ಶನಿವಾರ, ಡಿಸೆಂಬರ್ 7, 2019
22 °C

ಒಬ್ಬನ ಬಲಿ ಪಡೆದ ಕರಡಿಗೆ ಹೊಡೆದು ಪ್ರಜ್ಞೆತಪ್ಪಿಸಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಾಂ‍ಪುರ: ಸಮೀಪದ ದಳವಾಯಿಕಟ್ಟೆ ಗ್ರಾಮಕ್ಕೆ ಶುಕ್ರವಾರ ಹಾಡಹಗಲೇ ನುಗ್ಗಿ ನಾಲ್ಕು ಜನರ ಮೇಲೆ ದಾಳಿ ನಡೆಸಿದ ಕರಡಿಯನ್ನು ಗ್ರಾಮಸ್ಥರು ಪ್ರಜ್ಞೆತಪ್ಪುವವರೆಗೂ ಹೊಡೆದು, ಜೆಸಿಬಿಯಲ್ಲಿ 7 ಕಿ.ಮೀ. ಮೆರವಣಿಗೆ ಮಾಡಿದ್ದಾರೆ. ಘಟನೆಯಲ್ಲಿ ಹೊಸದುರ್ಗ ತಾಲ್ಲೂಕಿನ ಬುಕ್ಕಸಾಗರದ ರಾಜಪ್ಪ (45) ರಾತ್ರಿ ಮೃತಪಟ್ಟಿದ್ದಾರೆ.

ದೊಣ್ಣೆಯಿಂದ ಜನರು ಕರಡಿಯ ಮೇಲೆ ದಾಳಿ ನಡೆಸುವಾಗ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಅಸಹಾಯಕರಾಗಿದ್ದರು. ಕರಡಿಗೆ ಅರಿವಳಿಕೆ ನೀಡಿ ಚಿತ್ರದುರ್ಗಕ್ಕೆ ಸ್ಥಳಾಂತರಿಸಲಾಗಿದೆ.

ಕರಡಿ ದಾಳಿಯಲ್ಲಿ ರಾಜಪ್ಪ, ಉಮೇಶ್‌, ರಮೇಶ್‌, ಶಶಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ನಾಲ್ವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ಪೈಕಿ ರಾಜಪ್ಪ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಸಾಗಿಸುವಾಗ ರಾತ್ರಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ದಳವಾಯಿಕಟ್ಟೆ ಗ್ರಾಮಕ್ಕೆ ಹೊಂದಿಕೊಂಡ ತೆಂಗಿನ ತೋಟದಲ್ಲಿದ್ದ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಕರಡಿ ದಾಳಿ ನಡೆಸಿತು. ಇದರಿಂದ ಆಕ್ರೋಶಗೊಂಡ ಜನರು ಬಡಿಗೆಗಳಿಂದ ಬೆನ್ನಟ್ಟಿ ಕರಡಿ ಹೊಡೆಯಲು ಮುಂದಾದರು. ಆಗ ಕರಡಿ ದಾಳಿ ನಡೆಸಿದ್ದು, ಐವರು ಗಾಯಗೊಂಡರು.

ರೊಚ್ಚಿಗೆದ್ದ ಜನರು ತೆಂಗಿನ ಗರಿಗೆ ಬೆಂಕಿಹಚ್ಚಿ ಕರಡಿಗೆ ಎಸೆದರು. ಭಯಗೊಂಡ ಅದು ಸಮೀಪದ ತೆಂಗಿನ ತೋಟದ ಜೋಳದ ಹೊಲದಲ್ಲಿ ಅವಿತುಕೊಂಡಿತು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬಲೆಬೀಸಿ ಸೆರೆ ಹಿಡಿಯಲು ಪ್ರಯತ್ನಿಸಿದರು. ಉದ್ರಿಕ್ತಗೊಂಡ ಜನರು ಜೆಸಿಬಿ ತರಿಸಿ ಜೋಳದ ಹೊಲಕ್ಕೆ ನುಗ್ಗಿಸಿದರು. ಆಗ ಜನರ ಮೇಲೆ ದಾಳಿ ಮಾಡಲು ಬಂದ ಕರಡಿಯನ್ನು ದೊಣ್ಣೆಯಿಂದ ಮನಸೋಇಚ್ಛೆ ಹೊಡೆದರು. ಪ್ರಜ್ಞೆತಪ್ಪಿದ ಕರಡಿ ಮೃತಪಟ್ಟಿರಬಹುದು ಎಂದು ಭಾವಿಸಿ ಜೆಸಿಬಿಗೆ ಹಾಕಿ ಕಡವಗೆರೆ ವಜ್ರ ಗ್ರಾಮಕ್ಕೆ ಸಾಗಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು