ಮಂಗಳವಾರ, ಅಕ್ಟೋಬರ್ 20, 2020
23 °C
ತುರ್ತು ಶಸ್ತ್ರಚಿಕಿತ್ಸಾ ಸೇವೆಗೆ ಬಳಕೆಯಾಗುತ್ತಿರುವ ಅತ್ಯಾಧುನಿಕ ಪಶು ಸಂಜೀವಿನಿ ವಾಹನ

ಚಿತ್ರದುರ್ಗ: ಪ್ರಾಣಿಗಳ ಜೀವ ರಕ್ಷಣೆಗೆ ಸಜ್ಜಾದ ‘1962’

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಅಪಘಾತ ಸೇರಿ ತುರ್ತು ಸಂದರ್ಭಗಳಲ್ಲಿ ಮಾನವನ ನೆರವಿಗೆ ಧಾವಿಸುವ ‘108’ ಆಂಬುಲೆನ್ಸ್ ಮಾದರಿಯಲ್ಲಿ ಜಾನುವಾರುಗಳ ಪ್ರಾಣ ಹಾನಿ ತಪ್ಪಿಸಲು ‘1962’ ಪಶು ಆಂಬುಲೆನ್ಸ್ ಸಂಚರಿಸುತ್ತಿದೆ. ಪ್ರಾಣಿಗಳನ್ನು ಆಸ್ಪತ್ರೆಗೆ ಸಾಗಿಸುವ ಬದಲು ಸ್ಥಳದಲ್ಲೇ ಶಸ್ತ್ರಚಿಕಿತ್ಸೆ ನೀಡಿ, ಪ್ರಾಣ ರಕ್ಷಿಸುತ್ತಿದೆ.

ದನ, ಎಮ್ಮೆ, ಕುರಿ, ಮೇಕೆ, ನಾಯಿ, ಹಂದಿ ಸೇರಿ ಇತರೆ ಜಾನುವಾರುಗಳ ಜೀವಕ್ಕೆ ತೊಂದರೆ ಉಂಟಾದಲ್ಲಿ ತಕ್ಷಣ ಮನೆ ಬಾಗಿಲಿಗೆ ಸಂಚಾರಿ ಪಶು ಸಂಜೀವಿನಿ ಚಿಕಿತ್ಸಾಲಯ ಧಾವಿಸಲಿದೆ. ತಜ್ಞ ಪಶು ವೈದ್ಯರ ತಂಡ ತುರ್ತು ಸೇವೆಗೆ ಈ ವಾಹನದದಲ್ಲಿ ಬರಲಿದ್ದಾರೆ.

ರಾಜ್ಯ ಸರ್ಕಾರ ಜಾನುವಾರು ರಕ್ಷಣೆಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮೂಲಕ ಈಚೆಗಷ್ಟೇ ಜಾರಿಗೊಳಿಸಿದ ನೂತನ ಯೋಜನೆಯೇ ‘ಪಶು ಸಂಜೀವಿನಿ’ ಸಂಚಾರಿ ವಾಹನ. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಕೆಲ ದಿನಗಳಿಂದ ಜಿಲ್ಲೆಯ ಪಶುಪಾಲಕರು ಉತ್ಸುಕತೆ ತೋರುತ್ತಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಪಾಲಿ ಕ್ಲಿನಿಕ್, ಆರು ತಾಲ್ಲೂಕಿಗೆ ತಲಾ ಒಂದರಂತೆ ಪಶು ಆಸ್ಪತ್ರೆ, ಎಲ್ಲ ಹೋಬಳಿ ಕೇಂದ್ರಗಳಲ್ಲಿ ಪಶು ಆಸ್ಪತ್ರೆ, ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಮತ್ತು ಪಶು ಚಿಕಿತ್ಸಾಲಯ ಸೇರಿ ಒಟ್ಟು ಜಿಲ್ಲೆಯಲ್ಲಿ 156 ಆಸ್ಪತ್ರೆಗಳಿವೆ. ಇಲ್ಲಿ ಕೂಡ ಶಸ್ತ್ರಚಿಕಿತ್ಸೆಗಳು ನಡೆದರೂ ದೂರದ ಗಡಿಭಾಗದ ಗ್ರಾಮಗಳಲ್ಲಿ ತೊಂದರೆ ಉಂಟಾಗುತ್ತಿತ್ತು. ಅದನ್ನು ತಪ್ಪಿಸಲು ಸಂಚಾರಿ ಚಿಕಿತ್ಸಾಲಯ ಸಹಕಾರಿಯಾಗಲಿದೆ.

ಪ್ರತಿ ತಾಲ್ಲೂಕಿಗೂ ಸಂಚಾರಿ ಪಶು ಚಿಕಿತ್ಸಾಲಯ ಸೌಲಭ್ಯವಿದೆ. ವಾರದ ನಿರ್ದಿಷ್ಟ ಸಮಯದಲ್ಲಿ ನಿಗದಿತ ಹಳ್ಳಿಗಳಿಗೆ ತೆರಳಿ ಪಶು ವೈದ್ಯಕೀಯ ತಂಡ ಪ್ರಾಥಮಿಕ ಚಿಕಿತ್ಸಾ ಸೌಲಭ್ಯ ನೀಡುತ್ತದೆ. ಶಸ್ತ್ರಚಿಕಿತ್ಸೆಗೆ ಈ ವಾಹನಗಳಲ್ಲಿ ಹೆಚ್ಚಿನ ಸೌಲಭ್ಯ ಇರಲಿಲ್ಲ. ಆಸ್ಪತ್ರೆಗೆ ಕೊಂಡೊಯ್ಯಬೇಕಿತ್ತು. ಆದರೆ, ಪಶು ಸಂಜೀವಿನಿ ವಾಹನದಲ್ಲಿ ಸ್ಥಳದಲ್ಲೇ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಎಲ್ಲ ಬಗೆಯ ಉಪಕರಣಗಳಿವೆ.

ಜಿಲ್ಲೆಯಲ್ಲಿನ ಪಶು ಆಸ್ಪತ್ರೆಗಳಲ್ಲಿ ನಿತ್ಯ 25ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ. ನೂತನ ವಾಹನಕ್ಕೆ 10ರಿಂದ 15 ಕರೆ ಬಂದರೂ ತುರ್ತು ಸೇವೆ ಇದ್ದವರಿಗೆ ಮಾತ್ರ ಆದ್ಯತೆ ನೀಡುತ್ತಿದೆ. ದಿನಕ್ಕೆ ಎರಡು ಕಡೆಗಳಲ್ಲಿ ಶಸ್ತ್ರಚಿಕಿತ್ಸೆ ಸೌಲಭ್ಯ ಒದಗಿಸುತ್ತಿದೆ.

ಈ ವಾಹನದೊಂದಿಗೆ ತೆರಳುವ ತಜ್ಞ ಪಶುವೈದ್ಯರ ತಂಡ ರೈತರ ಮನೆ ಬಾಗಿಲಿಗೆ ಹೋಗಿ ಜಾನುವಾರುಗಳಿಗೆ ಅಗತ್ಯ ಪಶುವೈದ್ಯಕೀಯ ಸೇವೆ ನೀಡಲು ಅನುಕೂಲವಾಗಿದೆ. ಈ ಮೂಲಕ ಜಾನುವಾರುಗಳ ಪ್ರಾಣಹಾನಿ ತಡೆಗಟ್ಟಿ ರೈತರಿಗೆ ಉಂಟಾಗಬಹುದಾದ ಆರ್ಥಿಕ ನಷ್ಟವನ್ನು ತಪ್ಪಿಸುವುದು ಇದರ ಮುಖ್ಯ ಉದ್ದೇಶ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ 17 ಜಿಲ್ಲೆಗೆ ತಲಾ ಒಂದರಂತೆ ಸರ್ಕಾರದಿಂದ ವಾಹನ ನೀಡಲಾಗಿದ್ದು, ಚಿತ್ರದುರ್ಗ ಜಿಲ್ಲಾ ವಾಹನದಿಂದ ಕಳೆದ 10 ದಿನಗಳಲ್ಲಿ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕಿನ ಪಶುಪಾಲಕರೇ ಇದರ ಪ್ರಯೋಜನ ಪಡೆಯಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿದ್ದು, ಒಂದೇ ವಾಹನದಿಂದ ವಿವಿಧೆಡೆ ತುರ್ತು ಶಸ್ತ್ರಚಿಕಿತ್ಸಾ ಸೌಲಭ್ಯ ಒದಗಿಸಲು ಸಾಧ್ಯವಿಲ್ಲ. ಇನ್ನಷ್ಟು ವಾಹನಗಳನ್ನು ಇಲಾಖೆಗೆ ನೀಡಬೇಕು ಎಂಬುದು ಸಾಕಾಣಿಕೆದಾರರ ಅಭಿಪ್ರಾಯವಾಗಿದೆ.

*******

₹15 ಲಕ್ಷ ಮೌಲ್ಯದ ಈ ವಾಹನದಲ್ಲಿ ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯಗಳಿವೆ. ತುರ್ತು ಶಸ್ತ್ರಚಿಕಿತ್ಸಾ ಸೇವೆ ಒದಗಿಸಲು ಇಬ್ಬರು ಪಶು ವೈದ್ಯರು, ಸಿಬ್ಬಂದಿ, ಚಾಲಕರು ಇರಲಿದ್ದಾರೆ.

ಡಾ.ಟಿ.ಕೃಷ್ಣಪ್ಪ, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.