ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿಗರ ಮೇಲೆ ಪೊಲೀಸರ ದರ್ಪ

ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ವಾಗ್ದಾಳಿ
Last Updated 17 ಡಿಸೆಂಬರ್ 2020, 6:48 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಅಧಿಕಾರಿಗಳು ಶಾಸಕರ ಚೇಲಾಗಳಾಗಿದ್ದು, ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಪೊಲೀಸರು ವಿನಾಕಾರಣ ನಿರಂತರವಾಗಿ ದರ್ಪ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ವಾಗ್ದಾಳಿ ನಡೆಸಿದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸದಂತೆ ಚುನಾವಣೆ ಆಯೋಗ ಆದೇಶಿಸಿದೆ. ಈ ಆದೇಶವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಯಾವುದೇ ಚುನಾವಣೆಯಲ್ಲಿ ನಮ್ಮ ಪಕ್ಷದವರು ಕಾನೂನುಬಾಹಿರ ಕೃತ್ಯ ಮಾಡಿಲ್ಲ. ಆದರೂ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿರುವ ಈ ಸಮಯದಲ್ಲಿ ಸ್ಥಳೀಯ ಪೊಲೀಸರು ಕಾಂಗ್ರೆಸ್‌ ಕಾರ್ಯ ಕರ್ತರ ಮೇಲೆ ಇಲ್ಲಸಲ್ಲದ ದೂರು ದಾಖಲಿಸಿ ಚುನಾವಣೆ ಪ್ರಕ್ರಿಯೆಗೆ ಹಿನ್ನೆಡೆ ಯಾಗುವಂತೆ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ರಕ್ಷಣೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬರಬೇಕು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ನಮ್ಮ ಪಕ್ಷದ ಚಿಹ್ನೆ ಹಾಗೂ ನಾಯಕರ ಭಾವಚಿತ್ರ ಪ್ರದರ್ಶಿಸದೇ ಮತ ಪ್ರಚಾರ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಾಲ್ಲೂಕಿನ 4 ಠಾಣೆ ವ್ಯಾಪ್ತಿಯ ಪೊಲೀಸರು ಯಾವುದೇ ದೂರು ಇಲ್ಲದಿದ್ದರೂ ನಮ್ಮ ಕಾರ್ಯಕರ್ತರನ್ನು ಜೀಪಿನಲ್ಲಿ ಹತ್ತಿಸಿಕೊಂಡು ಬಂದು ಬೆದರಿಸುತ್ತಿದ್ದಾರೆ. ಈಗಾಗಲೇ ಮುಕ್ತಾಯಗೊಂಡಿರುವ ಕೇಸುಗಳನ್ನು ವಿನಾಕಾರಣ ಮತ್ತೆ ಕೆದಕಿ ಗಡಿಪಾರು ದೂರು ದಾಖಲಿಸುತ್ತಿದ್ದಾರೆ. ಆದರೆ ಬಿಜೆಪಿಯವರನ್ನು ಬಂಧಿಸುತ್ತಿಲ್ಲ. ಅವರ ಮೇಲೆ ಯಾವುದೇ ದೂರನ್ನು ದಾಖಲಿಸುತ್ತಿಲ್ಲ. ಪೊಲೀಸರ ಇಂತಹ ಕೃತ್ಯವನ್ನು ಸರ್ಕಾರ ನಿಯಂತ್ರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಸ್ಮಾಯಿಲ್‌, ಮುಖಂಡರಾದ ಗೋ.ತಿಪ್ಪೇಶ್‌, ಕಾರೇಹಳ್ಳಿ ಬಸವರಾಜು, ಆಗ್ರೋಶಿವಣ್ಣ, ಕೆ.ಸಿ. ನಿಂಗಪ್ಪ ಅವರೂ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT