ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರನ್ನು ಕಾಡುವ ಶೌಚಾಲಯ ಸಮಸ್ಯೆ

ಐತಿಹಾಸಿಕ ಕೋಟೆ ವೀಕ್ಷಣೆಗೆ ದೂರದೂರಿನ ಮಕ್ಕಳ ಭೇಟಿ
Last Updated 18 ನವೆಂಬರ್ 2018, 16:11 IST
ಅಕ್ಷರ ಗಾತ್ರ

ದೂರದೂರಿನಿಂದ ಬಂದಿದ್ದ ಮಕ್ಕಳಲ್ಲಿ ಕುತೂಹಲವಿತ್ತು. ರಾತ್ರಿ ಪ್ರಯಾಣ ಮಾಡಿದ್ದರಿಂದ ಅವರು ಕೊಂಚ ದಣಿದಿದ್ದರು. ನಿತ್ಯಕರ್ಮ ಮುಗಿಸಿ ಕೋಟೆ ಏರಲು ಕಾತುರರಾಗಿದ್ದರು. ಆದರೆ, ಅವರಿಗೆ ಸಾರ್ವಜನಿಕ ಶೌಚಾಲಯವೇ ಸಿಗಲಿಲ್ಲ!

ಕಲ್ಲಿನ ಕೋಟೆ ವೀಕ್ಷಿಸಲು ಬರುವ ಪ್ರವಾಸಿಗರು ನಿತ್ಯ ಅನುಭವಿಸುವ ಸಮಸ್ಯೆ ಇದು. ವರ್ಷಾಂತ್ಯದ ಕೊನೆಯ ಎರಡು ತಿಂಗಳಲ್ಲಿ ಪ್ರವಾಸಕ್ಕೆ ಬರುವ ಶಾಲೆ–ಕಾಲೇಜು ವಿದ್ಯಾರ್ಥಿಗಳು ಶೌಚಾಲಯವಿಲ್ಲದೇ ಪರದಾಡುತ್ತಿದ್ದಾರೆ. ಶೌಚಕ್ಕೆ ಬಯಲು ಅವಲಂಬಿಸುವುದು ಪ್ರವಾಸಿಗರಿಗೆ ಅನಿವಾರ್ಯವಾಗಿದೆ.

ಮದಕರಿ ನಾಯಕರ ವೈಭವದ ಇತಿಹಾಸ ಸಾರುವ ಪ್ರತೀಕವಾಗಿ ಕೋಟೆ ಕಾಣುತ್ತಿದೆ. ಇತಿಹಾಸ ಅಧ್ಯಯನ ಮಾಡಿದವರು, ಸಿನಿಮಾ ನೋಡಿದ ಅನೇಕರಿಗೆ ಕೋಟೆ ನೋಡುವ ಕುತೂಹಲ ಮೂಡುವುದು ಸಹಜ. ಶೈಕ್ಷಣಿಕ ಪ್ರವಾಸಕ್ಕೆ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆತರುವ ವಾಡಿಕೆ ರಾಜ್ಯದ ಹಲವು ಶಾಲೆಗಳಲ್ಲಿದೆ. ವರ್ಷಕ್ಕೆ ಲಕ್ಷಾಂತರ ಪ್ರವಾಸಿಗರು ಕೋಟೆಯ ವೀಕ್ಷಣೆಗೆ ಚಿತ್ರದುರ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಮಕ್ಕಳು ಸೇರಿದರೆ ಈ ಪ್ರಮಾಣ ಇನ್ನೂ ಹೆಚ್ಚಾಗಲಿದೆ.

ಆದರೆ, ಪ್ರವಾಸಿಗರ ಸಂಖ್ಯೆಗೆ ತಕ್ಕಷ್ಟು ಶೌಚಾಲಯ ಕೋಟೆಯ ಒಳಗೆ ಹಾಗೂ ಹೊರಗೆ ಇಲ್ಲ. ಬಹುತೇಕ ಪ್ರವಾಸಿಗರು ಸಮೀಪದ ಲಾಡ್ಜ್‌, ಛತ್ರಗಳಲ್ಲಿ ನಿತ್ಯಕರ್ಮ ಮುಗಿಸಿ ಕೋಟೆಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಖಾಸಗಿ ಲಾಡ್ಜ್‌ಗಳ ವೆಚ್ಚ ಭರಿಸುವ ಶಕ್ತಿ ಇಲ್ಲ. ಹೀಗಾಗಿ, ಕೋಟೆಯ ಹಿಂಭಾಗದ ಬಯಲಿಗೆ ಮಕ್ಕಳನ್ನು ಕರೆದೊಯ್ಯಲಾಗುತ್ತಿದೆ. ವಿದ್ಯಾರ್ಥಿನಿಯರು ಹೇಳಿಕೊಳ್ಳಲು ಸಾಧ್ಯವಿಲ್ಲದಂತಹ ಸಂಕಟ ಅನುಭವಿಸುತ್ತಿದ್ದಾರೆ.

ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಮಲೆನಾಡು, ಕರಾವಳಿ, ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಯ ಪ್ರವಾಸಿಗರು ಕೋಟೆ ನೋಡಲು ಚಿತ್ರದುರ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ರಾತ್ರಿ ಪ್ರಯಾಣ ಮಾಡಿ ದಣಿದಿದ್ದವರನ್ನು ಮೂಲ ಸೌಲಭ್ಯಗಳ ಕೊರತೆ ಬಾಧಿಸುತ್ತಿದೆ. ಪ್ರವಾಸಿಗರ ದೃಷ್ಟಿಯಿಂದ ಕೋಟೆ ಮುಂಭಾಗ ನಿರ್ಮಿಸಿದ ಯಾತ್ರಿ ನಿವಾಸ ಸಾಮಾನ್ಯ ಪ್ರವಾಸಿಗರ ಕೈಗೆಟಕುತ್ತಿಲ್ಲ.

ಕೋಟೆಯ ಮಹಾದ್ವಾರ, ರಾಗಿ ಬೀಸುವ ಕಲ್ಲು, ಗೋಪಾಲಸ್ವಾಮಿ ಹೊಂಡ, ಅಕ್ಕ ತಂಗಿ ಹೊಂಡ, ತಣ್ಣೀರು ದೋಣಿ, ಏಕನಾಥೇಶ್ವರಿ, ಗಣೇಶ, ಸಂಪಿಗೆ ಸಿದ್ಧೇಶ್ವರ, ಹಿಡಿಂಬೇಶ್ವರ, ಪುರಾತನ ಕಣಜ, ಟಂಕಸಾಲೆ, ತುಪ್ಪದ ಕೊಳ, ಒನಕೆ ಓಬವ್ವನ ಕಿಂಡಿ, ಫಿರಂಗಿ ಹೀಗೆ ವಿಸ್ಮಯ ಮೂಡಿಸುವ ತಾಣಗಳು ಕೋಟೆಯಲ್ಲಿವೆ. ಇವನ್ನು ಸಂಪೂರ್ಣವಾಗಿ ವೀಕ್ಷಿಸಲು ಕನಿಷ್ಠ ಮೂರು ಗಂಟೆ ಸಮಯ ಹಿಡಿಯುತ್ತದೆ.

ಪ್ರವಾಸಿಗರಿಗಾಗಿ ಕೋಟೆಯ ಒಳಗೆ ಎರಡು ಭಾಗದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಮಹಾದ್ವಾರ ದಾಟಿದ ಬಲಬದಿ ಹಾಗೂ ಟಂಕಸಾಲೆ ಸಮೀಪ ಶೌಚಾಲಯಗಳಿವೆ. ಆದರೆ, ಇವುಗಳು ಪ್ರವಾಸಿಗರಿಗೆ ಸಾಕಾಗುತ್ತಿಲ್ಲ. ಅನೇಕ ಬಾರಿ ಶೌಚಾಲಯದ ಎದುರು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಇದೆ. ಬಹುತೇಕ ಸಂದರ್ಭದಲ್ಲಿ ನೀರಿನ ಕೊರತೆಯಿಂದ ಇವುಗಳಿಗೆ ಬೀಗ ಹಾಕಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೋಟೆಯ ಆವರಣದಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT