ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೋವಿಡ್‌ ಕೇರ್‌ ಸೆಂಟರ್‌ ಸೇವೆಗೆ ಸಜ್ಜು

‘ಇಆರ್‌ಎಂ ಸಮೂಹ ಸಂಸ್ಥೆಯ’ ನೆರವು, 250 ಹಾಸಿಗೆ ಸಿದ್ಧ
Last Updated 10 ಮೇ 2021, 12:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಈಶ್ವರ ಬಡಾವಣೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್‌ನಲ್ಲಿ ಆರ್‌.ಪ್ರವೀಣ್‌ ಚಂದ್ರ ಒಡೆತನದ ಇಆರ್‌ಎಂ ಸಮೂಹ ಸಂಸ್ಥೆಯ ನೆರವಿನಿಂದ ಸ್ಥಾಪಿಸಿದ 250 ಹಾಸಿಗೆಯ ಕೋವಿಡ್‌ ಕೇರ್‌ ಸೆಂಟರ್‌ (ಸಿಸಿಸಿ) ಸೇವೆಗೆ ಸಜ್ಜಾಗಿದೆ.

ವಿಶಾಲವಾದ ಆವರಣದ ಮೂರು ಕಟ್ಟಡಗಳಲ್ಲಿ ಕೋವಿಡ್‌ ಆರೈಕೆ ಕೇಂದ್ರವನ್ನು ನಿರ್ಮಿಸಲಾಗಿದೆ. ರೋಗ ಲಕ್ಷಣ ಕಡಿಮೆ ಇರುವ ಹಾಗೂ ಮನೆಯಲ್ಲೇ ಚಿಕಿತ್ಸೆ ಪಡೆಯುವ ಕೊರೊನಾ ಸೋಂಕಿತರು ಇಲ್ಲಿ ದಾಖಲಾಗಬಹುದು. ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರು ಸೋಮವಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಸ್ಟೆಲ್‌ನ ಪ್ರತಿ ಕೊಠಡಿಯಲ್ಲಿ ನಾಲ್ಕು ಹಾಸಿಗೆಗಳನ್ನು ಹಾಕಲಾಗಿದೆ. ಮಂಚ, ಹಾಸಿಗೆ, ಹೊದಿಕೆ, ಟೇಬಲ್‌, ಸೊಳ್ಳೆ ಪರದೆ, ಕಸದ ಬುಟ್ಟಿ ಸಹಿತ ಎಲ್ಲ ಸೌಲಭ್ಯವನ್ನು ಇಆರ್‌ಎಂ ಸಮೂಹ ಸಂಸ್ಥೆ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆಯಡಿ ನೀಡಿದೆ. ಅಡುಗೆ ತಯಾರಿಸಲು ಮತ್ತೊಂದು ಕಟ್ಟಡದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯರು, ಶುಶ್ರೂಷಕರು ಹಾಗೂ ಇತರ ಸಿಬ್ಬಂದಿ ದಿನದ 24 ಗಂಟೆಯೂ ಸೇವೆ ಒದಗಿಸಲಿದ್ದಾರೆ. ಆರೈಕೆ ಕೇಂದ್ರಕ್ಕೆ ದಾಖಲಾಗುವ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ವೈದ್ಯರು, ಶುಶ್ರೂಷಕರನ್ನು ನಿಯೋಜಿಸಲಾಗುತ್ತದೆ.

‘ಕೋವಿಡ್‌ ಕೇರ್‌ ಸೆಂಟರ್‌ಗೆ ಹಾಸಿಗೆ ಒದಗಿಸುವಂತೆ ಇಆರ್‌ಎಂ ಸಮೂಹ ಸಂಸ್ಥೆಗೆ ಮನವಿ ಮಾಡಲಾಗಿತ್ತು. ಇಲ್ಲಿಗೆ ಅಗತ್ಯ ಇರುವ ಎಲ್ಲ ಪರಿಕರಗಳನ್ನು ಸ್ವಇಚ್ಛೆಯಿಂದ ನೀಡಿದ್ದಾರೆ. ಹತ್ತು ಆಮ್ಲಜನಕ ಸಹಿತ ಹಾಸಿಗೆ ವ್ಯವಸ್ಥೆ ಕಲ್ಪಿಸುವ ಅಗತ್ಯವಿದ್ದು, ಪೈಪ್‌ಲೈನ್‌ ನಿರ್ಮಾಣದ ಹೊಣೆ ಹೊರುವುದಾಗಿ ಸಂಸ್ಥೆ ಭರವಸೆ ನೀಡಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದರು.

‘ಬಿವಿಕೆಎಸ್‌ ಬಡಾವಣೆಯಲ್ಲಿ 78, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 100 ಸೇರಿ 428 ತಾಲ್ಲೂಕಿನಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಇರುವವರು ಇಲ್ಲಿಗೆ ದಾಖಲಾಗಬಹುದು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಶೀಘ್ರದಲ್ಲೇ ಉದ್ಘಾಟನೆ ಮಾಡಲಿದ್ದಾರೆ. ಆ ಬಳಿಕ ಸೋಂಕಿತರಿಗೆ ಸೇವೆ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.

‘ಆಮ್ಲಜನಕದ ಕೊರತೆ ನೀಗಿಸಲು 65 ಜಂಬೋ ಸಿಲಿಂಡರ್‌ಗಳನ್ನು ಸಂಸ್ಥೆ ಒದಗಿಸಿದೆ. ಆರ್‌ಟಿಪಿಸಿಆರ್‌ ಪ್ರಯೋಗಾಲಯಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ನೆರವು ನೀಡಿದೆ. 5ಕೆವಿಎ ಯುಪಿಎಸ್‌ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಒದಗಿಸಿದೆ’ ಎಂದರು.

ತಹಶೀಲ್ದಾರ್‌ ವೆಂಕಟೇಶಯ್ಯ, ಇಆರ್‌ಎಂ ಸಮೂಹ ಸಂಸ್ಥೆಯ ಸಹಾಯಕ ಮಹಾವ್ಯವಸ್ಥಾಪಕರಾದ ರಣದೀವೆ, ರುದ್ರಪ್ಪ ರವಿ ರಂಗಸ್ವಾಮಿ, ವ್ಯವಸ್ಥಾಪಕರಾದ ದೀಪಕ್‌, ಅಜಿತ್‌, ವಿನಯ್‌ ಇದ್ದರು.

***

ಮನೆಯಲ್ಲಿ ಚಿಕಿತ್ಸೆ ಪಡೆಯುವವರಿಂದ ಕುಟುಂಬದ ಇತರರಿಗೂ ಸೋಂಕು ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಸಕಲ ಸೌಲಭ್ಯ ಕಲ್ಪಿಸಲಾಗಿದ್ದು, ಸೋಂಕಿತರು ಇಲ್ಲಿಗೆ ದಾಖಲಾಗಲು ಮನವಿ.

ಕವಿತಾ ಎಸ್‌.ಮನ್ನಿಕೇರಿ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT