ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣದಲ್ಲಿ ‘ಕೋವಿಡ್‌–19’ ಜಾಗೃತಿ

ತುರ್ತು ಸೇವೆ, ಜಾಗೃತಿ ವಿಡಿಯೊ ಸಂದೇಶ
Last Updated 15 ಏಪ್ರಿಲ್ 2020, 15:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಕಲ ರೀತಿಯಲ್ಲಿ ಸಜ್ಜಾಗಿರುವ ಚಿತ್ರದುರ್ಗ ಜಿಲ್ಲಾಡಳಿತ, ಜಾಲತಾಣದಲ್ಲಿ ಸಂಪೂರ್ಣ ಮಾಹಿತಿ ಒದಗಿಸುತ್ತಿದೆ. ಸರ್ಕಾರ ಕೈಗೊಂಡ ಕ್ರಮ, ಸಾರ್ವಜನಿಕರ ಜವಾಬ್ಧಾರಿಯ ಕುರಿತು ಅರಿವು ಮೂಡಿಸುತ್ತಿದೆ.

ಚಿತ್ರದುರ್ಗ ಜಿಲ್ಲಾಡಳಿತದ www.chitradurga.nic.in ಜಾಲತಾಣದಲ್ಲಿ ‘ಕೋವಿಡ್‌–19’ಗೆ ಪ್ರತ್ಯೇಕ ಪುಟ ಸೃಷ್ಟಿಸಲಾಗಿದೆ. ಈ ಪುಟ ತೆರೆದ ತಕ್ಷಣ ಮಾಹಿತಿಗಳು ತೆರೆದುಕೊಳ್ಳುತ್ತವೆ. ಕೋಟೆನಾಡಿನ ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ವದಂತಿ, ಆತಂಕಗಳನ್ನು ಸಂಪೂರ್ಣವಾಗಿ ನಿವಾರಿಸಲಿದೆ.

ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಹೊನ್ನಾಂಬಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ಅವರು ನೀಡಿದ ಸಂದೇಶದ ವಿಡಿಯೊ ಜಾಲತಾಣದಲ್ಲಿದೆ. ಒಂದರಿಂದ ಮೂರು ನಿಮಿಷದ ಈ ವಿಡಿಯೊ ತುಣುಕು ಹಲವು ಸಂಶಯಗಳನ್ನು ನಿವಾರಿಸುತ್ತವೆ. ಸಹಾಯವಾಣಿಯ ಸಂಪರ್ಕ ಸಂಖ್ಯೆಗಳ ಬಗ್ಗೆ ವಿವರ ನೀಡುತ್ತವೆ.

‘ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಲಾಕ್‌ಡೌನ್‌ ಜಾರಿಯಲ್ಲಿರುವ ಸಂದರ್ಭದಲ್ಲಿ ಅನಗತ್ಯವಾಗಿ ಹೊರಗೆ ಸಂಚರಿಸಬೇಡಿ. ಸರ್ಕಾರ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಿ’ ಎಂದು ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕಿತರ ಬಗ್ಗೆ ಮಾಹಿತಿ ನೀಡುವ ‘ಆರೋಗ್ಯ ಸೇತು’ ಮೊಬೈಲ್‌ ಆ್ಯಪ್‌ ಲಿಂಕ್‌ ಕೂಡ ಜಾಲತಾಣದಲ್ಲಿದೆ. ಕೋವಿಡ್‌–19 ಬಗೆಗಿನ ಸಂಶಯಗಳನ್ನು ಪ್ರಶ್ನೋತ್ತರಗಳ ಮಾದರಿಯಲ್ಲಿ ಬಗೆಹರಿಸಲಾಗಿದೆ. ರಾಜ್ಯ ಹಾಗೂ ದೇಶದ ಸಂಪೂರ್ಣ ಚಿತ್ರಣವನ್ನು ಅರಿಯಲು ಅವಕಾಶವಿದೆ. ಸಾರ್ವಜನಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ವಿವರಗಳಿವೆ.

ಪ್ರತಿ ನಿತ್ಯ ಕೊರೊನಾ ಸೋಂಕಿತರ ಬಗ್ಗೆ ಮಾಹಿತಿ ಒದಗಿಸುವ ‘ಮೀಡಿಯಾ ಬುಲೆಟಿನ್‌’ ಕೂಡ ಲಭ್ಯವಿದೆ. ವಿದೇಶ, ಹೊರ ರಾಜ್ಯದಿಂದ ಬಂದಿರುವವರು, ಗೃಹ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರುವವರ ಬಗ್ಗೆ ಮಾಹಿತಿಗಳಿವೆ. ನಿರಾಶ್ರಿತರು, ಅಲೆಮಾರಿಗಳು ಹಾಗೂ ಕಾರ್ಮಿಕರಿಗೆ ನೆರವು ನೀಡಲು ಇಚ್ಛಿಸುವವರು ಸಂಪರ್ಕಿಸಬೇಕಾದ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಬಿತ್ತರಿಸಲಾಗಿದೆ.

‘ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಈವರೆಗೆ 600ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಲು ಅವಕಾಶವಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ವಿಡಿಯೊ ಸಂದೇಶ ನೀಡಿದ್ದಾರೆ.

ವೈದ್ಯಕೀಯ ಚಿಕಿತ್ಸೆ ಹಾಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಾತ್ರ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಸಂಚರಿಸಲು ಅವಕಾಶವಿದೆ. ಇದಕ್ಕೆ ಅಗತ್ಯವಿರುವ ಪಾಸ್‌ಗಳನ್ನು ಜಿಲ್ಲಾಡಳಿತ ಒದಗಿಸುತ್ತದೆ. ಇದರ ಬಗ್ಗೆ ಜಾಲತಾಣದಲ್ಲಿ ಮಾಹಿತಿ ಇದೆ. ಜಿಲ್ಲಾಡಳಿತದ ಜಾಲತಾಣಕ್ಕೆ ಭೇಟಿ ನೀಡಿದರೆ ‘ಕೋವಿಡ್‌–19’ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಂಪೂರ್ಣ ವಿವರ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT