ವಿದ್ಯುತ್ ಮಾರ್ಗದ ಕಾಮಗಾರಿ ನಿಲ್ಲಿಸಲು ಆಗ್ರಹ; ರೈತರಿಂದ ಅಧಿಕಾರಿಗಳಿಗೆ ತರಾಟೆ

ಧರ್ಮಪುರ: ಹಿರಿಯೂರಿನಿಂದ ಹರಿಯಬ್ಬೆವರೆಗಿನ 41 ಕಿ.ಮೀ. ದೂರದ ವಿದ್ಯುತ್ ಮಾರ್ಗದ ಕಾಮಗಾರಿಯನ್ನು ನಿಲ್ಲಿಸುವಂತೆ ಗೂಳ್ಯದ ಹತ್ತಿರ ರೈತರು ಗುರುವಾರವೂ ಪ್ರತಿಭಟನೆ ನಡೆಸಿದರು.
ರೈತರು ನಡೆಸುತ್ತಿರುವ ಹೋರಾಟ ಗುರುವಾರ 66ನೇ ದಿನಕ್ಕೆ ಕಾಲಿಟ್ಟಿದೆ. ರೈತರಿಗೆ ಸಮರ್ಪಕವಾಗಿ ಕಾರಿಡಾರ್ ಭೂ ಪರಿಹಾರ ಮತ್ತು ಬೆಳೆ ನಷ್ಟದ ಪರಿಹಾರ ದೊರೆಯದೇ ಕಾಮಗಾರಿ ಮಾಡಬಾರದೆಂದು ಪ್ರತಿಭಟನೆ ನಡೆಸಲಾಗುತ್ತಿದೆ.
ಆದರೂ ಅಧಿಕಾರಿಗಳು ರೈತರನ್ನು ನಿರ್ಲಕ್ಷಿಸಿ ಗುರುವಾರವೂ ಕಾಮಗಾರಿ ಶುರು ಮಾಡಿದ್ದರಿಂದ ರೊಚ್ಚಿಗೆದ್ದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಚಿಕ್ಕಣ್ಣ, ಶಿವಪ್ಪ, ತಿಮ್ಮಣ್ಣ ವಿದ್ಯುತ್ ಕಂಬವೇರಿ ಪ್ರತಿಭಟನೆ ನಡೆಸಿದರು.
ತಕ್ಷಣವೇ ಸ್ಥಳದಲ್ಲಿದ್ದ ಪೊಲೀಸರು ಮತ್ತು ರೈತ ಮುಖಂಡರು ಮನವೊಲಿಸುವ ಮೂಲಕ ವಿದ್ಯುತ್ ಕಂಬವೇರಿದ ರೈತರನ್ನು ಕೆಳಗಿಳಿಸಿದರು.
‘ಗೂಳ್ಯ, ಮುಂಗುಸುವಳ್ಳಿ ಮತ್ತು ಹರಿಯಬ್ಬೆ ಗ್ರಾಮಗಳಲ್ಲಿ ಗ್ರಾಮ ದೇವರ ಜಾತ್ರಾ ಮಹೋತ್ಸವ ಇದ್ದುದರಿಂದ ಕೆಪಿಟಿಸಿಎಲ್ ಅಧಿಕಾರಿಗಳು ರೈತರು ಬರುವುದಿಲ್ಲ ಎಂದು ಭಾವಿಸಿ ಕಾಮಗಾರಿ ನಡೆಸಲು ತಯಾರಿ ಮಾಡಿಕೊಂಡಿದ್ದರು. ಇದನ್ನು ತಿಳಿದ ನೂರಾರು ರೈತರು ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದರು. ಕೆಲವು ರೈತರು ತಮ್ಮ ಜೀವವನ್ನೆ ಕಳೆದುಕೊಳ್ಳಲು ವಿದ್ಯುತ್ ಕಂಬವೇರಿದರು’ ಎಂದು ಮುಂಗುಸುವಳ್ಳಿ ಬಂಗಾರಪ್ಪ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಶಿಧರ, ಶಿವಣ್ಣ, ಚಿಕ್ಕಣ್ಣ, ತಿಮ್ಮಣ್ಣ, ಶಂಕರಮ್ಮ, ಶಿವಮ್ಮ, ಗೀತಮ್ಮ, ಚಂದ್ರಪ್ಪ, ವೀರಣ್ಣ, ಗುಜ್ಜಾರಪ್ಪ, ಶಿವಶಂಕರ ಪಾಲ್ಗೊಂಡಿದ್ದರು.
***
ಪರಿಹಾರ ನೀಡಿದ ಬಳಿಕ ಕಾಮಗಾರಿ
ರೈತರ ಪ್ರತಿಭಟನೆ ತೀವ್ರವಾಗಿದ್ದನ್ನು ಗಮನಿಸಿದ ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೊಟ್ರೇಶ್, ಕಾರಿಡಾರ್ ಭೂ ಪರಿಹಾರ, ಬೆಳೆ ನಷ್ಟ ಪರಿಹಾರ ಮತ್ತು ಗೋಪುರ ನಿರ್ಮಾಣದ ಪೂರ್ಣ ಪರಿಹಾರದ ಮೊತ್ತವನ್ನು ಫಲಾನುಭವಿಗಳಿಗೆ ಕೊಡದೇ ಕಾಮಗಾರಿಯನ್ನು ಮುಂದುವರಿಸುವುದಿಲ್ಲ ಎಂದು ರೈತರಿಗೆ ಪತ್ರ ಬರೆದುಕೊಟ್ಟರು. ಬಳಿಕ ರೈತರು ಪ್ರತಿಭಟನೆಯ ಸ್ಥಳದಿಂದ ವಾಪಸಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.