ಶುಕ್ರವಾರ, ಡಿಸೆಂಬರ್ 6, 2019
19 °C

ಮಾಧುಸ್ವಾಮಿ ಮಾತಿಗೆ ಸ್ವಾಮೀಜಿ ಬೇಸರ: ಸಿ.ಎಂ ಮಧ್ಯಪ್ರವೇಶಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹುಳಿಯಾರು ಪಟ್ಟಣದ ವೃತ್ತ ನಾಮಕರಣ ವಿಚಾರದಲ್ಲಿ ಉಂಟಾಗಿರುವ ವಿವಾದದ ಇತ್ಯರ್ಥಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಧ್ಯಪ್ರವೇಶಿಸಬೇಕು ಎಂದು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮನವಿ ಮಾಡಿದರು.

ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಶಾಖಾ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಭೆಯಲ್ಲಿ ನಡೆದುಕೊಂಡ ರೀತಿಗೆ ತೀವ್ರ ಅಸಮಾಧಾನ ಹೊರಹಾಕಿದರು.

‘ಹುಳಿಯಾರು ಪಟ್ಟಣದಲ್ಲಿ 15 ವರ್ಷಗಳಿಂದ ಕನಕ ವೃತ್ತವಿದೆ. ಈ ವೃತ್ತವನ್ನು ಸ್ಥಳೀಯ ಆಡಳಿತ ತೆರವುಗೊಳಿಸಿದ ಪರಿಣಾಮ ಎರಡು ಸಮುದಾಯದ ನಡುವೆ ವೈಮನಸು ಉಂಟಾಗಿದೆ. ಪಟ್ಟಣದಲ್ಲಿ ಕರೆದಿದ್ದ ಶಾಂತಿ ಸಭೆಯಲ್ಲಿ ಮಾಧುಸ್ವಾಮಿ ತೀರಾ ಒರಟಾಗಿ ಮಾತನಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಕನಕ ವೃತ್ತ ಇರಲಿಲ್ಲ, ಸ್ವಾಮೀಜಿ ಸುಮ್ಮನೆ ವಾದ ಮಾಡುತ್ತಿದ್ದಾರೆ ಎಂಬ ಸಚಿವರ ಮಾತಿಗೆ ಸಭೆಯಲ್ಲೇ ಆಕ್ಷೇಪ ವ್ಯಕ್ತವಾಯಿತು. ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಮಾಹಿತಿ ಆಧರಿಸಿ ಮಾತನಾಡುವುದು ಸೂಕ್ತ ಎಂದು ಸಲಹೆ ನೀಡಿದೆವು. ಇದಕ್ಕೆ ಅಸಮಾಧಾನಗೊಂಡ ಸಚಿವರು, ಏರುಧ್ವನಿಯಲ್ಲಿ ‘ನಾನು ಸುಳ್ಳು ಹೇಳುತ್ತೇನೊ, ನಿಜ ಹೇಳುತ್ತೇನೊ ಕೇಳಿಕೊಂಡು ಹೋಗಿ ಎಂದರು. ಇದಕ್ಕೆ ನಾನು ಸೇರಿದಂತೆ ಮಠದ ಭಕ್ತರು ವಿರೋಧ ವ್ಯಕ್ತಪಡಿಸಿದ್ದೇವೆ’ ಎಂದು ಸಭೆಯ ಮಾಹಿತಿ ಬಿಚ್ಚಿಟ್ಟರು.

‘ಕನಕ ವೃತ್ತವನ್ನು ಕಿತ್ತುಹಾಕಿ ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಿಸುವುದರಲ್ಲಿ ಅರ್ಥವಿಲ್ಲ. ಕನಕ ವೃತ್ತವನ್ನು ಮುಂದುವರಿಸಿ, ಮತ್ತೊಂದು ವೃತ್ತಕ್ಕೆ ಶಿವಕುಮಾರ ಸ್ವಾಮೀಜಿ ನಾಮಕರಣ ಮಾಡಲು ನಮ್ಮ ಬೆಂಬಲ ಇದೆ. ಇದನ್ನು ಅಂದೇ ಸಭೆಯ ಗಮನಕ್ಕೆ ತಂದಿದ್ದೇನೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು