ನೀರಾವರಿ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ನಂಜಾವಧೂತ ಸ್ವಾಮೀಜಿ ಆಗ್ರಹ

7

ನೀರಾವರಿ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ನಂಜಾವಧೂತ ಸ್ವಾಮೀಜಿ ಆಗ್ರಹ

Published:
Updated:
Deccan Herald

ಹಿರಿಯೂರು: ‘ಮಳೆಯ ಕಣ್ಣಾಮುಚ್ಚಾಲೆ, ಬತ್ತಿ ಹೋಗಿರುವ ಕೊಳವೆ ಬಾವಿಗಳಿಂದ ಬಯಲು ಸೀಮೆಯ ಜನರ ಬದುಕು ಹೈರಾಣಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ನೀರಾವರಿ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಬೇಕು’ ಎಂದು ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ರೈತ ಮುಖಂಡರ ಜತೆ ಅವರು ಚರ್ಚೆ ನಡೆಸಿದರು.

ನೀರಾವರಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬರುವ ರಾಜಕಾರಣಿಗಳು ರಾಜಕೀಯ ಕೆಸರೆರಚಾಟ ಬಿಟ್ಟು ತಮ್ಮ ಭರವಸೆಯನ್ನು ಈಡೇರಿಸುವ ದಿಕ್ಕಿನಲ್ಲಿ ಬದ್ಧತೆ ತೋರಿಸಬೇಕು. ವಿಶೇಷವಾಗಿ ರೈತರನ್ನು ಉಳಿಸುವ ಜತೆಗೆ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸತತ ಬರದಿಂದ ಹಿರಿಯೂರು, ಚಳ್ಳಕೆರೆ, ಸಿರಾ, ಪಾವಗಡ ಸೇರಿ ಬಯಲು ಸೀಮೆಯ ಹಲವು ತಾಲ್ಲೂಕುಗಳ ರೈತರು ಹನಿ ನೀರಿಗೂ ಪರದಾಡುತ್ತಿದ್ದಾರೆ. ಅಲ್ಪಸ್ವಲ್ಪ ನೀರಿನಲ್ಲಿ ಕೃಷಿಯನ್ನು ಉಳಿಸಿಕೊಂಡಿರುವ ರೈತರಿಗೆ ನೀರಿನ ಅಗತ್ಯವಿದೆ. ಭದ್ರಾ ಮೇಲ್ದಂಡೆ, ನೇತ್ರಾವತಿ ತಿರುವು ಯಾವುದಾದರೂ ಸರಿ ಅನ್ನದಾತರನ್ನು ಉಳಿಸಲು ಶಾಶ್ವತ ನೀರಾವರಿ ಯೋಜನೆ ಜಾರಿ ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟರು.

‘ಈ ವರ್ಷ ವಾಣಿ ವಿಲಾಸ ಜಲಾಶಯಕ್ಕೆ ಕೇವಲ ಆರು ಅಡಿ ನೀರು ಬಂದಿದ್ದು, ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ನಗರಗಳ ಜನರಿಗೆ ಈ ನೀರು ಕುಡಿಯಲು ಸಾಕಾಗುತ್ತದೆ. ಅಚ್ಚುಕಟ್ಟು ಪ್ರದೇಶದ ರೈತರು ಹಿಂದಿನ ವರ್ಷಕ್ಕಿಂತ ಹೆಚ್ಚು ಸಂಕಷ್ಟಕ್ಕೆ ಒಳಗಾಗುವ ಅಪಾಯವಿದೆ. 12 ಸಾವಿರ ಎಕರೆ ತೆಂಗು, ಅಷ್ಟೇ ಪ್ರಮಾಣದಲ್ಲಿ ಅಡಿಕೆ ಬೆಳೆ ಒಣಗಿದ್ದು, ತಕ್ಷಣಕ್ಕೆ ಬೆಳೆಗಾರರಿಗೆ ಪರಿಹಾರ ಕೊಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ರೈತಸಂಘದ ಅಧ್ಯಕ್ಷ ಹೊರಕೇರಪ್ಪ ಸ್ವಾಮೀಜಿಗೆ ಮನವಿ ಮಾಡಿದರು.

ಸಭೆಯಲ್ಲಿ ಸಂಘದ ಕಾರ್ಯಾಧ್ಯಕ್ಷ ಸಿ. ಸಿದ್ಧರಾಮಣ್ಣ, ಜೆ.ಡಿ.ಎಸ್. ಮುಖಂಡ ಎ. ಪಾಂಡುರಂಗ, ಕಂದಿಕೆರೆ ರಂಗನಾಥ್, ಅವಿನಾಶ್, ಶಿವಣ್ಣ, ರಾಮಕೃಷ್ಣ, ಮಹೇಶ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !