ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಉಚಿತ ತೆಂಗಿನ ಸಸಿ ವಿತರಣೆ ಸ್ಥಗಿತ

ತೋಟಗಾರಿಕೆ ಇಲಾಖೆಯಿಂದ ಪ್ರತಿ ವರ್ಷ ರೈತರಿಗೆ ಕೊಡುತ್ತಿದ್ದ ನೆರವು
Last Updated 26 ಜೂನ್ 2021, 4:25 IST
ಅಕ್ಷರ ಗಾತ್ರ

ಹೊಸದುರ್ಗ: ಇಲ್ಲಿಯ ತೋಟಗಾರಿಕೆ ಇಲಾಖೆಯಿಂದ ತಾಲ್ಲೂಕಿನ ರೈತರಿಗೆ ಉಚಿತವಾಗಿ ಕೊಡುತ್ತಿದ್ದ ತೆಂಗಿನ ಸಸಿ ನೆರವು ಎರಡು ವರ್ಷಗಳಿಂದ ಸ್ಥಗಿತವಾಗಿದೆ.

ಪ್ರತಿ ವರ್ಷ ತಾಲ್ಲೂಕು ಪಂಚಾಯಿತಿ ಸದಸ್ಯರು ತಿಳಿಸಿದ 40 ರೈತರು, ಸಣ್ಣ ಹಾಗೂ ಅತಿ ಸಣ್ಣ ಸೇರಿ ಒಟ್ಟು ತಾಲ್ಲೂಕಿನ 120 ರೈತರಿಗೆ ತಲಾ 20ರಂತೆ ಒಟ್ಟು 2,400 ತೆಂಗಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿತ್ತು. ಈ ನೆರವು ತೆಂಗು ಬೆಳೆಯುವ ತಾಲ್ಲೂಕಿನ ರೈತರಿಗೆ ಸಾಕಷ್ಟು ಸಹಕಾರಿಯಾಗುತ್ತಿತ್ತು. ಇದರಿಂದ ತೆಂಗು ಬೆಳೆಯುವ ಪ್ರದೇಶ ವಿಸ್ತರಣೆಯಾಯಿತು.

ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಜ್ಞರ ಸಲಹೆ ಪಡೆದು ಹಿಂಗಾರು ಹಂಗಾಮಿನಲ್ಲಿ ಗುಣಮಟ್ಟದ ಸಾವಿರಾರು ತೆಂಗಿನಕಾಯಿಯನ್ನು ತೆಂಗು ಬೆಳೆಗಾರರಿಂದ ಖರೀದಿಸುತ್ತಿದ್ದರು. ಅವುಗಳನ್ನು ತಮ್ಮ ಇಲಾಖೆ ಹಿಂಭಾಗದಲ್ಲಿರುವ ಜಮೀನಿನಲ್ಲಿ ನಾಟಿ ಮಾಡಿಸುತ್ತಿದ್ದರು. ಮೊಳಕೆಯೊಡೆದ ಆ ತೆಂಗಿನ ಸಸಿಗಳನ್ನು ಮುಂಗಾರು ಹಂಗಾಮಿನ ಮಳೆ ಬಂದು ಜಮೀನು ಹದವಾದ ಸಮಯದಲ್ಲಿ ರೈತರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದರು.

ಆದರೆ, ರೈತರಿಗೆ ಉಚಿತವಾಗಿ ತೆಂಗಿನ ಸಸಿ ವಿತರಿಸಲು ಸರ್ಕಾರದಿಂದ ಬರುತ್ತಿದ್ದ ಅನುದಾನ ಕೋವಿಡ್‌ ಕಾರಣದಿಂದ ಸ್ಥಗಿತವಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಇಲಾಖೆಯವರು ಉಚಿತ ತೆಂಗಿನ ಸಸಿ ವಿತರಿಸುವುದನ್ನು ನಿಲ್ಲಿಸಿದ್ದಾರೆ. ₹ 75ರಂತೆ ಸಸಿ ಮಾರಾಟ ಮಾಡುತ್ತಿದ್ದಾರೆ. ತೆಂಗಿನಕಾಯಿ ತೋಟ ಇರುವ ಬೆಳೆಗಾರರು ಸಸಿ ಉತ್ಪಾದನೆ ಮಾಡಿ ₹ 70ರಿಂದ ₹ 100 ರವರೆಗೆ ಪ್ರತಿ ಸಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ತೆಂಗು ಬೆಳೆಯಲು ಇಚ್ಛಿಸುವ ಬಡ ರೈತರಿಗೆ ತೊಂದರೆಯಾಗುತ್ತಿದೆ.

ತೋಟಗಾರಿಕೆ ಇಲಾಖೆ ಆವರಣದಲ್ಲಿ ತೆಂಗಿನಕಾಯಿ ಸಸಿ ನಿರ್ವಹಣೆ ಸರಿಯಾಗಿ ಮಾಡದಿರುವುದರಿಂದ ಕೆಲವು ಸಸಿಗಳು ಒಣಗಿ ಹೋಗುತ್ತಿವೆ. ಇಲಾಖೆ ಪ್ರವೇಶದ ಕಾಂಪೌಂಡ್‌ ಗೇಟ್‌ ಬಂದ್‌ ಮಾಡದಿರುವುದರಿಂದ ರಾತ್ರಿ ಹೊತ್ತು ಕೆಲವರು ಒಳಗೆ ನುಗ್ಗಿ ತೆಂಗಿನ ಸಸಿ ಕಿತ್ತುಕೊಂಡು ಹೋಗುತ್ತಿದ್ದಾರೆ. ಗುಣಮಟ್ಟದ ಸಸಿಗಳನ್ನು ತೆಗೆದುಕೊಂಡು ಹೋಗಿ ಕಳಪೆ ಸಸಿಗಳನ್ನು ಬಿಸಾಡಿ ಹೋಗಿದ್ದಾರೆ. ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.

ಪರಿಸ್ಥಿತಿ ಹೀಗಿದ್ದರೂ ತೆಂಗಿನ ಸಸಿ ಕೇಳಿಕೊಂಡು ಇಲಾಖೆಗೆ ಬರುವ ಬಡರೈತರಿಗೆ ಉಚಿತವಾಗಿ ಕೊಡುತ್ತಿಲ್ಲ. ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ಹಣ ಕೊಟ್ಟು ತೆಂಗಿನಕಾಯಿ ಸಸಿ ಖರೀದಿಸುವುದು ಕಷ್ಟವಾಗುತ್ತಿದೆ. ಹೀಗಾಗಿ, ಹಿಂದಿನಂತೆ ಉಚಿತವಾಗಿ ವಿತರಿಸಲು ಸರ್ಕಾರ ಅನುದಾನ ಕೊಡಬೇಕು ಎಂದು ತಾಲ್ಲೂಕಿನ ರೈತರು
ಒತ್ತಾಯಿಸಿದ್ದಾರೆ.

2 ವರ್ಷ ಅನುದಾನವಿಲ್ಲ
ತೆಂಗಿನಕಾಯಿ ಸಸಿ ಉಚಿತವಾಗಿ ವಿತರಿಸಲು ಸರ್ಕಾರದಿಂದ ಬರುತ್ತಿದ್ದ ಅನುದಾನ 2020–21, 2021–22 ಈ ಎರಡು ವರ್ಷ ಸ್ಥಗಿತವಾಗಿದೆ. ಹಾಗಾಗಿ, ಉಚಿತವಾಗಿ ಕೊಡುತ್ತಿಲ್ಲ. ಸರ್ಕಾರದ ದರದಲ್ಲಿ ₹ 75ಕ್ಕೆ ಸಸಿ ಮಾರಾಟ ಮಾಡಲಾಗುತ್ತಿದೆ. ರಾತ್ರಿ ಹೊತ್ತು ಸಸಿ ಯಾರೂತೆಗೆದುಕೊಂಡು ಹೋಗಿಲ್ಲ. ರಾಜಕಾಲುವೆ ಪಕ್ಕದಲ್ಲಿಯೇ ಇರುವುದರಿಂದ ಇಲಿ, ಹೆಗ್ಗಣ, ಉಡಗಳ ಕಾಟ ಹೆಚ್ಚಾಗಿದೆ. ಔಷಧ ಬಳಸಿದರೂ ನಿಯಂತ್ರಣ ಆಗುತ್ತಿಲ್ಲ. ಅವುಗಳು ತೆಂಗಿನಕಾಯಿ ಸಸಿ ಗಿಣ್ಣು ತಿಂದು ಹಾಳು ಮಾಡಿರುವ ಸಸಿಗಳನ್ನು ಮಾತ್ರ ಬಿಡಲಾಗಿದೆ. ಕಳೆದ ತಿಂಗಳು ಸಸಿ ಮಾರಾಟ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**
ಸರ್ಕಾರ ಕೋವಿಡ್‌ ಕಾರಣ ಹೇಳಿಕೊಂಡು ಈ ಹಿಂದೆ ಕೃಷಿ ಸಂಬಂಧಿತ ಇಲಾಖೆಗೆ ಬರುತ್ತಿದ್ದ ಯಾವುದೇ ಅನುದಾನ ನಿಲ್ಲಿಸಬಾರದು. ಇದರಿಂದ ರೈತರ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ.
–ಹನುಮಂತಪ್ಪ, ರೈತ, ಹೊಸದುರ್ಗ

...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT