ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ವಿಜೃಂಭಣೆಯ ಗೌರಿದೇವಿ ಜಾತ್ರಾ ಆಚರಣೆ

Published 29 ನವೆಂಬರ್ 2023, 5:35 IST
Last Updated 29 ನವೆಂಬರ್ 2023, 5:35 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದ ಆರಾಧ್ಯ ದೇವತೆ ಗೌರಿದೇವಿ ಜಾತ್ರಾ ಆಚರಣೆ ಮಂಗಳವಾರ ಆರಂಭವಾಗಿದ್ದು, ಡಿ.3ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಚಿತ್ರದುರ್ಗದ ಪಾಳೇಗಾರ ವಂಶದ ದೊರೆಗಳ ಆರಾಧ್ಯ ದೇವತೆ ಗೌರಿದೇವಿ ಪ್ರಥಮ ಆಚರಣೆಯನ್ನು ನನ್ನಿವಾಳ ಗ್ರಾಮದಲ್ಲಿ ಕಿರುಗೌರಿ ಹುಣ್ಣಿಮೆ ದಿನದಂದ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಈ ವೇಳೆ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮ್ಯಾಸಬೇಡ ಸಮುದಾಯದ ಎಲ್ಲಾ ಹಟ್ಟಿಗಳಲ್ಲಿ ಗೌರಿದೇವಿ ವಿಶಿಷ್ಟ ಆಚರಣೆ ಜರುಗುತ್ತದೆ.

ಕಿರುಗೌರಿ ಹುಣ್ಣಿಮೆ ನಂತರ ತಾಲ್ಲೂಕಿನ ದೊಡ್ಡಉಳ್ಳಾರ್ತಿ ಗೌರಿದೇವಿ ಜಾತ್ರಾ ಆಚರಣೆಗೆ ಚಾಲನೆ ದೊರೆಯುತ್ತದೆ.
ನ.28ರಂದು ಗೌರಿದೇವಿ ಗುಡಿಗೆ ಕಲಶ ಸ್ಥಾಪನೆ, ವಿಶೇಷ ಪೂಜೆ ನಡೆಯಿತು. ನ.29ರಂದು ರಾತ್ರಿ 12 ಗಂಟೆಗೆ ಗೌರಿದೇವಿ ಆಗಮನ. ದೇವಿ ಸ್ವಸ್ಥಾನಕ್ಕೆ ತೆರಳಿದ ನಂತರ ಕೊಂತೆಮ್ಮದೇವಿ ದೇವಸ್ಥಾನಕ್ಕೆ ಉತ್ಸವಮೂರ್ತಿ ಕೊಂಡೊಯ್ಯುವುದು. ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುತ್ತದೆ. ಎತ್ತಿನ ಹಬ್ಬದ ಬಳಿಕ ಜಾತ್ರೆಗೆ ತೆರೆ ಬೀಳುತ್ತದೆ.

ಗೌರಿದೇವಿ ಆಚರಣೆ ಸಂದರ್ಭದಲ್ಲಿ ಮಹಿಳೆಯರು ಬಣ್ಣ ಬಣ್ಣದ ಸೀರೆ ಉಡುತ್ತಾರೆ. ಯುವತಿಯರು ವಿವಿಧ ಗ್ರಾಮದ ರಸ್ತೆಯಲ್ಲಿ ಓಡಾಡುವವರನ್ನು ತಡೆದು ‘ನಾವು ಗೌರಿಮಕ್ಕಳು’ ಎಂದು ಹೇಳಿ ಕೋಲಾಟದ ಪ್ರದರ್ಶಿಸಿ ಹಣ ಕೇಳುತ್ತಾರೆ.

ಗೌರಿ ಜಾತ್ರೆ ಹೆಣ್ಣು ಮಕ್ಕಳ ಹಬ್ಬಚಾಗಿದ್ದು, ದೇವಿಗೆ ಪೂಜೆ ಮಾಡುವವರೆಲ್ಲ ದಿನಕ್ಕೆ ಎರಡು ಸಲ ಸ್ನಾನ ಮಾಡಿ ಒಪ್ಪತ್ತು ಇರಬೇಕು. ಮೊಗಲಹಳ್ಳಿಯ ಪೂಜಾರಿಗಳು ತಣ್ಣೀರಿನಲ್ಲಿ ಸ್ನಾನ ಮಾಡಿ ಉಪವಾಸ ವ್ರತಾಚರಣೆಯೊಂದಿಗೆ ಗೋಧಿ, ಕಡಲೆ, ಉದ್ದಿನಬೇಳೆ ಹಿಟ್ಟು, ಅರಿಶಿಣಪುಡಿ, ಹಸುವಿನ ಹಸಿಹಾಲಿನ ಮಿಶ್ರಣದಿಂದ ಒಂದುವರೆ ಅಡಿ ಎತ್ತರದ ಗೌರಿದೇವಿ ಮೂರ್ತಿ ತಯಾರಿಸುತ್ತಾರೆ. ಆ ಮೂರ್ತಿಯನ್ನು ಹೊಸ ಮೊರದ ಮಂಟಪದ ಮೇಲೆ ಕೂರಿಸುತ್ತಾರೆ. ಮಹಿಳೆಯರು ಪೂಜಾಕಾರ್ಯ ಕೈಗೊಳ್ಳುತ್ತಾರೆ. ಯುವತಿಯರು, ಕಂಕಣ ಬಲ ಬಹುಬೇಗ ಕೂಡಿ ಬರಲೆಂದು ಬೆಳಗಿನ ಜಾವ ಚಳಿಯಲ್ಲಿ ದೇವಿಯ ಉತ್ಸವಮೂರ್ತಿ ಮುಂದೆ ದಿಂಡುರುಳು ಹಾಕಿ ಆರತಿ ಸೇವೆ ಮಾಡುತ್ತಾರೆ ಎಂದು ಸ್ಥಳೀಯರು ತಿಳಿಸಿದರು.

ಗ್ರಾಮದ ಹೆಣ್ಣುಮಕ್ಕಳು ದೇವಿ ಬಗೆಗಿನ ಜನಪದ ಹಾಡುಗಳನ್ನು ಹಾಡುತ್ತಾರೆ. ನಂದಿಕೋಲು, ಕೀಲುಕುದುರೆ, ಭಜನೆ, ಕೋಲಾಟ, ಉರುಮೆ, ತಮಟೆ ಮುಂತಾದ ಜನಪದ ವಾದ್ಯಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ದೇವಿ ಉತ್ಸವಮೂರ್ತಿಯ ಮೆರವಣಿಗೆ ನಡೆಸಿ ನಂತರ ದೇವಿಯನ್ನು ನೀರಿಗೆ ಸಾಗಾಕುತ್ತಾರೆ.

ಈ ಜಾತ್ರೆ ನಂತರ ತಾಲ್ಲೂಕಿನ ಘಟಪರ್ತಿ, ಬಾಲೇನಹಳ್ಳಿ, ತಿಪ್ಪಾರೆಡ್ಡಿಹಳ್ಳಿ, ಮೀರಾಸಾಬಿಹಳ್ಳಿ, ಗಿರಿಯಮ್ಮನಹಳ್ಳಿ, ಕರಿಕೆರೆ, ರಂಗವ್ವನಹಳ್ಳಿ ಸೇರಿ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಡೆಯುತ್ತದೆ. ದೊಡ್ಡೇರಿ ಗ್ರಾಮದ ಗೌರಿದೇವಿ ಆಚರಣೆಯೊಂದಿಗೆ ಈ ಜಾತ್ರೆ ಅಂತ್ಯಗೊಳ್ಳುತ್ತದೆ.

ಗೌರಿದೇವಿ ಮೂರ್ತಿ
ಗೌರಿದೇವಿ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT