ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಕ್ಸಾಂ ಮಾಸ್ಟರ್‌ ಮೈಂಡ್‌’ ಲೋಕಾರ್ಪಣೆ

ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಕೊಡುಗೆ
Last Updated 22 ಜೂನ್ 2022, 2:14 IST
ಅಕ್ಷರ ಗಾತ್ರ

ನಾಯಕನಹಟ್ಟಿ (ಚಿತ್ರದುರ್ಗ): ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ಬಳಗ ಹೊರತರುತ್ತಿರುವ ಆನ್‌ಲೈನ್‌ ಪತ್ರಿಕೆ ‘ಎಕ್ಸಾಂ ಮಾಸ್ಟರ್‌ ಮೈಂಡ್‌’ ಅನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕಿನ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ತಲುಪಿಸುವ ಕಾರ್ಯಕ್ಕೆ ಚಾಲನೆ ದೊರೆಯಿತು.

ಇಲ್ಲಿಯ ತೇರುಬೀದಿಯಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗ, ನಾಯಕನಹಟ್ಟಿಯ ಹಟ್ಟಿಮಲ್ಲಪ್ಪನಾಯಕ ಸಂಘ ಹಾಗೂ ಚಳ್ಳಕೆರೆ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಸಮಾರಂಭದಲ್ಲಿ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ತಿಲಕ್‌ಕುಮಾರ್‌ ಅವರು ಆನ್‌ಲೈನ್‌ ಪತ್ರಿಕೆ ಲೋಕಾರ್ಪಣೆ ಮಾಡಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು 75 ವರ್ಷ ಪೂರೈಸಿವೆ. ಇಂತಹ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪತ್ರಿಕೆ ಬಿಡುಗಡೆ ಆಗುತ್ತಿದೆ. ₹ 299ಕ್ಕೆ ‘ಎಕ್ಸಾಂ ಮಾಸ್ಟರ್‌ ಮೈಂಡ್‌’ನ್ನು ವರ್ಷಪೂರ್ತಿ ಮನೆಗೆ ಕಳುಹಿಸಿಕೊಡುತ್ತೇವೆ’ ಎಂದು ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹೇಳಿದರು.

‘ಮುಂಬೈನ ಎಟಿಎಚ್‌ಎ ಗ್ರೂಪಿನ ಸಹಕಾರದಿಂದ ಒಂದು ಸಾವಿರ ವಿದ್ಯಾರ್ಥಿಗಳಿಗೆ ಪತ್ರಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದನ್ನು ಸದುಪಯೋಗ ಮಾಡಿಕೊಂಡು ಮುಂದೆ ಒಬ್ಬರಾದರೂ ಐಎಎಸ್‌ ಅಧಿಕಾರಿಯಾಗಬೇಕು. ಆ ಕ್ಷಣಕ್ಕಾಗಿ ನಾವು ಕಾಯುತ್ತಿದ್ದೇವೆ. ಪ್ರಜಾವಾಣಿ ಬಳಗದ ಅಮೃತ ಮಹೋತ್ಸವಕ್ಕೆ ನಾಯಕನಹಟ್ಟಿಯ ಜನರು ನೀಡುವ ದೊಡ್ಡ ಕೊಡುಗೆ ಇದಾಗಬೇಕು’ ಎಂದು ಅಭಿಪ್ರಾಯಪಟ್ಟರು.

ತಹಶೀಲ್ದಾರ್‌ ಎನ್‌. ರಘುಮೂರ್ತಿ, ‘ಪದವೀಧರರಿಗೆ 32 ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡುವ ‘ಎಕ್ಸಾಂ ಮಾಸ್ಟರ್‌ ಮೈಂಡ್‌’ ಅತ್ಯುತ್ತಮ ಸಾಧನ. ಬಡತನ ಹೆಚ್ಚಿರುವ ಮತ್ತು ಸಾಕ್ಷರತೆ ಪ್ರಮಾಣ ಕಡಿಮೆ ಇರುವ ಪ್ರದೇಶದಲ್ಲಿ ಇದನ್ನು ಕೊಡುಗೆಯಾಗಿ ನೀಡುತ್ತಿರುವ ‘ಪ್ರಜಾವಾಣಿ’ ಬಳಗಕ್ಕೆ ಆಭಾರಿಯಾಗಿದ್ದೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಚಳ್ಳಕೆರೆ ಎರಡನೇ ಅತಿ ದೊಡ್ಡ ತಾಲ್ಲೂಕು. ಆದರೆ, ಸಾಕ್ಷರತೆಯಲ್ಲಿ ಅತ್ಯಂತ ಹಿಂದುಳಿದಿದೆ. ಶೇಂಗಾ ಮತ್ತು ಈರುಳ್ಳಿ ಇಲ್ಲಿಯ ಪ್ರಮುಖ ಬೆಳೆ. ಹಲವು ವರ್ಷಗಳಿಂದ ಹವಾಮಾನ ವೈಪರಿತ್ಯದಿಂದ ರೈತರು ನಷ್ಟ ಅನುಭವಿಸುತ್ತಲೇ ಬರುತ್ತಿದ್ದಾರೆ. ಇಂತಹ ಬಡ ರೈತರ ಮಕ್ಕಳಿಗೆ ‘ಮಾಸ್ಟರ್‌ ಮೈಂಡ್‌’ ಪತ್ರಿಕೆ ನೆರವಾಗಬಲ್ಲದು’ ಎಂದರು.

‘ಬಡ ಪದವೀಧರರ ಸಂಖ್ಯೆ ಇಲ್ಲಿ ಹೆಚ್ಚಾಗಿದೆ. ದೆಹಲಿ, ಬೆಂಗಳೂರು, ಹೈದರಾಬಾದ್‌ಗೆ ತೆರಳಿ ಉದ್ಯೋಗ ಹಿಡಿಯುವ ಶಕ್ತಿ ಇವರಲ್ಲಿಲ್ಲ. ಇಂತಹವರಿಗೆ ‘ಎಕ್ಸಾಂ ಮಾಸ್ಟರ್‌ ಮೈಂಡ್‌’ ರೂಪಿಸಿದ ‘ಪ್ರಜಾವಾಣಿ’ ಬಳಗದ ಔದಾರ್ಯಕ್ಕೆ ಋಣಿಯಾಗಿದ್ದೇವೆ. ಐಎಎಸ್‌, ಕೆಎಎಸ್‌ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಪತ್ರಿಕೆ ನೆರವಾಗುತ್ತದೆ’ ಎಂದು ಹೇಳಿದರು.

ಹಟ್ಟಿಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್‌ ಜಿ.ಎಂ. ತಿಪ್ಪೇಸ್ವಾಮಿ (ಯತ್ತಿನಹಟ್ಟಿಗೌಡ), ಬಿಇಒ ಸುರೇಶ್‌, ಸಿಪಿಐ ಸಮಿವುಲ್ಲಾ, ಗುರು ತಿಪ್ಪೇರುದ್ರಸ್ವಾಮಿ ದೇಗುಲದ ಇಒ ಗಂಗಾಧರಪ್ಪ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೋಡಿ ಭೀಮರಾಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ‘ಪ್ರಜಾವಾಣಿ’ ದಾವಣಗೆರೆ ಬ್ಯುರೊ ಮುಖ್ಯಸ್ಥರಾದ ಸಿದ್ದಯ್ಯ ಹಿರೇಮಠ, ಪ್ರಸರಣ ವಿಭಾಗದ ವ್ಯವಸ್ಥಾಪಕ ಎಸ್‌. ಪ್ರಕಾಶ್‌ ಇದ್ದರು.

60 ವರ್ಷಗಳಿಂದ ಪತ್ರಿಕೆಯನ್ನು ವಿತರಿಸುತ್ತಿರುವ ಚಳ್ಳಕೆರೆಯ ಓ. ಲಕ್ಷ್ಮಮ್ಮ, ದುರ್ಗೇಶ್‌, ನಾಯಕನಹಟ್ಟಿಯ ಕಲ್ಯಾಣಕುಮಾರ್‌, ನಾಯಕನಹಟ್ಟಿ ಅರೆಕಾಲಿಕ ವರದಿಗಾರ ವಿ. ಧನಂಜಯ್‌, ಚಳ್ಳಕೆರೆ ಅರೆಕಾಲಿಕ ವರದಿಗಾರರಾದ ಶಿವಗಂಗಾ ಚಿತ್ತಯ್ಯ ಅವರನ್ನು
ಸನ್ಮಾನಿಸಲಾಯಿತು.

....

ಗ್ರಾಮೀಣ ಭಾಗದಲ್ಲಿ‌ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಸಮಪರ್ಕವಾದ ಪುಸ್ತಕ, ಸೌಲಭ್ಯಗಳ ಕೊರತೆಗಳಿವೆ. ಆದರೆ, ‘ಪ್ರಜಾವಾಣಿ’ ಬಳಗದ ಮಾಸ್ಟರ್ ಮೈಂಡ್ ಮೊಬೈಲ್ ಆಪ್ ಎಲ್ಲಾ ಕೊರತೆಗಳನ್ನು ನೀಗಿಸಿದೆ. ಪರೀಕ್ಷಾ ಸಿದ್ಧತೆಗೆ ಪೂರಕವಾಗಿದೆ.

– ಚನ್ನಕೇಶವ, ಪದವಿ ವಿದ್ಯಾರ್ಥಿ

..........

ಮಾಸ್ಟರ್‌ ಮೈಂಡ್’ ಮೂಲಕ ಪ್ರಚಲಿತ ಘಟನೆಗಳು ಸೇರಿದಂತೆ ಎಲ್ಲ ಶಿಸ್ತುಬದ್ಧ ವಿಷಯಗಳ ಅಧ್ಯಯನ ಸಾಮಗ್ರಿಗಳು ಒಂದೇ ಕಡೆ ಲಭಿಸುತ್ತಿವೆ. ಮನೆಯಲ್ಲಿಯೇ ಇದ್ದು ಕ್ರಮಬದ್ಧವಾಗಿ ಅಧ್ಯಯನದಲ್ಲಿ ತೊಡಗಲು ಸಹಕಾರಿಯಾಗಿದೆ.

– ಚಿನ್ಮಯಿ, ನಾಯಕನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT