ಸರ್ಕಾರಿ ಶಾಲೆ ಪ್ರವೇಶಕ್ಕೆ ಪೋಷಕರ ಪೈಪೋಟಿ

7
300ರ ಗಡಿ ದಾಟಿದ ವಿದ್ಯಾರ್ಥಿಗಳ ಸಂಖ್ಯೆ: ಕಳೆದ ವರ್ಷಕ್ಕಿಂತ ಹೆಚ್ಚು ದಾಖಲಾತಿ

ಸರ್ಕಾರಿ ಶಾಲೆ ಪ್ರವೇಶಕ್ಕೆ ಪೋಷಕರ ಪೈಪೋಟಿ

Published:
Updated:
ಹೊಳಲ್ಕೆರೆಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಹೊಳಲ್ಕೆರೆ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಪೋಷಕರೇ ಹೆಚ್ಚಿರುವ ಈ ಕಾಲದಲ್ಲೂ ಇಲ್ಲೊಂದು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಲು ಪೋಷಕರು ಪೈಪೋಟಿ ನಡೆಸುತ್ತಿದ್ದಾರೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಮಕ್ಕಳ ದಾಖಲಾತಿ 300ರ ಗಡಿ ದಾಟಿದೆ. ಕಳೆದ ವರ್ಷ 283 ವಿದ್ಯಾರ್ಥಿಗಳ ಶಾಲೆಗೆ ದಾಖಲಾಗಿದ್ದರೆ, ಈ ಬಾರಿ 310 ವಿದ್ಯಾರ್ಥಿಗಳು ದಾಖಲಾಗಿದ್ದು, ಇನ್ನೂ 20 ವಿದ್ಯಾರ್ಥಿಗಳ ವರ್ಗಾವಣೆ ಪತ್ರಗಳು ಬರಬೇಕಿದೆ.

ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಕನ್ನಡ ಮಾಧ್ಯಮ, ಆರು ಮತ್ತು ಏಳನೇ ತರಗತಿಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ತರಗತಿಗಳಿವೆ. ಆರು ಮತ್ತು ಏಳನೇ ತರಗತಿಯ ಇಂಗ್ಲಿಷ್ ಮಾಧ್ಯಮದಲ್ಲಿ 3 ವಿಭಾಗಗಳನ್ನು ಮಾಡಲಾಗಿದೆ. ನಲಿ ಕಲಿಯಲ್ಲಿ 60 ವಿದ್ಯಾರ್ಥಿಗಳಿದ್ದು, ಎರಡು ವಿಭಾಗಗಳಲ್ಲಿ ತರಗತಿಗಳು ನಡೆಯುತ್ತಿವೆ. ಒಟ್ಟು 9 ವಿಭಾಗಗಳಲ್ಲಿ ತರಗತಿಗಳು ನಡೆಯುತ್ತಿದ್ದು, 16 ಕೊಠಡಿಗಳು, 9 ಶಿಕ್ಷಕರಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚು:

ತಾಲ್ಲೂಕಿನ ಸುಮಾರು 40ಕಿ.ಮೀ. ದೂರದ ಹಳ್ಳಿಗಳಿಂದಲೂ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ. ಗಡಿ ಗ್ರಾಮಗಳಾದ ತೇಕಲವಟ್ಟಿ, ಉಪ್ಪರಿಗೇನಹಳ್ಳಿ, ಕಣಿವೆಜೋಗಿ ಹಳ್ಳಿಯಿಂದ ಹಿಡಿದು, ನೆಹರೂ ಕಾಲೋನಿ, ಚೀರನಹಳ್ಳಿ, ಟಿ. ಎಮ್ಮಿಗನೂರು, ಶಿವಲಿಂಗಪ್ಪನಗರ, ಅರೇಹಳ್ಳಿ, ಬೊಮ್ಮನಕಟ್ಟೆ ಮತ್ತಿತರ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಹಾಗೂ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿದೆ.

ಸ್ಮಾರ್ಟ್ ಕ್ಲಾಸ್ ಸೌಲಭ್ಯ

ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದ್ದು, ಬೋಧನೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ‘ನಮ್ಮ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ, ಇಂಗ್ಲಿಷ್ ಕಾರ್ನರ್ ಸೌಲಭ್ಯಗಳಿವೆ. ವಿಜ್ಞಾನ ವಸ್ತುಪ್ರದರ್ಶನದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಕ್ರೀಡೆ, ಸಹಪಠ್ಯ ಚಟುವಟಿಕೆಗಳಿಗೂ ಹೆಚ್ಚು ಆದ್ಯತೆ ನೀಡಿದ್ದು, ಪ್ರತಿ ಸ್ಪರ್ಧೆಯಲ್ಲಿ ನಮ್ಮ ವಿದ್ಯಾರ್ಥಿಗಳು ಹೆಚ್ಚು ಬಹುಮಾನ ಪಡೆಯುತ್ತಾರೆ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಗಾಯತ್ರಮ್ಮ, ಸಹ ಶಿಕ್ಷಕರಾದ ಜಬೀವುಲ್ಲಾ, ರುದ್ರಪ್ಪ, ರುಕ್ಮಿಣಮ್ಮ, ಶಾರದಮ್ಮ, ಭಾಗ್ಯವತಿ, ರೂಪಾ, ನಾಗರತ್ನಮ್ಮ, ಜ್ಞಾನಮೂರ್ತಿ ಹಾಗೂ ಜಗನ್ನಾಥ್.

‘ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಆಟದ ಮೈದಾನದ ಕೊರತೆ ಇದೆ. ಶಾಲೆಯ ಮುಂದೆ ಹಳೆಯ ಕಟ್ಟಡವಿದ್ದು, ಅದನ್ನು ನೆಲಸಮಗೊಳಿಸಿ ಬಸ್ ನಿಲ್ದಾಣದ ಮುಂದೆ ದೊಡ್ಡ ಕಾಂಪೌಂಡ್ ನಿರ್ಮಿಸಿದರೆ ಹೆಚ್ಚು ಜಾಗ ಸಿಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ನಿರ್ಮಿಸಬೇಕು’ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚು ಬೇಡಿಕೆ ಇದೆ. ಈ ಶಾಲೆಯ ದಾಖಲಾತಿಯು ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎನ್ನುವುದನ್ನು ತೋರಿಸುತ್ತದೆ
- ಜಗದೀಶ್ವರ, ಬಿಇಒ

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿವೆ. ಶಿಕ್ಷಕರ ಸಂಘಟಿತ ಪ್ರಯತ್ನದಿಂದ ಶಾಲೆಯ ಮಕ್ಕಳ ಸಂಖ್ಯೆ ಹೆಚ್ಚಿದೆ
- ಬನಿಹಾಷಂ, ಸಿ.ಆರ್.ಪಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !