ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೆ ಉಂಡು ಮಲಗಿದ್ದ ನಾಲ್ವರು ಚಿರನಿದ್ರೆಗೆ; ಹಟ್ಟಿಯಲ್ಲಿ ಮಡುಗಟ್ಟಿದ ಶೋಕ

ಯುವಕನ ಸ್ಥಿತಿ ಚಿಂತಾಜನಕವಾಗಿದ್ದು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ
Last Updated 14 ಜುಲೈ 2021, 3:48 IST
ಅಕ್ಷರ ಗಾತ್ರ

ಭರಮಸಾಗರ (ಚಿತ್ರದುರ್ಗ): ಹಿರಿಯೂರು ತಾಲ್ಲೂಕಿನ ಹುಲಿತೊಟ್ಲು ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿದ ಒಂದೇ ಕುಟುಂಬದ ನಾಲ್ವರು 2018ರ ಡಿಸೆಂಬರ್‌ ತಿಂಗಳಲ್ಲಿ ಮೃತಪಟ್ಟಿದ್ದರು. ಅದೇ ರೀತಿಯ ದುರಂತ ಸೋಮವಾರ ತಡರಾತ್ರಿ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿಯ ಇಸಾಮುದ್ರ ಗ್ರಾಮದ ಗೊಲ್ಲರಹಟ್ಟಿಗೆ ಹೊಂದಿಕೊಂಡಿರುವ ಲಂಬಾಣಿಹಟ್ಟಿಯಲ್ಲಿ ಸಂಭವಿಸಿದೆ.

ಮನೆಯ ಯಜಮಾನ ತಿಪ್ಪನಾಯ್ಕ (45), ಪತ್ನಿ ಸುಧಾಬಾಯಿ (40) ಹಾಗೂ ತಾಯಿ ಗುಂಡಿಬಾಯಿ (80),ಪುತ್ರಿ ರಮ್ಯಾ (16) ಮೃತಪಟ್ಟಿದ್ದಾರೆ. ಪುತ್ರ ರಾಹುಲ್ (19) ಅಸ್ವಸ್ಥಗೊಂಡಿದ್ದು ದಾವಣಗೆರೆಯ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಟುಂಬದ ಸದಸ್ಯರೆಲ್ಲರೂ ಸೋಮವಾರ ರಾತ್ರಿ ಸೇವಿಸಿದ ರಾಗಿ ಮುದ್ದೆ ಹಾಗೂ ಬೇಳೆ–ತರಕಾರಿ ಸಾರಿನಲ್ಲಿ ವಿಷ ಬೆರೆತಿರುವ ಶಂಕೆ ವ್ಯಕ್ತವಾಗಿದೆ. ಉಳಿದಿದ್ದ ಮುದ್ದೆ, ಸಾರು ಮಾದರಿ ಹಾಗೂ ಅಡುಗೆ ತಯಾರಿಸಲು ಬಳಸಿದ್ದ ಸಾಮಗ್ರಿಗಳನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದೆ. ಮುದ್ದೆ ತಿಂದವರಿಗೆ ಮಾತ್ರ ಈ ರೀತಿ ಆಗಿರುವುದು ಅನುಮಾನ ಹುಟ್ಟಿಕೊಳ್ಳಲು ಕಾರಣವಾಗಿದೆ.

ಆರು ಸದಸ್ಯರ ಈ ಕುಟುಂಬಕ್ಕೆ ಸುಧಾಬಾಯಿ ರಾಗಿ ಮುದ್ದೆ ತಯಾರಿಸಿದ್ದರು. ಹಳೆ ಮನೆಯ ಜಗುಲಿ ಸಮೀಪವಿರುವ ಕಟ್ಟಿಗೆ ಒಲೆಯಲ್ಲಿ ನಿತ್ಯವೂ ಇವರೇ ಮುದ್ದೆ ತಯಾರಿಸುತ್ತಿದ್ದರು. ರಾತ್ರಿ 9.30ಕ್ಕೆ ಎಲ್ಲರೂ ಊಟ ಮಾಡಿ ಮಲಗುವ ಪರಿಪಾಠ ರೂಢಿಸಿ
ಕೊಂಡಿದ್ದರು. ಆದರೆ, ಸೋಮವಾರ ರಾತ್ರಿ ವಿದ್ಯುತ್ ಸ್ಥಗಿತಗೊಂಡಿತ್ತು. ವಿದ್ಯುತ್ ಬಂದ ನಂತರ ಹೊಸ ಮನೆಗೆ ಮುದ್ದೆ ತೆಗೆದುಕೊಂಡು ಹೋಗಿ ರಾತ್ರಿ 10ಕ್ಕೆ ಊಟ ಮಾಡಿ ಮಲಗಿದ್ದರು.

ಊಟ ಮಾಡಿದ ಒಂದು ಗಂಟೆಯ ಬಳಿಕ ವಾಂತಿ–ಭೇದಿ ಕಾಣಿಸಿಕೊಂಡಿದೆ. ದೆವ್ವದ ಕಾಟ ಎಂಬ ಮೌಢ್ಯದಿಂದ ಇನ್ನೊಂದು ಗಂಟೆ ಸುಧಾರಿಸಿಕೊಂಡಿದ್ದಾರೆ. ಎದೆ ಉರಿ ತಾಳಲಾರದೆ, ನೆಲದ ಮೇಲೆ ಬಿದ್ದು ಉರುಳಾಡಿದ್ದಾರೆ. ರಾತ್ರಿ 11.30ರಿಂದ 12 ಗಂಟೆ ಸುಮಾರಿಗೆ ಮತ್ತೊಬ್ಬಪುತ್ರಿರಕ್ಷಿತಾಹೊರತುಪಡಿಸಿಉಳಿದಐವರೂಅಸ್ವಸ್ಥಗೊಂಡಿದ್ದಾರೆ.ಮುದ್ದೆಸೇವಿಸದೇಇರುವರಕ್ಷಿತಾಆರೋಗ್ಯವಾಗಿಯೇ ಇದ್ದಾಳೆ.

ತಿಪ್ಪನಾಯ್ಕ ಅವರ ಸಹೋದರಮಂಜ ನಾಯ್ಕ್‌ ಅವರಿಗೆ ರಕ್ಷಿತಾ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ನರಳಾಟ ಕಂಡು ನೆರೆಮನೆಯ ನಿವಾಸಿಗಳ ನೆರವಿನೊಂದಿಗೆ ಭರಮಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಆಂಬುಲೆನ್ಸ್ ಮೂಲಕ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮಾರ್ಗ ಮಧ್ಯೆಯೇ ಗುಂಡಿಬಾಯಿ, ಸುಧಾಬಾಯಿ ಮೃತಪಟ್ಟಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ತಿಪ್ಪನಾಯ್ಕ, ರಾಹುಲ್, ರಮ್ಯಾ ಅವರನ್ನು ದಾವಣಗೆರೆಗೆ ಕರೆದೊಯ್ಯಲಾಯಿತು. ಅಲ್ಲಿ ತಿಪ್ಪನಾಯ್ಕ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ವಿಷ ಆಹಾರ ಸೇವನೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮಂಗಳವಾರ ವೈದ್ಯರು ಮರಣೋತ್ತರಪರೀಕ್ಷೆ ನಡೆಸಿದ ಬಳಿಕ, ಗ್ರಾಮದಲ್ಲಿ ಅಂತ್ಯಕ್ರಿಯೆಯೂ ಒಟ್ಟಿಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಮಂಗಳವಾರ ಸಂಜೆ ರಮ್ಯಾ ಸಹ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಡಿವೈಎಸ್‌ಪಿ ಪಾಂಡುರಂಗಪ್ಪ, ತಹಶೀಲ್ದಾರ್‌ ವೆಂಕಟೇಶಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್, ಸಿಪಿಐ ಮಧು, ಎಸ್ಐ ರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಜುನಾಥ್ ನೀಡಿದ ದೂರು ಆಧರಿಸಿ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆಯಲ್ಲಿದ್ದಳು

ರಮ್ಯಾ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಿದ್ಧತೆಯಲ್ಲಿ ತೊಡಗಿದ್ದಳು. ಅದಕ್ಕಾಗಿ ನಿತ್ಯ ಅಭ್ಯಾಸ ನಿರತಳಾಗಿದ್ದಳು. ಬೇಗ ಗುಣಮುಖರಾಗಿ ಅಣ್ಣ–ತಂಗಿ ಇಬ್ಬರೂ ಹಿಂದಿರುಗಲಿ ಎಂದು ಸಂಬಂಧಿಕರು ಪ್ರಾರ್ಥಿಸಿದ್ದರು. ಆದರೆ ರಮ್ಯಾ ಸಹ ಮಂಗಳವಾರ ಸಂಜೆ ಕೊನೆಯುಸಿರೆಳೆದಿದ್ದಾಳೆ. ಲಂಬಾಣಿ ಹಟ್ಟಿಯಲ್ಲಿ ಶೋಕ ಮಡುಗಟ್ಟಿದೆ.

ತಿಪ್ಪಾನಾಯ್ಕ ಅವರು ಹಟ್ಟಿಯ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದರು. ಯಾರೊಂದಿಗೂ ವೈಷಮ್ಯ ಕಟ್ಟಿಕೊಂಡ ವ್ಯಕ್ತಿಯಲ್ಲ. ಕೃಷಿ ಹಾಗೂ ಕೂಲಿಯಿಂದಲೇ ಬದುಕು ಕಟ್ಟಿಕೊಂಡಿದ್ದರು. ಘಟನೆಯಿಂದ ಹಟ್ಟಿಯ ಜನರು ಆಘಾತಕ್ಕೆ ಒಳಗಾಗಿದ್ದಾರೆ. ಸಾವಿನ ಬಗ್ಗೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ.

ಮೃತ ತಿಪ್ಪನಾಯ್ಕ ಅವರದು ಬಡ ರೈತಾಪಿ ಕುಟುಂಬ. ಗ್ರಾಮದಲ್ಲಿ 3 ಎಕರೆ ಜಮೀನು ಹೊಂದಿದ್ದು, ವ್ಯವಸಾಯದ ಜತೆಗೆ ತಲಾ ಎರಡು ಹಸು, ಮೇಕೆ ಸಾಕಣೆ ಮಾಡಿಕೊಂಡು ಇದ್ದರು. ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಪತ್ನಿ ಸುಧಾಬಾಯಿ ಹಾಗೂ ಪುತ್ರಿ ರಕ್ಷಿತಾ ಕೂಲಿ ಕೆಲಸ ಮಾಡುತ್ತಿದ್ದರು. ಈ ಮೂವರ ದುಡಿಮೆಯಿಂದ ಜೀವನ ನಡೆಯುತ್ತಿತ್ತು.

‘ಸೋಮವಾರ ಬೆಳಿಗ್ಗೆ ತಂದೆ ಜಮೀನು ಕಡೆಗೆ ಹೋಗಿ ಮನೆಗೆ ಬಂದಿದ್ದರು. ತಾಯಿಯ ಜತೆಗೆ ಹೋಗಿದ್ದ ನಾನು ಕೂಲಿ ಕೆಲಸ ಮುಗಿಸಿಕೊಂಡು ಬಂದಿದ್ದೆವು. ಮುದ್ದೆ ಊಟ ಮಾಡುವ ಅಭ್ಯಾಸ ಮೊದಲಿನಿಂದಲೂ ಇಲ್ಲ. ಹೀಗಾಗಿ ಅನ್ನ–ಸಾರು ಊಟ ಮಾಡಿ ಮಲಗಿದ್ದೆ. ನನಗೇನು ಆಗಿಲ್ಲ. ಆದರೆ, ಉಳಿದೆಲ್ಲರ ನರಳಾಟ ಕಂಡು ಗಾಬರಿಯಾಯಿತು. ಕೂಡಲೇ ಚಿಕ್ಕಪ್ಪನಿಗೆ ವಿಷಯ ತಿಳಿಸಿ ಮನೆಗೆ ಕರೆಸಿಕೊಂಡೆ’ ಎಂದು ‘ಪ್ರಜಾವಾಣಿ’ಗೆ ರಕ್ಷಿತಾ ತಿಳಿಸಿದ್ದಾಳೆ.

ನಾಲ್ವರ ಅಂತ್ಯಕ್ರಿಯೆ ಇಂದು

ಘಟನೆಯಲ್ಲಿ ಮೃತಪಟ್ಟ ನಾಲ್ವರ ಮೃತದೇಹಗಳನ್ನು ಮಂಗಳವಾರ ಸಂಜೆ ಹಟ್ಟಿಗೆ ತರಲಾಗಿದೆ. ಬುಧವಾರ ಅಂತ್ಯಕ್ರಿಯೆ ನಡೆಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ. ಸುಧಾಬಾಯಿ ಹಾಗೂ ಗುಂಡಿಬಾಯಿ ಅವರ ಮರಣೋತ್ತರ ಪರೀಕ್ಷೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.ತಿಪ್ಪನಾಯ್ಕ ಹಾಗೂ ರಮ್ಯಾ ಅವರ ಮರಣೋತ್ತರ ಪರೀಕ್ಷೆ ದಾವಣಗೆರೆಯ ಎಸ್‌ಎಸ್‌ ಆಸ್ಪತ್ರೆಯಲ್ಲಿ ನಡೆದಿದೆ. ಮಂಗಳವಾರ ಸಂಜೆ ನಾಲ್ವರ ಮೃತದೇಹಗಳನ್ನು ಹಟ್ಟಿಗೆ ತರಲಾಗಿದೆ. ತಿಪ್ಪಾನಾಯ್ಕ ಅವರ ಜಮೀನಿನಲ್ಲೇ ನಾಲ್ವರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಲು ಸಂಬಂಧಿಕರು ಸಿದ್ಧತೆ ಮಾಡಿಕೊಂಡಿದ್ದಾರೆ. ತಹಶೀಲ್ದಾರ್‌ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

ಮರುಕಳಿಸಿದ ಹುಲಿತೊಟ್ಲು ಘಟನೆ

ವಿಷಪೂರಿತ ಆಹಾರ ಸೇವಿಸಿ ನಾಲ್ವರು ಮೃತಪಟ್ಟಿದ್ದ ಘಟನೆಹಿರಿಯೂರು ತಾಲ್ಲೂಕಿನ ಹುಲಿತೊಟ್ಲು ಗ್ರಾಮದಲ್ಲಿ 2018ರ ಡಿಸೆಂಬರ್‌ 20ರಂದು ನಡೆದಿತ್ತು. ಹತ್ತಿ ಸಂಗ್ರಹಿಸಿಟ್ಟ ಚೀಲದ ಮೇಲೆ ಮುದ್ದೆಯ ಹಿಟ್ಟು ಒಣಗಿಸಿದ್ದರಿಂದ ಆಹಾರ ವಿಷಪೂರಿತವಾಗಿತ್ತು. ಕೀಟನಾಶಕದ ಅಂಶ ಜೋಳದ ಹಿಟ್ಟಿನಲ್ಲಿ ಸೇರಿಕೊಂಡಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು.

ಕುಟುಂಬದ ಒಂಬತ್ತು ಸದಸ್ಯರಲ್ಲಿ ಏಳು ಜನರು ಜೋಳದ ಮುದ್ದೆ ಹಾಗೂ ಅವರೆಕಾಳು ಸಾಂಬಾರು ಸವಿದು ಅಸ್ವಸ್ಥಗೊಂಡಿದ್ದರು.ಊಟ ಮಾಡಿದ ಅರ್ಧ ಗಂಟೆಯ ಬಳಿಕ ವಾಂತಿ– ಭೇದಿ ಕಾಣಿಸಿಕೊಂಡು ಮೃತಪಟ್ಟಿದ್ದರು. ಪ್ರಕರಣದ ತನಿಖೆ ಪೊಲೀಸರಿಗೆ ಸವಾಲಾಗಿತ್ತು. ಘಟನೆ ನಡೆದು ಎರಡೂವರೆ ತಿಂಗಳ ಬಳಿಕ ಸಾವಿನ ಕಾರಣ ತಿಳಿದಿತ್ತು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕುಟುಂಬಕ್ಕೆ ₹4,76,693 ಪರಿಹಾರ ಮಂಜೂರಾಗಿತ್ತು.

***

ಮೇಲ್ನೋಟಕ್ಕೆ ವಿಷ ಅಥವಾ ಕಲುಷಿತ ಆಹಾರವೆಂದು ತಿಳಿದು ಬಂದಿದೆ. ಪ್ರಯೋಗಾಲಯದ ವರದಿ ಹಾಗೂ ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ನಿಜಾಂಶ ತಿಳಿಯಲಿದೆ.

- ಜಿ. ರಾಧಿಕಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

***

ಆಹಾರದ ಮಾದರಿಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು, ಶೀಘ್ರ ವರದಿ ಕೈಸೇರಲಿದೆ. ಮರಣೋತ್ತರ ಪರೀಕ್ಷೆಯ ವರದಿ ಬುಧವಾರ ದೊರೆಯಲಿದೆ.

- ವೆಂಕಟೇಶಯ್ಯ, ತಹಶೀಲ್ದಾರ್‌, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT