ಶನಿವಾರ, ಅಕ್ಟೋಬರ್ 16, 2021
22 °C
ಶರಣ ಸಂಸ್ಕೃತಿ ಉತ್ಸವದಲ್ಲಿ ಗಮನಸೆಳೆದ ಕೈಗಾರಿಕಾ ವಸ್ತುಪ್ರದರ್ಶನ

ಚಿತ್ರದುರ್ಗ: ರೈತರನ್ನು ಆಕರ್ಷಿಸಿದ ಕೃಷಿ ಮೇಳ

ಕೆ.ಎಸ್‌.ಪ್ರಣವಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಆವರಣವೊಂದರಲ್ಲಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಹಲವು ಬಗೆಯ ಕೃಷಿ ಪರಿಕರಗಳು, ಯಂತ್ರೋಪಕರಣಗಳಿಗೆ ಮನಸೋತರು. ಕೃಷಿ ಸೇರಿ ಇತರೆ ಹಲವು ಬಗೆಯ ವಸ್ತುಗಳು ಕೂಡ ಮಾರಾಟಕ್ಕಿದ್ದವು. ಗ್ರಾಹಕರು ಅಭಿರುಚಿಗೆ ತಕ್ಕಂತೆ ಖರೀದಿಯಲ್ಲಿ ತೊಡಗಿದರು.

ಮುರುಘಾಮಠದ ಆವರಣದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬುಧವಾರ ಆರಂಭವಾದ ‘ಕೃಷಿ ಮೇಳ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ’ ರೈತರನ್ನು ಮಾತ್ರವಲ್ಲ, ಮಠಕ್ಕೆ ಬಂದಿದ್ದ ಹಲವರನ್ನು ಆಕರ್ಷಿಸಿತು.

ಮೇಳ ನಡೆಯುವ ಪ್ರವೇಶ ದ್ವಾರದ ಕಮಾನು, ವಸ್ತುಪ್ರದರ್ಶನದ ಮಳಿಗೆಗಳನ್ನು ತಳಿರು ತೋರಣ, ಬಲೂನುಗಳಿಂದ ಸಿಂಗರಿಸಲಾಗಿತ್ತು. ವೇದಿಕೆ ಹಿಂಬದಿಯಲ್ಲಿ ಎಲೆಗಳಿಂದಲೇ ಅಲಂಕರಿಸಲಾಗಿತ್ತು. ಶಿವಮೂರ್ತಿ ಮುರುಘಾ ಶರಣರು ಕೃಷಿ, ತೋಟಗಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಮಾದರಿ ಗಮನ ಸೆಳೆಯಿತು.

ಯಂತ್ರೋಪಕರಣಗಳು ರಾರಾಜಿಸುತ್ತಿದ್ದವು. ಕಣ್ಣು ಹಾಯಿಸಿದ ಕಡೆಯಲ್ಲ ಸಿರಿಧಾನ್ಯ ಸೇರಿ ಕೃಷಿ ಉತ್ಪನ್ನಗಳದ್ದೇ ಕಾರುಬಾರು. ವಿವಿಧ ಭಾಗಗಳಿಂದ ಬಂದಿದ್ದ ಜನರಿಗೆ ಈ ಮೇಳವು ಒಂದೇ ವೇದಿಕೆಯಲ್ಲಿ ವೈವಿಧ್ಯವನ್ನು ಪರಿಚಯಿಸಿತು. ಇದೇ ವೇಳೆ ಕೃಷಿ ಯಂತ್ರೋಪಕರಣ, ಸಾವಯವ ಗೊಬ್ಬರ, ಬಿತ್ತನೆ ಬೀಜದ ಬಗ್ಗೆ ಕೆಲ ರೈತರು ಮಾಹಿತಿ ಪಡೆಯಲು ಮುಂದಾದರು.

ಮೇಳದ ಪ್ರಥಮ ದಿನವೇ ಜನದಟ್ಟಣೆ ಕಂಡುಬಂದಿತ್ತು. ಮೇಳಕ್ಕೆ ಭೇಟಿ ನೀಡಿದವರ ಬಾಯ್ತುಂಬ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ, ಭದ್ರಾ ಮೇಲ್ದಂಡೆ ಯೋಜನೆಯ ಸಂಪೂರ್ಣ ವಿವರವುಳ್ಳ ಮಾದರಿ, ಮೀನುಗಾರಿಕೆ ಇಲಾಖೆಯಲ್ಲಿ ಸಿಗುವ ವಿವಿಧ ಸೌಲಭ್ಯ, ತೋಟಗಾರಿಕೆ ಬೆಳೆಗಳು, ಖಾದಿ ವಸ್ತುಗಳು ಹೀಗೆ ಹಲವು ವಿಷಯಗಳ ಕುರಿತು ಚರ್ಚಿಸುತ್ತಿದ್ದದ್ದು ಕಂಡು ಬಂತು.

ಮೇಳದಲ್ಲಿ 30ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಮಳಿಗೆಗಳನ್ನು ವಸ್ತು ಪ್ರದರ್ಶಕರಿಗೆ ನೀಡಲಾಗಿತ್ತು. ವಿಜಯಪುರ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಬಂದಿದ್ದರು. ಸಾವಯವ ಕೃಷಿ ಉತ್ಪನ್ನಗಳು, ಸಿರಿಧಾನ್ಯ ಮಳಿಗೆ, ಪುಸ್ತಕ ಮಳಿಗೆ ಕಂಡುಬಂದಿತು. ಜತೆಗೆ ಕೆಲ ಮಹಿಳಾ ಸಂಘಗಳು ಮಳಿಗೆಯನ್ನು ತೆರೆದಿದ್ದವು.

ಮೇಳದಲ್ಲಿ ವಿವಿಧ ವಸ್ತುಗಳ ಮಾರಾಟ: ರೊಟ್ಟಿ, ಹಪ್ಪಳ, ಚಕ್ಕಲಿ, ಚಟ್ನಿ ಪುಡಿ, ರಾಗಿ ಬಿಸ್ಕತ್ತು, ಉಪ್ಪಿನಕಾಯಿ, ಶೇಂಗಾ ಚಿಕ್ಕಿ, ಮೆಕ್ಕೆಜೋಳ ಸೀಡ್ಸ್‌, ಮರದ ಗಾಣದಿಂದಲೇ ತಯಾರಿಸಿದ್ದ ಕೊಬ್ಬರಿ ಎಣ್ಣೆ, ಕಡಲೆಕಾಯಿ ಎಣ್ಣೆ, ಎಳ್ಳಿನ ಎಣ್ಣೆ, ಶೇಂಗಾ ಎಣ್ಣೆ, ಪೂಜಾ ಸಾಮಗ್ರಿಗಳಾದ ಅಗರಬತ್ತಿ, ಧೂಪದ ಬತ್ತಿ, ಸಾಂಬ್ರಾಣಿ ಬತ್ತಿ, ಲೋಭಾನಾ ಬತ್ತಿ, ಆಕ್ವಾಗಾರ್ಡ್‌ (ಶುದ್ಧ ನೀರಿನ ಯಂತ್ರ), ಮರದಿಂದ ತಯಾರಿಸಿದ್ದ ವಸ್ತುಗಳು, ಖಾದಿ ಶರ್ಟ್‌ಗಳು, ಜಾಕೀಟ್‌ಗಳು, ಟವೆಲ್‌ಗಳು, ಮೊಳಕಾಲ್ಮುರು ರೇಷ್ಮೆ ಸೀರೆ, ಕಂಚಿ ಸೀರೆ, ಕಾಟನ್‌ ಸೀರೆ, ರೇಷ್ಮೆಯಿಂದ ತಯಾರಿಸಿದ್ದ ಹಾರಗಳು, ತೋರಣಗಳು, ಸ್ವಚ್ಛತಾ ಸಾಮಗ್ರಿಗಳು ಮಾರಾಟಕ್ಕಿದ್ದವು. 

‘ಸಿರಿಧಾನ್ಯ ಕೃಷಿ ಉತ್ಪನ್ನಗಳನ್ನು ತಯಾರಿಸುತ್ತೇವೆ. ಆರೋಗ್ಯಕ್ಕೆ ಅತ್ಯಂತ ಪೂರಕವಾಗಿವೆ. ಎಲ್ಲಿಯೇ ಮಳಿಗೆ ತೆರೆದರು ವ್ಯಾಪಾರ ಚೆನ್ನಾಗಿ ಆಗುತ್ತದೆ. ಶರಣ ಸಂಸ್ಕೃತಿ ಉತ್ಸವದಲ್ಲಿ ಇದೇ ಮೊದಲ ಬಾರಿ ಮಳಿಗೆ ತೆರೆದಿದ್ದೇವೆ. ಮೂರು ದಿನದ ನಂತರವೇ ಫಲಿತಾಂಶ ಸಿಗಲು ಸಾಧ್ಯ’ ಎಂದು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆ ಸೂರ್ಯನೀತು ಹೇಳಿದರು.

‘ಮಳಿಗೆಯವರಿಂದ ಸಾವಯವ ಕೃಷಿಯ ಮಾಹಿತಿ ಪಡೆದಿದ್ದೇನೆ. ಅದನ್ನು ಅಳವಡಿಸಿಕೊಳ್ಳುತ್ತೇನೆ. ಈ ರೀತಿ ಮೇಳಗಳು ಹೆಚ್ಚಾಗಿ ನಡೆಯಬೇಕು. ಆಗ ರೈತರಿಗೆ ಅನೂಕೂಲವಾಗುತ್ತದೆ’ ಎಂದು ರೈತ ತಿಪ್ಪೇಸ್ವಾಮಿ ಹೇಳಿದರು.

ಗಮನಸೆಳೆದ ಮಾದರಿಗಳು

ಜಲಾನಯನ ಇಲಾಖೆಯ ಚೆಕ್ ಡ್ಯಾಂ ಮಾದರಿ, ಕೃಷಿ ಇಲಾಖೆಯ ಜಲ ಸಂರಕ್ಷಣೆಗೆ ಮಾದರಿ ಹೊಂಡ ನಿರ್ಮಾಣ, ಸಮಸ್ಯಾತ್ಮಾಕ ಮಣ್ಣನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ ಬೆಳೆ ಬೆಳೆಯುವ ಮಾದರಿ, ಶುದ್ಧ ಶೇಂಗಾ ಎಣ್ಣೆ ತಯಾರಿಸುವ ಮಾದರಿ, ಗಂಗಾ ಕಾವೇರಿ ಸೀಡ್ಸ್-ಮೆಕ್ಕಜೋಳ, ಕಾವೇರಿ ಸೀಡ್ಸ್-ಮೆಕ್ಕೆಜೋಳ, ಹಿರಿಯೂರಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಿಂದ ಶೇಂಗಾದ ಕದರಿ ಲೇಪಾಕ್ಷಿ ಹೊಸ ತಳಿ ಪರಿಚಯ, ವರ್ಷ ಅಸೋಸಿಯೇಟ್ಸ್- ಕೃಷಿ ಉಪಕರಣ ಪ್ರದರ್ಶನ ಗಮನ ಸೆಳೆಯಿತು.

ಆಯುಷ್ ಇಲಾಖೆಯಿಂದ ಮನೆಯ ಸುತ್ತಮುತ್ತ ದೊರೆಯುವ ಔಷಧೀಯ ಸಸ್ಯಗಳ ಪರಿಚಯ ಹಾಗೂ ಬಳಕೆ, ರೇಷ್ಮೆ ಇಲಾಖೆಯಿಂದ ರೇಷ್ಮೆ ಗೂಡಿನ ತಳಿಗಳ ನಿರ್ಮಾಣ ಮಾಡುವ ಉತ್ಪನ್ನಗಳ ಪರಿಚಯ, ತೋಟಗಾರಿಕೆ ಇಲಾಖೆಯಿಂದ ಔಷಧಿ, ಸುಗಂಧದ್ರವ್ಯ ಸಸಿಗಳ ಪ್ರದರ್ಶನ, ಜೀವಸತ್ವವುಳ್ಳ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ, ಚಿತ್ರದುರ್ಗ ಸಾಯಿ ಎಂಟರ್ ಪ್ರೈಸಸ್‌ನ ಆಧುನಿಕ ಕೃಷಿ ಬೇಸಾಯದ ಉಪಕರಣಗಳ ಪ್ರದರ್ಶನ, ಮೊಳಕಾಲ್ಮೂರು ಕೈಮಗ್ಗದ ಸೀರೆಗಳ ಪ್ರದರ್ಶನ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಿರಿಧಾನ್ಯಗಳಿಂದ ತಯಾರಿಸಿದ ಆಹಾರಗಳ ಪ್ರದರ್ಶನ ನಡೆಯಿತು.

ಕೃಷಿ ಇಲಾಖೆ ಪ್ರಥಮ

ಮೇಳದಲ್ಲಿ ಕೃಷಿ ಇಲಾಖೆ–ಪ್ರಥಮ, ವಿಶ್ವೇಶ್ವರಯ್ಯ ಜಲನಿಗಮದ ಭದ್ರಾ ಮೇಲ್ದಂಡೆ ಯೋಜನೆ–ದ್ವಿತೀಯ, ತೋಟಗಾರಿಕೆ ಇಲಾಖೆ–ತೃತೀಯ, ಮೀನುಗಾರಿಕೆ ಇಲಾಖೆ ನಾಲ್ಕನೇ ಬಹುಮಾನ ಪಡೆದುಕೊಂಡಿತು. ವರ್ಷ ಅಸೋಸಿಯೆಟ್ಸ್‌ಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಮೇಳದಲ್ಲಿ ಕೃಷಿ ಇಲಾಖೆಯ ಮಾದರಿಗಳು ಹೆಚ್ಚು ಗಮನ ಸೆಳೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು