ಭಾನುವಾರ, ಜುಲೈ 25, 2021
26 °C
ಶವದೊಂದಿಗೆ ರಾತ್ರಿ ಕಳೆದ ಆರೋಪಿ

ಕುಡಿದು ತಾಯಿ ಕೊಲೆಗೈದ ಮಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕುಡಿದ ಅಮಲಿನಲ್ಲಿ ಮನೆಗೆ ಬಂದ ಪುತ್ರ ತಾಯಿಯನ್ನೇ ಹೊಡೆದು ಕೊಲೆ ಮಾಡಿದ ಘಟನೆ ಮೊಳಕಾಲ್ಮುರು ಪಟ್ಟಣದಲ್ಲಿ ನಡೆದಿದೆ.

ರತ್ನಮ್ಮ (45) ಕೊಲೆಯಾದ ಮಹಿಳೆ. ಲೋಕೇಶ್‌ (22) ತಾಯಿಯನ್ನು ಕೊಲೆ ಮಾಡಿದ ಮಗ. ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪಿಲ್ಲಲಹಳ್ಳಿಯ ಗೋವಿಂದಪ್ಪ ಹಾಗೂ ರತ್ನಮ್ಮ ಅವರ ದಾಂಪತ್ಯ ಬಹುದಿನಗಳ ಕಾಲ ಇರಲಿಲ್ಲ. ಮೊಳಕಾಲ್ಮುರು ಪಟ್ಟಣದ ಚಿಕ್ಕ ಮನೆಯೊಂದರಲ್ಲಿ ಪುತ್ರನೊಂದಿಗೆ ರತ್ನಮ್ಮ ಬದುಕು ಕಟ್ಟಿಕೊಂಡಿದ್ದರು. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ತಾಯಿಯೊಂದಿಗೆ ಲೋಕೇಶ್‌ ಕೂಲಿ ಕೆಲಸ ಮಾಡುತ್ತಿದ್ದ.

ನಿತ್ಯ ಕುಡಿದು ಮನೆಗೆ ಬರುತ್ತಿದ್ದ ಲೋಕೇಶ್‌, ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಮದ್ಯ ಸೇವನೆಗೆ ಹಣ ನೀಡುವಂತೆ ಪೀಡಿಸುತ್ತಿದ್ದ. ಹಣ ನೀಡದಿದ್ದರೆ ವಾಗ್ವಾದಕ್ಕೆ ಇಳಿಯುತ್ತಿದ್ದ. ಕುಡಿದು ಮನೆಗೆ ಬಂದು ಅಡುಗೆ ಸರಿಯಿಲ್ಲ ಎಂದು ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ ಕುಡಿದು ಮನೆಗೆ ಬಂದ ಲೋಕೇಶ್‌, ತಾಯಿಯೊಂದಿಗೆ ಗಲಾಟೆ ಮಾಡಿದ್ದಾನೆ. ಕುಡಿಯಲು ಏಕೆ ಹಣ ನೀಡುವುದಿಲ್ಲ ಎಂದು ಪ್ರಶ್ನಿಸಿದ್ದಾನೆ. ಅಡುಗೆ ಸರಿಯಿಲ್ಲವೆಂದು ತಕರಾರು ತೆಗೆದಿದ್ದಾನೆ. ಈ ವಿಚಾರವಾಗಿ ತಾಯಿ ಮತ್ತು ಮಗನ ನಡುವೆ ಗಲಾಟೆ ನಡೆದಿದೆ. ಕುಪಿತಗೊಂಡ ಪುತ್ರ, ತಾಯಿಯ ಕೆನ್ನೆಗೆ ಬಾರಿಸಿದ್ದಾನೆ. ಕಿವಿಯಲ್ಲಿ ರಕ್ತ ಸೋರುತ್ತಿದ್ದರೂ ಬಾಗಿಲಿಗೆ ತಲೆ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಮದ್ಯದ ಅಮಲಿನಲ್ಲಿದ್ದ ಆರೋಪಿ ತಾಯಿಯ ಮೃತದೇಹದ ಪಕ್ಕದಲ್ಲೇ ಮಲಗಿದ್ದಾನೆ. ಬೆಳಿಗ್ಗೆ ಎದ್ದು ತಾಯಿ ತವರು ಮನೆಗೆ ತೆರಳಿ ಘಟನೆಯನ್ನು ವಿವರಿಸಿದ್ದಾನೆ. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು