ಗುರುವಾರ , ಜನವರಿ 21, 2021
18 °C
ಬಯಲು ಸೀಮೆಯ ಬುಡಕಟ್ಟು ಆಚರಣೆಗೆ ಸಿದ್ಧತೆ

ದುಮ್ಮಿಗೊಲ್ಲರಹಟ್ಟಿ ಜುಂಜಪ್ಪ ಸ್ವಾಮಿ ಜಾತ್ರೆ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ದುಮ್ಮಿಗೊಲ್ಲರ ಹಟ್ಟಿಯ ಐತಿಹಾಸಿಕ ಜುಂಜಪ್ಪ ಸ್ವಾಮಿ ಜಾತ್ರೆ ಜ.4ರಿಂದ ಜ.6ರವರೆಗೆ ನಡೆಯಲಿದೆ.  ಜ.5ರಂದು ಮಹಾಜಾತ್ರೆ ನಡೆಯಲಿದೆ. ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ. ನೂತನ ದೇವಾಲಯ ಬಣ್ಣಗಳಿಂದ ಕಂಗೊಳಿಸುತ್ತಿದೆ.

ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಜಾತ್ರೆಗೆ ಬರಲಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗ್ರಾಮದ ಹೊರಗೆ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಿದ್ದು, ಜಾತ್ರೆ ನಡೆಯುವ ಪ್ರದೇಶದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಬಯಲು ಸೀಮೆ ಜನರ ಆರಾಧ್ಯ ದೈವ ಜುಂಜಪ್ಪ ಸ್ವಾಮಿ ಪವಾಡ ಪುರುಷನೆಂದೇ ಖ್ಯಾತಿ. ಜಾತ್ರೆಯಲ್ಲಿ ಬುಡಕಟ್ಟು ಪರಂಪರೆ ಅನಾವರಣಗೊಳ್ಳಲಿದೆ. ಜಾತ್ರೆಯಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ, ಕದಳಿ ಪೂಜೆ, ಎಳ್ಳಿನ ಪೂಜೆ, ಹೂವಿನ ಉತ್ಸವ, ಎಲೆ ಪೂಜೆ, ಉಗ್ಗದ ಗಡಿಗೆ, ಹಾಲು ಕಂಬಿಗೆ, ಕಂಚಿನ ಕಡಗಕ್ಕೆ ವಿಶೇಷ ಪೂಜೆಗಳು ನಡೆಯಲಿವೆ. ಗುಗ್ಗಳ ಹೊರುವುದು ಜಾತ್ರೆಯ ವಿಶೇಷ ಆಚರಣೆಯಾಗಿದ್ದು, ಮಕ್ಕಳಿಂದ ವೃದ್ಧರವರೆಗೆ ಗುಗ್ಗಳದ ಮಡಿಕೆ ಹೊರುತ್ತಾರೆ.

‘ನಮ್ಮ ಊರಿನ ಜಾತ್ರೆಗೆ ಚಿತ್ರದುರ್ಗ, ಶಿವಮೊಗ್ಗ, ತುಮಕೂರು, ದಾವಣಗೆರೆ, ಬೆಂಗಳೂರು ಮತ್ತಿತರೆ ಕಡೆಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಹಾವು, ಚೇಳು ಕಡಿದವರು ಮುಡುಪು ಕಟ್ಟಿಕೊಂಡು ಬಂದು ದೇವಾಲಯದಲ್ಲಿ ನಾಲ್ಕಾರು ದಿನ ಉಳಿದುಕೊಳ್ಳುತ್ತಾರೆ. ವರ್ಷದ ಎಲ್ಲಾ ಕಾಲದಲ್ಲೂ ಭಕ್ತರು ದೇವಾಲಯಕ್ಕೆ ಬರುವುದರಿಂದ ತಂಗಲು ವಿಶ್ರಾಂತಿ ಗೃಹದ ಅಗತ್ಯ ಇದೆ. ಭಕ್ತರು ಶುಭ ಕಾರ್ಯಗಳನ್ನು ಜುಂಜಪ್ಪ ಸ್ವಾಮಿ ಸಾಂಸ್ಕೃತಿಕ ಭವನ ನಿರ್ಮಸಬೇಕು’ ಎಂದು ಗ್ರಾಮದ ಮುಖಂಡ ಎ.ಚಿತ್ತಪ್ಪ ಯಾದವ್ ಒತ್ತಾಯಿಸಿದರು.

‘ಗ್ರಾಮದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಜುಂಜಪ್ಪ ಸ್ವಾಮಿ ದೇವಸ್ಥಾನ ನಿರ್ಮಿಸಲಾಗುತ್ತಿದ್ದು, ಮುಕ್ತಾಯದ ಹಂತದಲ್ಲಿದೆ. ಭಕ್ತರು ದೇವಾಲಯ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದು ಗ್ರಾಮದ ಅಂಗಡಿ ತಿಮ್ಮಪ್ಪ, ಗೌಡ್ರು ಕುಬೇಂದ್ರಪ್ಪ, ರವಿ ಸುದ್ದೇರ್, ನಾಗಪ್ಪ ರೇವಣಸಿದ್ದಪ್ಪ, ಗೋವಿಂದಪ್ಪ ಮನವಿ ಮಾಡಿದರು.

‘ಕೋವಿಡ್ ಇರುವುದರಿಂದ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕು’ ಎಂದು ದೇವಾಲಯ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.