ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಅಪಘಾತದಿಂದ ಗಾಂಜಾ ಜಾಲ ಬೆಳಕಿಗೆ

ಆಂಧ್ರಪ್ರದೇಶದಿಂದ ಕೇರಳಕ್ಕೆ ಸಾಗಣೆ ಆಗುತ್ತಿದ್ದ 41 ಕೆಜಿ ಗಾಂಜಾ ವಶ
Last Updated 16 ಜುಲೈ 2021, 11:51 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ರೈಲು ನಿಲ್ದಾಣದ ಸಮೀಪ ಸರಕು ಸಾಗಣೆ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಅಂತರರಾಜ್ಯ ಗಾಂಜಾ ಜಾಲವೊಂದು ಬೆಳಕಿಗೆ ಬಂದಿದೆ. ಕೇರಳದ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು, 41 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.

ಕೇರಳದ ಕಲ್ಲಿಕೋಟೆ ಜಿಲ್ಲೆಯ ಹರೀಶ್‌, ಎಂ.ಸುಭೀಷ್‌ (30), ಅನೂಪ್‌ (29) ಹಾಗೂ ಎ.ಪಿ.ಸಂಜಯ್‌ (26) ಬಂಧಿತರು. ಆರೋಪಿಗಳಿಂದ ₹ 10.5 ಲಕ್ಷ ಮೌಲ್ಯದ ಗಾಂಜಾ ಸೊಪ್ಪು, ₹ 4.5 ಲಕ್ಷ ಮೌಲ್ಯದ ಎರಡು ವಾಹನ ವಶಕ್ಕೆ ಪಡೆಯಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಚಾಲಕ ನೌಷಾದ್‌ ಎಂಬಾತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

‘ಹೊಳಲ್ಕೆರೆಯಿಂದ ಭದ್ರಾವತಿ ಕಡೆಗೆ ಹೋಗುತ್ತಿದ್ದ ಕೇರಳ ನೋಂದಣಿ ಸಂಖ್ಯೆಯ ಮಿನಿ ಲಾರಿ ಹಾಗೂ ಮತ್ತೊಂದು ಲಾರಿಯ ನಡುವೆ ಜುಲೈ 12ರಂದು ಅಪಘಾತ ಸಂಭವಿಸಿದೆ. ಮಿನಿ ಲಾರಿಯ ಚಾಲಕ ನೌಷಾದ್‌ ಹಾಗೂ ಕ್ಲೀನರ್‌ ಹರೀಶ್‌ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ತೆರಳಿದ ಪೊಲೀಸರು ಲಾರಿಯನ್ನು ಪರಿಶೀಲಿಸಿದಾಗ ಬ್ಯಾಗ್‌ವೊಂದು ಪತ್ತೆಯಾಗಿದೆ. ಪರಿಶೀಲಿಸಿದಾಗ 13 ಕೆ.ಜಿ. ಗಾಂಜಾ ಇರುವುದು ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಣ್ಣ ಗಾಯಗಳಿಂದ ಚೇತರಿಸಿಕೊಂಡ ಹರೀಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜಾಲದ ಬಗ್ಗೆ ಗೊತ್ತಾಯಿತು. ಖಚಿತ ಮಾಹಿತಿಯ ಮೇರೆಗೆ ಭದ್ರಾವತಿಗೆ ತೆರಳಿ ಸುಭೀಷ್‌, ಅನೂಪ್‌ ಹಾಗೂ ಸಂಜಯ್‌ ಬಂಧಿಸಲಾಯಿತು. ಇವರು ವಾಸವಿದ್ದ ಮನೆ ಹಾಗೂ ವಾಹನದಲ್ಲಿ 28 ಕೆ.ಜಿ. ಗಾಂಜಾ ಪತ್ತೆಯಾಗಿದೆ. ಹಲವು ದಿನಗಳಿಂದ ಈ ಜಾಲ ಸಕ್ರಿಯವಾಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ’ ಎಂದರು.

ಆಂಧ್ರಪ್ರದೇಶದಲ್ಲಿ ಖರೀದಿ

‘ಕೇರಳದಿಂದ ಬೆಂಗಳೂರಿಗೆ ಬಂದ ಆರೋಪಿಗಳು ಆಂಧ್ರಪ್ರದೇಶದ ಕಾಕಿನಾಡು ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿ ಬೆಳೆದಿದ್ದ ಗಾಂಜಾವನ್ನು ಖರೀದಿಸಿ ಬೆಂಗಳೂರಿಗೆ ಮರಳಿದ್ದಾರೆ. ಅಲ್ಲಿಂದ ಚಿತ್ರದುರ್ಗ, ಹೊಳಲ್ಕೆರೆ ಮಾರ್ಗವಾಗಿ ಭದ್ರಾವತಿಗೆ ಸಾಗುತ್ತಿರುವಾಗ ಅಪಘಾತ ಸಂಭವಿಸಿದೆ. ಆಕಸ್ಮಿಕವಾಗಿ ನಡೆದ ಅಪಘಾತ ದೊಡ್ಡ ಜಾಲವೊಂದು ಹೊರಬೀಳಲು ಕಾರಣವಾಗಿದೆ’ ಎಂದು ಹೇಳಿದರು.

‘ಗಾಂಜಾವನ್ನು ಆಂಧ್ರಪ್ರದೇಶದ ಕಾಕಿನಾಡು ಪ್ರದೇಶದಿಂದ ಭದ್ರಾವತಿಗೆ ತಂದು ದಾಸ್ತಾನು ಮಾಡಲಾಗುತ್ತಿತ್ತು. ಒಣಗಿದ ಗಾಂಜಾ ಸೊಪ್ಪನ್ನು ವಿಂಗಡಿಸಿ ಚಿಕ್ಕ ಪ್ಯಾಕೇಟ್‌ಗೆ ತುಂಬಲಾಗುತ್ತಿತ್ತು. ಅಲ್ಲಿಂದ ಕೇರಳಕ್ಕೆ ರವಾನಿಸಿ ಮಾರಾಟ ಮಾಡಲಾಗುತ್ತಿತ್ತು. ಆರೋಪಿಗಳು ಗಾಂಜಾ ಖರೀದಿಸುತ್ತಿದ್ದ ಸ್ಥಳದ ಬಗ್ಗೆ ಆಂಧ್ರಪ್ರದೇಶದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ತರಕಾರಿಯೊಂದಿಗೆ ಗಾಂಜಾ ಸಾಗಣೆ

ಅಂತರರಾಜ್ಯ ಗಾಂಜಾ ಸಾಗಣೆ ಹಲವು ದಿನಗಳಿಂದ ನಡೆಯುತ್ತಿದ್ದು, ತರಕಾರಿ ಹಾಗೂ ಸೊಪ್ಪಿನ ನಡುವೆ ಗಾಂಜಾ ಪ್ಯಾಕೇಟ್‌ ಇಟ್ಟು ಸಾಗಿಸುತ್ತಿದ್ದ ಸಂಗತಿ ವಿಚಾರಣೆಯಿಂದ ಹೊರಬಿದ್ದಿದೆ.

ಒಣಗಿಸಿದ ಗಾಂಜಾ ಸೊಪ್ಪನ್ನು ಚಿಕ್ಕ ಉಂಡೆಗಳಾಗಿ ತಯಾರಿಸಲಾಗಿದೆ. ಅವನ್ನು ಕೆ.ಜಿ. ಗಾತ್ರದ ಚೀಲಗಳಿಗೆ ತುಂಬಿ ತರಕಾರಿ ಹಾಗೂ ಸೊಪ್ಪಿನ ಟ್ರೇಗಳ ನಡುವೆ ಇಡಲಾಗುತ್ತದೆ. ಮೇಲ್ನೋಟಕ್ಕೆ ತರಕಾರಿ ಸಾಗಣೆ ಮಾಡುವ ವಾಹನದಂತೆ ಕಾಣುತ್ತಿದ್ದ ಮಿನಿ ಲಾರಿಯಲ್ಲಿ ಗಾಂಜಾ ಇರುತ್ತಿತ್ತು ಎಂದು ಪೊಲೀಸರು ವಿವರಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಡಿವೈಎಸ್‌ಪಿ ಪಾಂಡುರಂಗ, ಹೊಳಲ್ಕೆರೆ ಸಿಪಿಐ ಕೆ.ಎನ್‌.ರವೀಶ್‌ ಇದ್ದರು.

* ಆಂಧ್ರಪ್ರದೇಶದಲ್ಲಿ ಬೆಳೆದ ಗಾಂಜಾವನ್ನು ಕರ್ನಾಟಕದ ಮೂಲಕ ಕೇರಳಕ್ಕೆ ಸಾಗಣೆ ಮಾಡಲಾಗುತ್ತಿತ್ತು. ಜಾಲದ ಸಕ್ರಿಯೆ ಸದಸ್ಯನಾದ ಮಿನಿ ಲಾರಿ ಚಾಲಕ ಚೇತರಿಸಿಕೊಂಡ ಬಳಿಕ ಬಂಧಿಸಲಾಗುವುದು.

- ಜಿ.ರಾಧಿಕಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT