ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್‌ನಿಂದ ರಕ್ಷಣೆ ಪಡೆಯಲು ಆಯುಷ್‌ ಔಷಧಕ್ಕೆ ಹೆಚ್ಚಿದ ಬೇಡಿಕೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ, ಡ್ರಾಪ್ಸ್‌
Published : 30 ಆಗಸ್ಟ್ 2020, 19:30 IST
ಫಾಲೋ ಮಾಡಿ
Comments

ಚಿತ್ರದುರ್ಗ: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಆಯು‌ರ್ವೇದ ಚಿಕಿತ್ಸಾ ಪದ್ಧತಿಯತ್ತ ಜನರು ವಾಲುತ್ತಿರುವ ಪರಿಣಾಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಕ್ಕೆ ಭಾರಿ ಬೇಡಿಕೆ ಬಂದಿದೆ. ಉತ್ತರಾಖಂಡದಿಂದ ಔಷಧ ಖರೀದಿಸಲು ಆಯುರ್ವೇದ ಇಲಾಖೆ ಆಸಕ್ತಿ ತೋರಿದೆ.

ಸಂಶಮನವಟಿ (ಆಯುರ್ವೇದ) ಮಾತ್ರೆ ಹಾಗೂ ಆರ್ಕೆ ಅಝೀಬ್‌ (ಯುನಾನಿ) ಡ್ರಾಪ್ಸ್‌ ಖರೀದಿಗೆ ₹ 32 ಲಕ್ಷದ ಪ್ರಸ್ತಾವವನ್ನು ಆಯುರ್ವೇದ ಇಲಾಖೆ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿದೆ. ಸಾಮಾನ್ಯ ಸಭೆಯಲ್ಲಿ ಅನುಮೋದನೆ ಸಿಕ್ಕ ಬಳಿಕ ಔಷಧ ಖರೀದಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ.

‘ಕೇಂದ್ರ ಆರೋಗ್ಯ ಸಚಿವಾಲಯದ ಸಲಹೆ ಮೇರೆಗೆ ರಾಜ್ಯ ಆರೋಗ್ಯ ನಿರ್ದೇಶನಾಲಯ ಈ ಔಷಧಗಳನ್ನು ರವಾನೆ ಮಾಡಿತ್ತು. ಸಂಶಮನವಟಿ 35 ಸಾವಿರ ಮಾತ್ರೆ ಹಾಗೂ ಆರ್ಕೆ ಅಝೀಬ್‌ 25 ಸಾವಿರ ಡ್ರಾಪ್ಸ್‌ಬಂದಿದ್ದವು. ಆರಂಭದಲ್ಲಿ ಇವನ್ನು ಕೊರೊನಾ ವಾರಿಯರ್ಸ್‌ಗೆ ನೀಡಲಾಯಿತು. ಔಷಧಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದ್ದರಿಂದ ಬೇಡಿಕೆ ಬರಲಾರಂಭಿಸಿತು. ಈ ಬೇಡಿಕೆ ಅನಿರೀಕ್ಷಿತ’ ಎಂಬುದು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಕೆ.ಎಲ್‌.ವಿಶ್ವನಾಥ್‌ ಅಭಿಪ್ರಾಯ.

ಸಂಶಮನವಟಿ ಮಾತ್ರೆಯನ್ನು ದಿನಕ್ಕೆ ಎರಡು ಬಾರಿಯಂತೆ 15 ದಿನ ಸೇವಿಸಬೇಕು. ಆರ್ಕೆ ಅಝೀಬ್‌ನ ಎರಡು ಹನಿಯನ್ನು ಮಾಸ್ಕ್‌, ಕರವಸ್ತ್ರಕ್ಕೆ ಹಾಕಿಕೊಂಡು ಉಸಿರು ತೆಗೆದುಕೊಳ್ಳಬೇಕು. ಆರ್ಸೆನಿಕ್‌ ಆಲ್ಬಂ (ಹೋಮಿಯೋಪಥಿ) ಮಾತ್ರೆಯನ್ನು ಮೂರು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಸಂಶಮನವಟಿ ಮತ್ತು ಆರ್ಕೆ ಅಝೀಬ್‌ ಔಷಧ ಖಾಲಿಯಾಗಿ ತಿಂಗಳು ಕಳೆದಿದ್ದು, ಪೂರೈಕೆ ಸ್ಥಗಿತಗೊಂಡಿದೆ. ಕೇರಳದಿಂದ ಪೂರೈಕೆಯಾಗುವ ಆರ್ಸೆನಿಕ್‌ ಆಲ್ಬಂ ಮಾತ್ರ ದಾಸ್ತಾನು ಇದೆ.

‘ಸೋಂಕು ಸಾಮಾನ್ಯವಾಗಿ ಬಾಯಿ ಅಥವಾ ಮೂಗಿನ ಮೂಲಕ ದೇಹ ಪ್ರವೇಶಿಸುತ್ತದೆ. ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಿ ಸೋಂಕು ದೇಹ ಪ್ರವೇಶಸಿದಂತೆ ತಡೆಯುವ ಕಾರ್ಯವನ್ನು ಆರ್ಕೆ ಅಝೀಬ್‌ ಮಾಡುತ್ತದೆ. ಉಸಿರಾಟದ ಸಮಸ್ಯೆ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ. ಶೀತ, ನೆಗಡಿ ಹಾಗೂ ಕೆಮ್ಮು ಬಾರದೇ ಇರುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ, ಈ ಔಷಧಕ್ಕೆ ಬೇಡಿಕೆ ಹೆಚ್ಚಾಗಿದೆ’ ಎನ್ನುತ್ತಾರೆ ವಿಶ್ವನಾಥ್‌.

ರೋಗ ನಿರೋಧ ಶಕ್ತಿ ಹೆಚ್ಚಿಸುವ ಈ ಎರಡೂ ಔಷಧ ವಿತರಣೆಗೆ ಜನಪ್ರತಿನಿಧಿಗಳು ಒತ್ತಡ ಹೇರಿದ್ದರು. ಜಿಲ್ಲೆಯ 32 ಆಯುರ್ವೇದ ಚಿಕಿತ್ಸಾಲಯ ಹಾಗೂ ಐದು ಆಯುರ್ವೇದ ಆಸ್ಪತ್ರೆಯಲ್ಲಿ ಔಷಧ ಲಭ್ಯ ಇರುವಂತೆ ನೋಡಿಕೊಳ್ಳಲು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಆಯುಷ್‌ ಇಲಾಖೆ, 10 ಲಕ್ಷ ಮಾತ್ರೆ ಹಾಗೂ ಡ್ರಾಪ್ಸ್‌ಗೆ ಆರೋಗ್ಯ ನಿರ್ದೇಶನಾಯಲಕ್ಕೆ ಬೇಡಿಕೆ ಸಲ್ಲಿಸಿತ್ತು. ಅನುದಾನದ ಕೊರತೆಯಿಂದ ಈ ಪ್ರಸ್ತಾವವನ್ನು ಆರೋಗ್ಯ ನಿರ್ದೇಶನಾಲಯ ತಿರಸ್ಕರಿಸಿತು.

‘ಸ್ಥಳೀಯ ಮಟ್ಟದಲ್ಲೇ ಅನುದಾನ ಹೊಂದಿಸಿಕೊಳ್ಳಲು ನಿರ್ದೇಶನಾಲಯ ಸೂಚನೆ ನೀಡಿದೆ. ಇದನ್ನು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಮುಂದೆ ಇಡಲಾಯಿತು. ಇದಕ್ಕೆ ಸಮಿತಿಯ ಒಪ್ಪಿಗೆ ಸಿಕ್ಕಿದೆ. ಮುಂಬರುವ ಸಾಮಾನ್ಯ ಸಭೆಯ ಅನುಮೋದನೆ ದೊರೆಯುವ ಸಾಧ್ಯತೆ ಇದೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ವಿಶ್ವನಾಥ್‌.

ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದ ಎಲ್ಲ ವಾರಿಯರ್ಸ್‌ಗಳು ಈ ಔಷಧ ಸೇವಿಸಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇವು ಪರಿಣಾಮಕಾರಿಯಾಗಿ ಕೆಲಸ ಮಾಡಿವೆ ಎಂಬ ನಂಬಿಕೆ ಜನರಲ್ಲಿ ಮೂಡಿದೆ. ಈ ಔಷಧವನ್ನು ಎಲ್ಲರಿಗೂ ವಿತರಿಸುವಂತೆ ಆಯುಷ್‌ ಇಲಾಖೆ ಮೇಲೆ ಒತ್ತಡ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT