ಬುಧವಾರ, ಮಾರ್ಚ್ 29, 2023
24 °C
ತರಳಬಾಳು ಹುಣ್ಣಿಮೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅಭಿಮತ

ದೇಶಕ್ಕೆ ಮಠಗಳ ಕೊಡುಗೆ ಅಪಾರ: ಸಚಿವ ಬಿ.ಸಿ.ನಾಗೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟೂರು (ಕೊಟ್ಟೂರೇಶ್ವರ ವೇದಿಕೆ): ‘ಭಾರತೀಯ ಸಂಸ್ಕೃತಿ ಉಳಿಸಿ–ಬೆಳೆಸುವಲ್ಲಿ ಮಠಗಳ ಕೊಡುಗೆ ಅಪಾರವಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಪಟ್ಟಣದ ತರಳಬಾಳು ಹುಣ್ಣಿಮೆಯ 6ನೇ ದಿನವಾದ ಗುರುವಾರ ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಅಪೇಕ್ಷೆಯಂತೆ ಹಾಗೂ ಸ್ವಾವಲಂಬಿ ಜೀವನಕ್ಕೆ ಬೇಕಾದಂತಹ ಮೌಲ್ಯಾಧಾರಿತ ಶಿಕ್ಷಣ ನೀಡುವ ಗುರಿ ಇದೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ವಸುದೈವ ಕುಟುಂಬಕಂ’ ಎನ್ನುವ ವಿಶೇಷ ಸಂದೇಶವನ್ನು ಭಾರತ ಸಾರಿದೆ. ಆಧುನಿಕತೆಯ ಭರಾಟೆಯಲ್ಲಿ ಮನುಷ್ಯರ ನಡುವೆ ಪ್ರೀತಿ, ಆತ್ಮೀಯತೆಯ ಕೊಂಡಿಗಳು ಕಳಚುತ್ತಿವೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವತ್ತ ಗಮನಹರಿಸಬೇಕು’ ಎಂದರು.

‘ಯುವ ಮತದಾರ–ಪ್ರಜಾತಂತ್ರಕ್ಕೆ ಆಧಾರ’ ವಿಷಯ ಕುರಿತು ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಮಾತನಾಡಿ, ‘ನಮ್ಮ ದೇಶದ ಸಜೀವ ಸಂಪತ್ತೆಂದರೆ ಯುವ ಜನಾಂಗ. ಅವರ ಮುಂದೆ ಯಾವ ಶಕ್ತಿಯೂ ಇಲ್ಲ. ಬದಲಾವಣೆ ಯುವ ಸಮೂಹದಿಂದ ಮಾತ್ರ ಸಾಧ್ಯ. ಸದೃಢ ದೇಶ ನಿರ್ಮಾಣಕ್ಕೆ ಸತ್ಯ ಶುದ್ಧತೆಯಿಂದ ಕೆಲಸ ಮಾಡುವ ಜನಪ್ರತಿನಿಧಿಗಳನ್ನು ಮತದಾರರು ಆಯ್ಕೆ ಮಾಡಬೇಕು’ ಎಂದು ಹೇಳಿದರು.

‘ಸರ್ಕಾರಿ ನೌಕಕರಿಗೆ ವಯೋ ನಿವೃತ್ತಿಯ ನಿಯಮವಿದ್ದಂತೆ ರಾಜಕಾರಣಿಗಳಿಗೇಕೆ ಇರಬಾರದು? ಹುದ್ದೆ ಪಡೆಯುವಾಗ ಲಕ್ಷಗಟ್ಟಲೆ ಹಣ ನೀಡಿ ಬಂದ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಎಂತಹ ಶಿಕ್ಷಣ ನೀಡಬಲ್ಲ ಎಂಬುದನ್ನು ಊಹಿಸಿಕೊಳ್ಳಬೇಕು. ಇಂತಹ ಶಿಕ್ಷಕರಿಂದ ನಾಗರಿಕ ಸಮಾಜ ನಿರ್ಮಾಣವಾಗಬಲ್ಲದೇ?’ ಎಂದು ಆತಂಕ ವ್ಯಕ್ತಪಡಿಸಿದರು.

‘ಪವಾಡ ರಹಸ್ಯ ಬಯಲು’ ವಿಷಯದ ಕುರಿತು ಡಾ.ಹುಲಿಕಲ್ ನಟರಾಜ ಮಾತನಾಡಿ, ‘ನಮಗೆ ನಂಬಿಕೆ ಬೇಕೇ ಹೊರತು ಮೂಢನಂಬಿಕೆಯಲ್ಲ. ಮೌಢ್ಯ, ಕಂದಾಚಾರ, ವಾಮಾಚಾರಗಳು ಸಮಾಜದಲ್ಲಿ ತಾಂಡವವಾಡುತ್ತಿವೆ. ಆಲೋಚನೆ, ವಿವೇಚನೆ ಮತ್ತು ವಿಶ್ಲೇಷಣೆಯ ಪ್ರಜ್ಞಾವಂತಿಕೆ ಮೂಡಿದಾಗ ವೈಚಾರಿಕ ಸಮಾಜ ಹುಟ್ಟು ಹಾಕಬಹುದು’ ಎಂದು ಹೇಳಿದರು.

‘ಯುವಜನತೆ ಮತ್ತು ಹಾಸ್ಯ’ ವಿಷಯದ ಕುರಿತು ಮಾತನಾಡಿದ ಗಂಗಾವತಿ ಪ್ರಾಣೇಶ, ‘ಹಾಸ್ಯ ದೈನಂದಿನ ಬದುಕಿನ ಪ್ರತಿ ಕ್ಷಣದಲ್ಲೂ ಸಿಗುತ್ತದೆ. ಅದನ್ನು ಆಸ್ವಾದಿಸುವ ಮನೋಭಾವ ನಮ್ಮಲ್ಲಿರಬೇಕು. ವ್ಯಾಕುಲ, ಖಿನ್ನತೆ ಹೋಗಲಾಡಿಸುವ ಹಾಸ್ಯ ಮನಸ್ಸನ್ನು ಹಗುರಗೊಳಿಸುತ್ತದೆ’ ಎಂದರು.

‘ಯುವ ಜನತೆ ಮತ್ತು ರಾಷ್ಟ್ರ ನಿರ್ಮಾಣ’ ವಿಷಯದ ಕುರಿತು ಚಕ್ರವರ್ತಿ ಸೂಲಿಬೆಲೆ, ‘ಮನುಷ್ಯ ಜಾತಿ ತಾನೊಂದೇ ವಲಂ’ ವಿಷಯದ ಕುರಿತು ಶ್ರೇಯಾ ಬಿ. ಪಾಟೀಲ ಮಾತನಾಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಹಾಗೂ ದಾವಣಗೆರೆ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಮಾತನಾಡಿದರು.

ತರಳಬಾಳು ಮಠಾಧೀಶ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಬಿಸಿಲು ಬೆಳದಿಂಗಳು ಅಂಕಣದ 21ನೇ ಆವೃತ್ತಿ ‘ಧರ್ಮ ಮತ್ತು ರಾಜಕೀಯ’ ಹಾಗೂ ‘ಎಚ್ಚೆತ್ತ ಭಾರತ– ಪ್ರಜಾಪ್ರಭುತ್ವಕ್ಕೆ ಆಧಾರ’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು