ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷರ ಸಮಾಜ ರಾಕ್ಷಸ ಆಗಬಾರದು

ಡಾ.ಶಿವಮೂರ್ತಿ ಮುರುಘಾ ಶರಣರ ಅಭಿಪ್ರಾಯ
Last Updated 11 ಆಗಸ್ಟ್ 2022, 5:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಕ್ಷರ ಸಂಸ್ಕೃತಿ ಎಂದಿಗೂ ನಾಶವಾಗುವುದಿಲ್ಲ. ಆದರೆ, ಸಾಕ್ಷರ ಸಮಾಜ ರಾಕ್ಷಸ ಸಮಾಜ ಆಗಬಾರದು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ‘ನಿತ್ಯ ಕಲ್ಯಾಣ; ಮನೆಮನೆಗೆ ಚಿಂತನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ‘ಸಾಕ್ಷರ ಪ್ರಜ್ಞೆ’ ಕುರಿತು ಮಾತನಾಡಿದರು.

‘ಸಾಕ್ಷರ ಸಮಾಜವನ್ನಾಗಿಸುವ ಸವಾಲು ಎಲ್ಲ ಸರ್ಕಾರಗಳ ಮುಂದಿದೆ. ಕೇರಳ ಹೊರತುಪಡಿಸಿ ಅನೇಕ ರಾಜ್ಯಗಳಲ್ಲಿ ಸಾಕ್ಷರತೆ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಅಕ್ಷರ ಅಂದರೆ ನಾಶವಾಗಲಾರದೇ ಇರುವಂತಹದ್ದು’ ಎಂದರು.

‘ಜಗತ್ತಿನ ಯಾವ ಮೂಲೆಯಲ್ಲಿಯೂ ಅಂಧಃಕಾರ ಇರಬಾರದು. ಮಾನವ ವಿಜ್ಞಾನ ತಂತ್ರಜ್ಞಾನದ ಮೂಲಕ ವಿದ್ಯುತ್‌ ದೀಪವನ್ನು ಕಂಡುಹಿಡಿದಿದ್ದಾನೆ. ಆದರೆ, ಅವನ ಆಂತರ್ಯದಲ್ಲಿ ಅಂಧಃಕಾರ ಅಜ್ಞಾನ, ಮೂರ್ಖತನ ಇದೆ. ಇದನ್ನು ನಿವಾರಿಸಲು ಜಗತ್ತಿನ ಎಲ್ಲ ದಾರ್ಶನಿಕರು ಪ್ರಯತ್ನ ಮಾಡಿದ್ದಾರೆ’ ಎಂದು ತಿಳಿಸಿದರು.

‘ಆಧುನಿಕ ಜಗತ್ತಿನಲ್ಲಿ ಮಾನವ ಗಳಿಕೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾನೆ. ಗಳಿಕೆ ಒಂದು ದಿನ ಕಳೆದು ಹೋಗುತ್ತದೆ. ಆದ್ದರಿಂದ ಸಾಕ್ಷರತೆ ಸಾಧಿಸುವ ಮೂಲಕ ಅಂಧಃಕಾರದ ವಿರುದ್ಧ ಹೋರಾಡಬೇಕು’ ಎಂದರು.

ಪ್ರಾಧ್ಯಾಪಕಿ ಪ್ರೊ.ತಾರಿಣಿ ಶುಭದಾಯಿನಿ ಮಾತನಾಡಿ, ‘ಸಾಕ್ಷರತೆ ಪರಿಕಲ್ಪನೆ ನೋಡಿದರೆ ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತ ಬಂದಿದೆ. ಔಪಚಾರಿಕ ಶಿಕ್ಷಣವನ್ನು ಸ್ವಾನುಭಾವದ ಮೂಲಕ ವಿಸ್ತರಿಸಬಹುದು’ ಎಂದು ಹೇಳಿದರು.

‘ಗುರುಕುಲಗಳ ಸಾಂಸ್ಥೀಕರಣ ಆದಂತೆ ಜ್ಞಾನ ಕಡಿಮೆ ಆಗುತ್ತಿದೆಯೇನೊ ಎನ್ನುವ ಭಾವನೆ ಹೆಚ್ಚಾಗಿದೆ. ಸಾಕ್ಷರತೆ ಮೂಲಕ ಅಧಿಕಾರಗಳಿಸಿ ಆ ಮೂಲಕ ಬೇರೊಬ್ಬರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಯಾವುದು ಸಮಾಜವನ್ನು ಸರಿಪಡಿಸಬೇಕಿತ್ತೋ ಅದು ಒಡೆತನದ ವಸ್ತುವಾಯಿತು. ಇದನ್ನು ಹೋಗಲಾಡಿಸಲು ಅಂಬೇಡ್ಕರ್‌ ಅಂತವರು ಬರಬೇಕಾಯಿತು’ ಎಂದರು.

ನಿವೃತ್ತ ತಹಶೀಲ್ದಾರ್‌ ಕೆ. ಬಾಲಪ್ಪ, ವಕೀಲ ಎಚ್‌.ಎನ್‌. ರಾಮಚಂದ್ರಪ್ಪ, ನಾಗಪ್ಪ ಹರಪನಹಳ್ಳಿ, ವೈ. ಕುಮಾರ್‌, ಬಸವಕುಮಾರ ಸ್ವಾಮೀಜಿ, ಕೆ. ವಿಜಯ ಕುಮಾರ್‌ ಇದ್ದರು.

ಬಸವಾದಿ ಶರಣರು ಸಾಕ್ಷರತೆ ಜತೆಗೆ ಸಂಸ್ಕಾರ ಮೂಡಿಸುತ್ತಾ ಜನರನ್ನು ಅಕ್ಷರವಂತರಿಗಿಂತ ಅನುಭಾವವಂತರನ್ನಾಗಿ ಮಾಡಿದರು.- ಬಸವ ಶಾಂತಲಿಂಗ ಸ್ವಾಮೀಜಿ, ಹಾವೇರಿ ಹೊಸಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT