ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಶಾಲಾ–ಕಾಲೇಜು ಅಭಿವೃದ್ಧಿಗೆ ಅನುದಾನ ಹಂಚಿಕೆ

ಸಮುದಾಯ ಭವನ, ಪ್ರಾರ್ಥನಾ ಮಂದಿರಗಳಿಗೆ ಆದ್ಯತೆ
ಅಕ್ಷರ ಗಾತ್ರ

ಹೊಸದುರ್ಗ: ಶಾಸಕ ಗೂಳಿಹಟ್ಟಿ ಡಿ. ಶೇಖರ್‍ ಅವರು ಸರ್ಕಾರದಿಂದ ಬಿಡುಗಡೆಯಾದ ಶಾಸಕರ ಪ್ರದೇಶಾಭಿವೃದ್ಧಿ ಅನದಾನದಲ್ಲಿ ವಿವಿಧ ಸಮಾಜಗಳ ಸಮುದಾಯ ಭವನ ಹಾಗೂ ಪ್ರಾರ್ಥನಾ ಮಂದಿರಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಶಾಸಕರ ಅನುದಾನದಲ್ಲಿ ಹಂಚಿಕೆಯಾದ ಬಹುತೇಕ ಕಾಮಗಾರಿಗಳು ಮುಗಿದಿದ್ದು, ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ.

ಮುಸ್ಲಿಂ ಸಮುದಾಯದವರ ದರ್ಗಾಗಳ ಅಭಿವೃದ್ಧಿಗೆ ತಮ್ಮ ನಿಧಿಯ ಅನುದಾನದಲ್ಲಿ ಹಂಚಿಕೆ ಮಾಡಿದ್ದಾರೆ. ಅವುಗಳಲ್ಲಿ ಹೊಸದುರ್ಗ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ದರ್ಗಾಕ್ಕೆ ₹ 25 ಲಕ್ಷ ನೀಡಿದ್ದಾರೆ. ದೊಡ್ಡಘಟ್ಟ ಗ್ರಾಮದ ಪೀರ್ಲಾ ದೇವಸ್ಥಾನದ ಸಮುದಾಯ ಭವನಕ್ಕೆ ₹ 10 ಲಕ್ಷ ಅನುದಾನ ನೀಡಿದ್ದಾರೆ.

2018–19ರಲ್ಲಿ ಪಟ್ಟಣದ ಶ್ರೀ ಗಂಗಾಂಬಿಕ ಪ್ರೌಢಶಾಲೆ ಹಾಗೂ ಮಲ್ಲಪ್ಪನಹಳ್ಳಿಯ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಗಳ ಕಾಂಪೌಂಡ್ ನಿರ್ಮಾಣ, ಆನಿವಾಳದ ರುದ್ರೇದೇವರ ದೇವಸ್ಥಾನದ ಬಳಿ ಪ್ರಾರ್ಥನಾ ಮಂದಿರ, ಹಾಲು ರಾಮೇಶ್ವರ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಜಾನಕಲ್ ಗ್ರಾಮದ ಕೊಲ್ಲಾಪುರದಮ್ಮ ದೇವಸ್ಥಾನದ ಮುಂದುವರಿದ ಕಾಮಗಾರಿಗೆ ತಲಾ ₹ 10 ಲಕ್ಷ ಮತ್ತು ತಂಡಗ ಗ್ರಾಮದ ಸಮುದಾಯ ಭವನಕ್ಕೆ ₹ 20 ಲಕ್ಷ ಹಂಚಿಕೆ ಮಾಡಿದ್ದಾರೆ.

2019–20ನೇ ಸಾಲಿನಲ್ಲಿ ಮಾಡದಕೆರೆ ಗ್ರಾಮದ ಜುಂಜಪ್ಪ ಸಮುದಾಯ ಭವನ, ಬನಸೀಹಳ್ಳಿ, ದೊಡ್ಡಘಟ್ಟ, ಹೆಬ್ಬಳ್ಳಿ ಜಾನಕಲ್‍, ಮಧುರೆ, ತುಂಬಿನಕೆರೆ, ಮಲ್ಲಾಪುರ ಗ್ರಾಮದ ಶಬರಿವನದಲ್ಲಿ ಸಮುದಾಯ ಭವನ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ.

2020–21ನೇ ಸಾಲಿನಲ್ಲಿ ಮಾಡದಕೆರೆ ಹೋಬಳಿ ಕೆಂಕೆರೆ ಗ್ರಾಮದ ವೀರಭದ್ರೇಶ್ವರ ಸಮುದಾಯ ಭವನ, ದೊಡ್ಡಘಟ್ಟ ಗ್ರಾಮದ ಪರಿಶಿಷ್ಟಜಾತಿ ಕಾಲೊನಿಯಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಪ್ರಾರ್ಥನಾ ಮಂದಿರ, ಶ್ರೀರಂಗಾಪುರ, ಸೊಡರನಾಳ್ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣ ಸಾಣೇಹಳ್ಳಿ ಗ್ರಾಮದಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣ, ವಾಣಿ ವಿಲಾಸ ಹಿನ್ನೀರಿನ ನಡುಗಡ್ಡೆ ಪ್ರದೇಶದಲ್ಲಿ ಡಾರ್‍ಮೆಟ್ರಿ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ.

2021–22ನೇ ಸಾಲಿನ ಬಂಡವಾಳ ವೆಚ್ಚದ ಕಾಮಗಾರಿಗಳಲ್ಲಿ ಹೊಸದುರ್ಗ ಪಟ್ಟಣದ ಪ್ರಥಮ ದರ್ಜೆ ಕಾಲೇಜು, ದೇವರಾಜ ಅರಸು ಭವನ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಮುಂಭಾಗದಲ್ಲಿ ಕಾಂಪೌಂಡ್‍ ನಿರ್ಮಾಣ ಮತ್ತು ಬೆನಕನಹಳ್ಳಿ ತಾಂಡಾದಲ್ಲಿ ಸೇವಾಲಾಲ್‍ ಪ್ರಾರ್ಥನಾ ಮಂದಿರದ ಗರ್ಭಗುಡಿ, ಮಾದಿಹಳ್ಳಿ ಗ್ರಾಮದಲ್ಲಿ ಈಶ್ವರ ಮಂದಿರ, ಲಕ್ಕಿಹಳ್ಳಿ ಗ್ರಾಮದ ಜುಂಜಪ್ಪ ದೇವರ ಮಂದಿರಗಳಿಗೆ ₹ 39.20 ಲಕ್ಷ ನೀಡಿದ್ದಾರೆ. ವಿಶೇಷ ಘಟಕ ಯೋಜನೆ ಅಡಿ ಸಾಣೇಹಳ್ಳಿ ಗ್ರಾಮದ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನ, ಗಿರಿಜನ ಉಪಯೋಜನೆಯಲ್ಲಿ ಹೊನ್ನೆಕೆರೆ ಗೊಲ್ಲರಹಟ್ಟಿ ಗ್ರಾಮದ ಶ್ರೀ ಲಕ್ಷ್ಮೀರಂಗನಾಥ ದೇವಸ್ಥಾನ ನಿರ್ಮಾಣಕ್ಕೆ ₹ 30 ಲಕ್ಷ, ಕಸಬಾ ಹೋಬಳಿಯ ಅರಳೀಹಳ್ಳಿ, ಸಿದ್ದಪ್ಪನಹಟ್ಟಿ, ಕನ್ನಾಗುಂದಿ ಗ್ರಾಮಗಳಲ್ಲಿ ಪ್ರಾರ್ಥನಾ ಮಂದಿರಗಳಿಗೆ ಅನುದಾನ ನೀಡಲಾಗಿದೆ. ಹಾಗಲಕೆರೆ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿ ಇದ್ದು, ಕೊಠಡಿಗಳ ನಿರ್ಮಾಣಕ್ಕೆ ₹ 50 ಲಕ್ಷ ಹಂಚಿಕೆ ಮಾಡಲಾಗಿದೆ.

ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡಿದ ಸಮಾಧಾನವಿದೆ. ಧರ್ಮ, ಜಾತಿ ಭೇದವಿಲ್ಲದೆ ಸಮುದಾಯ ಭವನಗಳು, ಪ್ರಾರ್ಥನಾ ಮಂದಿರಗಳ ನಿರ್ಮಾಣ ಮಾಡಲಾಗಿದೆ. ಇನ್ನೂ ಕೆಲವು ಸಮಾಜದ ದೇವಸ್ಥಾನಗಳ ಅಭಿವೃದ್ಧಿ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಬೇಡಿಕೆ ಇದೆ. ಇನ್ನುಳಿದ ಅವಧಿಯಲ್ಲಿ ಆದ್ಯತೆ ಮೇಲೆ ಅನುದಾನ ನೀಡಲಾಗುವುದು ಎನ್ನುತ್ತಾರೆ ಶಾಸಕ ಗೂಳಿಹಟ್ಟಿ ಶೇಖರ್‍.

*

ಕೆಲವು ಕಾಮಾಗಾರಿ ಮುಗಿದಿದ್ದು, ಬಿಲ್ ಬಾಕಿ ಇರುವುದರಿಂದ ಖರ್ಚಾಗಿರುವುದನ್ನು ತೋರಿಸಲಾಗುತ್ತಿಲ್ಲ. ಲಭ್ಯವಿದ್ದಷ್ಟನ್ನು ಸಂಪೂರ್ಣ ಹಂಚಿಕೆ ಮಾಡಲಾಗಿದೆ.
-ಗೂಳಿಹಟ್ಟಿ ಡಿ. ಶೇಖರ್, ಶಾಸಕ, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT