ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಪಾಯದಿಂದ ಪಾರು ಮಾಡಿದ ಸೀಟ್‌ಬೆಲ್ಟ್‌

ಜಿಲ್ಲಾಧಿಕಾರಿ ಪ್ರಯಾಣಿಸುತ್ತಿದ್ದ ಕಾರು–ಬಸ್‌ ಮುಖಾಮುಖಿ ಡಿಕ್ಕಿ
Last Updated 19 ಫೆಬ್ರುವರಿ 2020, 12:18 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಸಮೀಪದ ಹೆದ್ದಾರಿಯಲ್ಲಿ ಮಂಗಳವಾರ ಕಾರು ಹಾಗೂ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಜಿಲ್ಲಾಧಿಕಾರಿ ಆರ್‌. ವಿನೋತ್ ಪ್ರಿಯಾ ಸೇರಿ ಮೂವರನ್ನು ಸೀಟ್‌ಬೆಲ್ಟ್‌ ಪ್ರಾಣಪಾಯದಿಂದ ಪಾರು ಮಾಡಿದೆ.

ಸೀಟ್‌ಬೆಲ್ಟ್‌ ಧರಿಸಿದ ಪರಿಣಾಮ ಕಾರಿನ ಮುಂಬದಿಯ ಎರಡು ಏರ್‌ಬಲೂನ್‌ ತೆರೆದುಕೊಂಡಿವೆ. ಚಾಲಕ ಮನ್ಸೂರ್‌ ಹಾಗೂ ಗನ್‌ಮೆನ್‌ ನವೀನ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಜಿಲ್ಲಾಧಿಕಾರಿ ಕೂಡ ಸೀಟ್‌ಬೆಲ್ಟ್‌ ಧರಿಸಿದ್ದರಿಂದ ಅಪಾಯದಿಂದ ಪಾರಾದರು.

ಕಾರು ಜಖಂಗೊಂಡಿರುವ ರೀತಿಯು ಅಪಘಾತದ ಸ್ವರೂಪವನ್ನು ತೆರೆದಿಟ್ಟಿದೆ. ಚಾಲಕ ಮನ್ಸೂರ್‌ ಹೊಟ್ಟೆಭಾಗಕ್ಕೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೀನ್‌ ಅವರ ಕಾಲಿಗೆ ಗಾಯವಾಗಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಏಕಾಏಕಿ ಎದುರಾದ ಹಸು:ಹೊಳಲ್ಕೆರೆಯಲ್ಲಿ ಏರ್ಪಡಿಸಿದ್ದ ಜಮಾಬಂದಿ ಸಭೆಯಲ್ಲಿ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಪಾಲ್ಗೊಳ್ಳಬೇಕಿತ್ತು. ಆರ್ಥಿಕ ವರ್ಷಾಂತ್ಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ಏರ್ಪಡಿಸಿಸಲಾಗಿತ್ತು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ವಿನೋತ್‌ ಪ್ರಿಯಾ ಅವರು ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟಿದ್ದರು.

ಚಿತ್ರಹಳ್ಳಿ ಗೇಟ್‌ ಸಮೀಪ ಕಾರಿನ ಮುಂಭಾಗದಲ್ಲಿ ಸಾಗುತ್ತಿದ್ದ ಹಸು ಏಕಾಏಕಿ ಹಿಂದಕ್ಕೆ ಬಂದಿದೆ. ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಹಸುವಿಗೆ ಡಿಕ್ಕಿ ಹೊಡೆದಿದೆ. ಹೊಳಲ್ಕೆರೆ ಕಡೆಯಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಅಪ್ಪಳಿಸಿದೆ. ಕಾರು ಸಂಪೂರ್ಣ ಜಖಂಗೊಂಡಿದೆ.

ನೆರವಿಗೆ ಧಾವಿಸಿದ ಜನ:‘ಎಲ್ಲವೂ ಕ್ಷಣಾರ್ಧದಲ್ಲಿ ನಡೆದು ಹೋಯಿತು. ಅಪಘಾತ ಹೇಗೆ ಸಂಭವಿಸಿತು ಎಂಬುದು ಗೊತ್ತಾಗಲಿಲ್ಲ. ಏರ್‌ಬ್ಯಾಗ್‌ ತೆರೆದುಕೊಂಡಿದ್ದರಿಂದ ಚಾಲಕ ಹಾಗೂ ಗನ್‌ಮೆನ್‌ ಅಪಾಯದಿಂದ ಪಾರಾದರು. ಕಾರಿನಿಂದ ಕೆಳಗೆ ಇಳಿಯಲು ಸಾರ್ವಜನಿಕರು ನೆರವಾದರು. ಈ ಅಘಾತದಿಂದ ಹೊರಬರಲು ಕೊಂಚ ಸಮಯ ಬೇಕಾಯಿತು’ ಎಂದು ವಿನೋತ್‌ ಪ್ರಿಯಾ ದುರಂತದ ಕ್ಷಣಗಳನ್ನು ನೆನೆದರು.

ಚಾಲಕ ಮನ್ಸೂರ್‌ ಸೀಟ್‌ ಹಾಗೂ ಸ್ಟೇರಿಂಗ್‌ ನಡುವೆ ಸಿಲುಕಿಕೊಂಡಿದ್ದರು. ಸ್ವತಃ ಚಾಲಕನೇ ಕಾರಿನ ಬಾಗಿಲು ತೆರೆದರೂ ಕೆಳಗೆ ಇಳಿಯಲು ಸಾಧ್ಯವಾಗುತ್ತಿರಲಿಲ್ಲ. ಸಾರ್ವಜನಿಕರು ಸೀಟ್‌ ಹಿಂದಕ್ಕೆ ಎಳೆದು ಅವರನ್ನು ಹೊರಗೆ ಕರೆತಂದರು. ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಹೊಟ್ಟೆ ಭಾಗಕ್ಕೆ ಬಿದ್ದ ಪೆಟ್ಟಿನ ಸ್ವರೂಪವನ್ನು ಅರಿಯಲು ವೈದ್ಯರು ಎರಡು ಬಾರಿ ಸ್ಕ್ಯಾನಿಂಗ್‌ ಮಾಡಿದ್ದಾರೆ.

ಡಿಸಿ ನಿವಾಸಕ್ಕೆ ದೌಡಾಯಿಸಿದ ಸಿಬ್ಬಂದಿ:ಅಪಘಾತದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರು ಹಾಗೂ ಬಸ್‌ನ್ನು ಸ್ಥಳದಿಂದ ತೆರವುಗೊಳಿಸಿದರು. ಎರಡೂ ವಾಹನಗಳನ್ನು ಚಿತ್ರಹಳ್ಳಿ ಪೊಲೀಸ್ ಠಾಣೆಗೆ ಸಾಗಿಸಲಾಯಿತು. ಬಳಿಕ ವಾಹನ ಸಂಚಾರ ಸುಗಮಗೊಂಡಿತು.

ಬೇರೊಂದು ವಾಹನದಲ್ಲಿ ಜಿಲ್ಲಾಧಿಕಾರಿ ಚಿತ್ರದುರ್ಗದ ನಿವಾಸಕ್ಕೆ ಮರಳಿದರು. ಜಿಲ್ಲಾ ಆಸ್ಪತ್ರೆಯ ವೈದ್ಯರು ನಿವಾಸಕ್ಕೆ ಧಾವಿಸಿ ಆರೋಗ್ಯ ಪರೀಕ್ಷಿಸಿದರು. ಜಿಲ್ಲೆಯ ಎಲ್ಲ ಇಲಾಖೆಯ ಮುಖ್ಯಸ್ಥರು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಗಣ್ಯರು ನಿವಾಸಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT