ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | '2023ಕ್ಕೆ ಮೂರು ಪಕ್ಷಕ್ಕೂ ತಕ್ಕ ಪಾಠ'

ರೈತ ನಾಯಕ ಮಾದವರೆಡ್ಡಿ ಎಚ್ಚರಿಕೆ
Last Updated 12 ಮಾರ್ಚ್ 2022, 6:04 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ರೈತ ವಿರೋಧಿ ಕರಾಳ ಕಾಯ್ದೆಯನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯದಿದ್ದರೆ ಅದರ ಪರಿಣಾಮವನ್ನು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ’ ಎಂದು ರೈತ ನಾಯಕ ಮಾದವರೆಡ್ಡಿ ಎಚ್ಚರಿಸಿದರು.

ಬಸವ ಕಲ್ಯಾಣದಿಂದ ಆರಂಭಗೊಂಡಿರುವ ಜನಾಂದೋಲನ ಮಹಾಮೈತ್ರಿ ಜನ ಜಾಗೃತಿ ಜಾಥಾ ಶುಕ್ರವಾರ ಚಿತ್ರದುರ್ಗದ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿತು. ಈ ವೇಳೆ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೆಹಲಿ ಗಡಿಯಲ್ಲಿ ರೈತ ವಿರೋಧಿ ಕಾಯ್ದೆಯನ್ನು ಧಿಕ್ಕರಿಸಿ ಲಕ್ಷಾಂತರ ರೈತರು ಒಂದು ವರ್ಷಗಳ ಚಳವಳಿ ನಡೆಸಿದ್ದರ ಫಲವಾಗಿ ಪ್ರಧಾನಿ ಮೋದಿ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದರು. ಆದರೆ, ರೈತರ ಸಭೆ ಕರೆಯಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತರ ತುಂಡು ಭೂಮಿಗಳನ್ನು ಕಸಿಯುವ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಅಧಿವೇಶನದಲ್ಲಿ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಈ ವಿಚಾರದಲ್ಲಿ ಇಷ್ಟು ದಿನ ಹೇಳಿದ ಸುಳ್ಳುಗಳನ್ನು ಕೇಳಲು ಸಿದ್ಧವಿಲ್ಲ’ ಎಂದರು.

‘ಅಧಿವೇಶನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಈ ಮೂಲಕ ರೈತ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮೂರು ಪಕ್ಷಗಳಿಗೂ ಪಾಠ ಕಲಿಸಲಾಗುತ್ತದೆ’ ಎಂದು ಎಚ್ಚರಿಸಿದರು.

ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಯಾದವ ರೆಡ್ಡಿ ಮಾತನಾಡಿ, ‘ರೈತ ವಿರೋಧಿ ಕರಾಳ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಂತೆ ರಾಜ್ಯ ಸರ್ಕಾರವೂ ತನ್ನ ಮೊಂಡುತನ ಬಿಟ್ಟು ಹಿಂದಕ್ಕೆ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಅಧಿವೇಶನದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷದ ಯಾರೂ ಈ ಬಗ್ಗೆ ಮಾತನಾಡಲಿಲ್ಲ. ಎಲ್ಲರೂ ರೈತ ವಿರೋಧಿಗಳಂತೆ ಕಾಣುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದ ಬಹುತೇಕ ರಾಜ್ಯಗಳೂ ರೈತ ವಿರೋಧಿ ಶಾಸನಗಳನ್ನು ಅನುಸರಿಸುತ್ತಿವೆ. ಅಧಿವೇಶನ ಮುಗಿಯುವ ಮುಂಚೆ ಕಾಯ್ದೆಗಳನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ರೈತರು ಬೀದಿಗಿಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಮುಂದಿನ ನಡೆ ಬಗ್ಗೆ ಸೂಚನೆ ನೀಡಿದರು.

‘ಕೇಂದ್ರದ ಕೃಷಿ ವಿರೋಧಿ ನೀತಿ ಖಂಡಿಸಿ ದೆಹಲಿ ಗಡಿಯಲ್ಲಿ ವರ್ಷಗಟ್ಟಲೆ ಚಳವಳಿ ನಡೆಸಿದ ಲಕ್ಷಾಂತರ ರೈತರಲ್ಲಿ ಏಳು ನೂರು ರೈತರು ಮೃತಪಟ್ಟರು. ಆದರೂ ಪ್ರಧಾನಿ ಮೋದಿ ಪರಿಹಾರ ಘೋಷಿಸಲಿಲ್ಲ. ನಿಮ್ಮ ಪ್ರತಿ ಹೆಜ್ಜೆಯೂ ಹೊಸ ಹೊಸ ಸಂಘರ್ಷಗಳಿಗೆ ಮುನ್ಸೂಚನೆ ನೀಡುತ್ತಿವೆ. ಇದಕ್ಕೆ ಅವಕಾಶ ನೀಡಬೇಡಿ’ ಎಂದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ. ಸುರೇಶ್‍ಬಾಬು ಮಾತನಾಡಿ, ‘ರಾಜ್ಯದ ಮೂರು ಕಡೆಯಿಂದ ಹೊರಟಿರುವ ಜನಾಂದೋಲನ ಮಹಾಮೈತ್ರಿ ಜಾಥಾ ಮಾ.15 ರಂದು ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಂತೆ ರಾಜ್ಯ ಸರ್ಕಾರವೂ ರೈತ ವಿರೋಧಿ ಕರಾಳ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎನ್ನುವುದು ನಮ್ಮ ಉದ್ದೇಶ’ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಶಂಕರಪ್ಪ, ರೈತ ಮುಖಂಡರಾದ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹೊರಕೇರಪ್ಪ, ಧನಂಜಯ, ಸ್ವಾಮಿ, ಜಿ. ಸುರೇಶ್‍ಬಾಬು, ಗೌಸ್‍ಪೀರ್, ಎಂ.ಆರ್. ದಾಸೇಗೌಡ, ಎಚ್‌ಎಸ್‌ಕೆ ಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT