕ್ಕೆ ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

ನಗರಸಭೆ ಉಪಾಧ್ಯಕ್ಷ ಶ್ರೀದೇವಿ ಚಕ್ರವರ್ತಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ. ಸುರೇಶ್‌, ಸದಸ್ಯರಾದ ಹರೀಶ್‌, ಶ್ರೀನಿವಾಸ್‌, ಅಂಗಡಿ ಮಂಜಣ್ಣ, ಮಂಜುಳ ವೇದಾ ಪ್ರಕಾಶ್‌, ಮುಖಂಡರಾದ ಚಕ್ರವರ್ತಿ, ಮಹೇಶ್‌ ಇದ್ದರು.

ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಡಿಪೊ ರಸ್ತೆಯಲ್ಲಿ ₹ 1.20 ಕೋಟಿ ಹಾಗೂ ಎಪಿಎಂಸಿ ಹಮಾಲರ ಕಾಲೊನಿಯಲ್ಲಿ ₹ 80 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಗರದಲ್ಲಿ ವಿಶಾಲವಾದ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.

-ಜಿ.ಎಚ್‌. ತಿಪ್ಪಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT